ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಇನ್ಮುಂದೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕೇಸರಿ ಶಾಲು ಹಾಗೂ ತ್ರಿಶೂಲವನ್ನು ನೀಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ರಮೇಶ್ ಬಾಬು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರವು -2022ರ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದಿದೆ. ಸರ್ಕಾರ ಈ ರೀತಿ ಕಾನೂನು ಬದಲಾವಣೆ ಮಾಡುವುದರಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ನಮ್ಮ ಧರ್ಮದಲ್ಲಿ ಗುರುಕುಲ ಇದ್ದ ಕಾಲದಿಂದಲೂ ಸಹ ಸಮವಸ್ತ್ರ ಪದ್ಧತಿ ಜಾರಿಯಲ್ಲಿತ್ತು. ಬ್ರಿಟಿಷರು ಸಹ ಅದನ್ನೇ ಪಾಲನೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರವು ಎಲ್ಲವನ್ನೂ ತಿರುಚಿ, ಒಂದು ಧರ್ಮವನ್ನು ಓಲೈಸಲು ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಏಕೆ ಈ ರೀತಿ ಮಕ್ಕಳಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆಯೋ ತಿಳಿಯುತ್ತಿಲ್ಲ. ಹಿಜಾಬ್‌ಗೆ ಅನುಮತಿ ನೀಡಿದ್ದಾರೆ ಎಂದಾದರೆ, ನಾವು ಸಹ ಇನ್ಮುಂದೆ ಜನಿವಾರವನ್ನು ಒಳಭಾಗದಲ್ಲಿ ಧರಿಸುವುದಕ್ಕಿಂತ ಮೇಲ್ಭಾಗದಲ್ಲಿ ಹಾಕಿಕೊಂಡು ಬರುತ್ತೇವೆ. ಅಷ್ಟೇ ಅಲ್ಲದೆ, ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸುತ್ತೇವೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ತ್ರಿಶೂಲಗಳನ್ನು ಸಹ ನೀಡಿ, ವಿದ್ಯಾರ್ಥಿಗಳನ್ನು ತ್ರಿಶೂಲಧಾರಿಗಳನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿದೆ. ಅಲ್ಲಿಯೂ ಕೇಸರಿ ಶಾಲು, ತ್ರಿಶೂಲ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಜಾವ್ ಅಲ್ಲಿ ಅವಕಾಶವಿದ್ದರೆ ಅಲ್ಲಿಯೂ ನೀಡುತ್ತೇವೆ. ಪ್ರತಿಭಟನೆ ಮಾಡುತ್ತೇವೆ ಎಂದರು.


ಈ ಸಂದರ್ಭದಲ್ಲಿ ಪ್ರಮುಖರಾದ ವಡಿವೇಲು ರಾಘವನ್, ಅಂಕುಶ್, ಶಕುಂತಲಾ, ಯೋಗೀಶ್ ನಾಯಕ್ ಮೊದಲಾದವರು ಇದ್ದರು. ಉತ್ತರ ನೀಡಲು ತಡಬಡಾಯಿಸಿದ ರಮೇಶ್‌

ನೀಟ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ವಿಶ್ವ ಹಿಂದೂ ಪರಿಷದ್ ಪ್ರಮುಖರಾದ ರಮೇಶ್ ಬಾಬು ತಡಬಡಾಯಿಸಿದರು.

ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ, ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಬಾಬು, ಅಕ್ರಮ ನಡೆದಿದೆ. ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಹಾರಿಕೆ ಉತ್ತರ ನೀಡಿದರು. ಇಷ್ಟಕ್ಕೆ ಸುಮ್ಮನಾಗದ ಪತ್ರಕರ್ತರು, ಹಿಜಾಬ್ ವಿಚಾರವಾಗಿ ಸರ್ಕಾರ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎನ್ನುತ್ತಿದ್ದೀರಿ. ಮಕ್ಕಳಿಗೆ ತ್ರಿಶೂಲ ನೀಡುತ್ತೇವೆ ಎನ್ನುವ ಹೇಳಿಕೆ ನೀಡುತ್ತಿದ್ದೀರಿ. ನೀಟ್ ಅಕ್ರಮದ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಏಕೆ ಯೋಚನೆ ಮಾಡುತ್ತಿಲ್ಲ. ಸರ್ಕಾರದ ನಡೆಯನ್ನು ಏಕೆ ಖಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖಂಡರು, ನೀಟ್ ಪರೀಕ್ಷೆಯ ಅಕ್ರಮದಲ್ಲಿ ಯಾರೇ ಭಾಗಿಯಾದರೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.