ಸಾರಾಂಶ
ರಾಮನಗರ: ಮುಡಾ ಹಗರಣದಲ್ಲಿ ಇಡಿ ಕೇಸು ದಾಖಲಾಗುತ್ತಿದ್ದಂತೆ ಕುರ್ಚಿ ಉಳಿಸಿಕೊಳ್ಳಲು ಸಾಹಸಪಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ನಿವೇಶನಗಳನ್ನು ಹಿಂತಿರುಗಿಸುವ ಹೊಸ ನಾಟಕ ಶುರು ಮಾಡಿದ್ದಾರೆ. ಅವರಿಗೆ ನ್ಯಾಯಾಂಗ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣ ಕುರ್ಚಿ ಬಿಟ್ಟು ಇಳಿಯಲಿ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸವಾಲು ಹಾಕಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಾಯುಕ್ತ ಮತ್ತು ಇಡಿ ತನಿಖೆಗೆ ಹೆದರಿ ಮುಖ್ಯಮಂತ್ರಿಗಳ ಪತ್ನಿಯವರು ನಿವೇಶನ ವಾಪಸ್ ನೀಡಿದ್ದಾರೆ. ತನಿಖೆ ಪ್ರಾರಂಭವಾದರೆ ನಿಮ್ಮದೇ ಕೈಕೆಳಗಿನ ಅಧಿಕಾರಿಗಳ ಎದುರುಗಡೆ ಕೈಕಟ್ಟಿ ಕೂರುವ ಪರಿಸ್ಥಿತಿ ಬರುತ್ತದೆ ಎಂದು ಹೆದರಿರಬೇಕು ಎಂದು ಲೇವಡಿ ಮಾಡಿದ್ದಾರೆ.ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಕಪ್ಪುಚುಕ್ಕಿ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯನವರು ಲೋಕಾಯುಕ್ತಕ್ಕೆ ಬೀಗ ಜಡಿದವರು. ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವ ಎಸಿಬಿಯನ್ನು ನೇಮಕ ಮಾಡಿಕೊಂಡವರು. ರೀಡೋ ಪ್ರಕರಣದಲ್ಲಿ ಕೆಂಪಣ್ಣ ಆಯೋಗ ರಚನೆ ಮಾಡಿದ್ದು, ಏತಕ್ಕಾಗಿ ಸಿದ್ದರಾಮಯ್ಯನವರೇ ? ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರು. ಅವ್ಯವಹಾರ ನಡೆದಿದೆ. ಹೊರರಾಜ್ಯಗಳಲ್ಲಿ ಅವ್ಯವಹಾರ ನಡೆದ್ದು, ತಮ್ಮ ಅವಧಿಯಲ್ಲಿ ಅಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮಾಡಿದ್ದಾರೆ.ಮುಡಾ ಹಗರಣ ತಮ್ಮ ಅವಧಿಯಲ್ಲೇ ನಡೆದಿದೆ. ದಲಿತರ ಜಾಗ ಕಬಳಿಸಿ ನನ್ನ 14 ನಿವೇಶನಗಳ ಜಾಗ 60 ಕೋಟಿಗೂ ಹೆಚ್ಚು ಬೆಲೆಬಾಳುತ್ತದೆ ಎಂದು ಹೇಳಿದ್ದೀರಿ. ಈಗ ನಿಮ್ಮ ಶ್ರೀಮತಿಯವರು ಜಾಗ ವಾಪಸ್ ಕೊಡುತ್ತಿದ್ದಾರೆ. ಹಾಗಿದ್ದ ಮೇಲೆ 60 ಕೋಟಿಗೂ ಹೆಚ್ಚು ಹಣವನ್ನು ಯಾರು ನಿಮಗೆ ಕೊಟ್ಟಿದ್ದಾರೆ ? ಇದಕ್ಕೆ ಕೂಡಲೇ ಉತ್ತರಿಸಬೇಕು. ಕುಂಬಳಕಾಯಿ ಕಳ್ಳ, ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಾಗಿದೆ ಎಂದಿದ್ದಾರೆ.ಸಿದ್ದರಾಮಯ್ಯನವರು ಹಿಂದಿನ ಆಡಳಿತಾವಧಿಯಲ್ಲಿ ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿ ಹಗರಣಗಳನ್ನು ಮುಚ್ಚಿ ಹಾಕಿದವರು. ಈ ಬಾರಿ ಅದೇ ಕಾರಣಕ್ಕೆ ಪ್ರತಿ ಪ್ರಕರಣದಲ್ಲೂ ಎಸ್ಐಟಿ ರಚನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ಇದ್ದ ಅವಕಾಶ ರದ್ದು. ರಾಜ್ಯಪಾಲರ ಪತ್ರಕ್ಕೆ ಮುಖ್ಯ ಕಾರ್ಯದರ್ಶಿಗಳು ನೇರ ಉತ್ತರಿಸಬಾರದೆಂಬ ನಿರ್ಬಂಧಗಳನ್ನು ವಿಧಿಸಿದ್ದು ಆತಂಕ ಹೊರಹಾಕುವಂತಿದೆ ಎಂದು ಹೇಳಿದ್ದಾರೆ. ಮುಡಾ ಹಗರಣದಲ್ಲಿ ಬಚಾವ್ ಆಗಲು ಯತ್ನಿಸುತ್ತಿರುವ ಮುಖ್ಯಮಂತ್ರಿಗಳು, 14 ಸೈಟ್ ಹಿಂತಿರುಗಿಸಿ ಮಿಸ್ಟರ್ ಕ್ಲೀನ್ ಆಗುವ ಅವರ ಯತ್ನ ಫಲಿಸುವುದಿಲ್ಲ. ರಾಜೀನಾಮೆ ಕೊಡುವುದು ಮಾತ್ರವಲ್ಲ, ಪ್ರಕರಣವು ಸಾವಿರಾರು ಕೋಟಿಯದ್ದಾದ ಕಾರಣ, ಸಾವಿರಾರು ನಿವೇಶನ ಆಕಾಂಕ್ಷಿಗಳಿಗೆ ವಂಚಿಸಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯೇ ಸೂಕ್ತ ಎಂದು ಆಗ್ರಹಿಸಿದ್ದಾರೆ.ಈ ಬಾರಿಯ ರಾಜ್ಯದ ಕಾಂಗ್ರೆಸ್ ಆಡಳಿತಾವಧಿ ವೈಫಲ್ಯಗಳ ಸರಮಾಲೆಯಂತಿದೆ. ಕಾನೂನು- ಸುವ್ಯವಸ್ಥೆ ಕುಸಿತ, ರೈತರ ಆತ್ಮಹತ್ಯೆ, ಶೂನ್ಯ ಅಭಿವೃದ್ಧಿಗೆ ಈ ಸರ್ಕಾರ ಸಾಕ್ಷಿ. ಇದು ಹಿಂದೂ ವಿರೋಧಿ, ರೈತರ ವಿರೋಧಿ, ದಲಿತರ ವಿರೋಧಿ ಅಷ್ಟೇ ಏಕೆ ಜನವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.