ಅಶಶುಚಿತ್ವ ಕಂಡರೆ ಆರೋಗ್ಯ ನಿರೀಕ್ಷಕರ ಮೇಲೂ ದೂರು

| Published : Jul 23 2025, 01:46 AM IST

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ರಸ್ತೆಯ ಬದಿಯ ಗೂಡಂಗಡಿ, ಹೋಟೆಲ್ ಸೇರಿದಂತೆ ಆಹಾರ ಮಾರಾಟ ಅಂಗಡಿಗಳಲ್ಲಿ ಶುಚಿತ್ವದ ಕೊರತೆ ಕಂಡುಬಂದರೆ ಸಂಬಂಧ ಪಟ್ಟ ಆರೋಗ್ಯ ನಿರೀಕ್ಷಕರ ವಿರುದ್ಧವೂ ದೂರು ದಾಖಲಿಸುವಂತೆ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರಿದ ಜಿಲ್ಲಾ ಅಂಕಿತಾಧಿಕಾರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳಪೆ ಹಾಗೂ ಕಲಬೆರಿಕೆ ಆಹಾರ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೋಟೆಲ್‌ಗಳು ಅಷ್ಟೇ ಅಲ್ಲದೇ, ಪ್ಯಾಕೇಜಿಂಗ್ ಆಹಾರ ತಯಾರಿಕಾ ಘಟಕಗಳಲ್ಲಿಯೂ ಶುಚಿತ್ವ ಹಾಗೂ ಗುಣಮಟ್ಟದ ಕೊರತೆ ಕಂಡು ಬರುತ್ತಿದೆ. ನಗರಗಳಲ್ಲಿ ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಗೂಡಂಗಡಿಗಳು ತಲೆ ಎತ್ತುತ್ತಿವೆ. ಆರೋಗ್ಯ ನಿರೀಕ್ಷಕರು ಇಂತಹ ಅಂಗಡಿಗಳಿಗೆ ಭೇಟಿ ನೀಡಿ, ಶುಚಿತ್ವ ಪರಿಶೀಲಿಸಿ, ದಂಡ ವಿಧಿಸಿದ್ದೀರಾ? ಎಂದು ಪ್ರಶ್ನಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಅನುಮತಿ ಇರದಿದ್ದರೂ ಜಿಲ್ಲಾಸ್ಪತ್ರೆಯ ಎದುರಿನ ಗೂಡಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ತರಕಾರಿ, ಪ್ರಾವಿಜನ್ ಸ್ಟೋರ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇವುಗಳನ್ನು ತಡೆಗಟ್ಟಬೇಕಾದ ಆರೋಗ್ಯ ನಿರೀಕ್ಷಕರು ಕಣ್ಮುಚ್ಚಿ ಕುಳಿತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ತಪಾಸಣೆ ವೇಳೆ ಹೋಟೆಲ್ ಹಾಗೂ ಗೂಡಂಗಡಿಗಳಲ್ಲಿ ಶುಚಿತ್ವ ಇಲ್ಲದಿರುವುದು ಕಂಡು ಬಂದರೆ ಮಾಲೀಕರನ್ನು ಮೊದಲ ಹಾಗೂ ಆರೋಗ್ಯ ನಿರೀಕ್ಷಕರನ್ನು 2ನೇ ದೋಷಿಯನ್ನಾಗಿ ದೂರು ದಾಖಲಿಸಬೇಕು. ಆಹಾರ ಸುರಕ್ಷತಾ ಕಾಯ್ದೆಯಡಿ ಮಾಲಿಕರ ಜತೆಗೆ ಆರೋಗ್ಯ ನಿರೀಕ್ಷಕರಿಗೂ ಲಕ್ಷದ ವರೆಗೂ ದಂಡ ವಿಧಿಸಲಾಗುವುದು. ಎಚ್ಚೆತ್ತು ಕೊಳ್ಳದಿದ್ದರೆ ಇಲಾಖೆ ವಿಚಾರಣೆ ಹಾಗೂ ಅಮಾನತಿಗೂ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

*ಅಂಕಿ ಅಂಶಗಳ ಸಂಗ್ರಹಕ್ಕೆ ನಿರ್ದೇಶನ:

ಅನುಮತಿ ಪಡೆದ ಹಾಗೂ ಅನುಮತಿ ಪಡೆಯದ ಅಂಗಡಿ, ಹೋಟೆಲ್, ಬೇಕರಿ, ಸಿದ್ದ ಆಹಾರ ತಯಾರಕ ಉದ್ದಿಮೆ, ಶುದ್ಧ ಕುಡಿಯುವ ನೀರು ಸರಬರಾಜು ಘಟಗಳು ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಪರವಾನಿಗೆ ನವೀಕರಣವಾಗಿದೇ ಎಂಬುದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು. ಇದೇ ವೇಳೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ಯಾಕೇಜ್ ಡ್ರಿಂಕಿಗ್ ವಾಟರ್‌ನ ರಾಸಾಯನಿಕ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಅನುಮತಿ ನೀಡಿದ ಪ್ರಾಣಿ ವಧಾಲಯ, ಚಿಕನ್, ಮಟನ್ ಹಾಗೂ ಮೀನು ಮಾರಾಟ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಲಾಗಿದೆಯೇ, ಜೈವಿಕ ತಾಜ್ಯಗಳನ್ನು ನಿಯಮಾನುಸಾರ ವಿಲೇವಾರಿ ಮಾಡುತ್ತಿದ್ದಾರೆಯೇ ಎಂಬುದನ್ನು ಆರೋಗ್ಯ ನಿರೀಕ್ಷಕರು ಪರಿಶೀಲಿಸಬೇಕು. ಬಸ್ ಸ್ಟಾಂಡ್‌ ಹಾಗೂ ಬೇಕರಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ನೀರು, ಹಾಲು, ಮೊಸರು, ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಾರೆ. ಹೂವಿನ ಮಾರುಕಟ್ಟೆಯಲ್ಲಿ ಸರಿಯಾದ ರೀತಿಯಲ್ಲಿ ಅಳತೆ ಮಾಡದೆ ರೈತರಿಗೆ ಮೋಸವಾಗುತ್ತಿದೆ. ತೂಕ, ತಯಾರಿಕ ದಿನಾಂಕ ಹಾಗೂ ದರಗಳ ಕುರಿತು ಅಳತೆ ಮತ್ತು ಕಾನೂನು ಮಾಪನ ಶಾಸ್ತç ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಒಂದು ವೇಳೆ ಸ್ವತಃ ದಾಳಿ ನಡೆಸಿದ ಸಂದರ್ಭದಲ್ಲಿ ತಪ್ಪುಗಳು ಕಂಡುಬಂದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

*ಜಂಟಿ ಕಾರ್ಯಾಚರಣೆ ಸೂಚನೆ:

ಆಹಾರ ಸುರಕ್ಷತಾ ಅಧಿಕಾರಿಗಳು, ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ವಾಟ್ಸ್‌ಪ್‌ ಗ್ರೂಪ್ ರಚಿಸಿ, ಸಂಬಂಧ ಪಟ್ಟವರನ್ನು ಸೇರಿಸಬೇಕು. ಪ್ರತಿದಿನವು ಅಧಿಕಾರಿಗಳು ಸಮನ್ವಯದೊಂದಿಗೆ ದಾಳಿ ನಡೆಸಬೇಕು. ಶುಚಿತ್ವ, ಗುಣಮಟ್ಟ, ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು. ಪ್ರತಿ ತಿಂಗಳು ಸಭೆ ನಡೆಸಿ ದಾಳಿಗಳ ಬಗ್ಗೆ ಮಾಹಿತಿ ಪಡೆಯುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ಅಂಕಿತಾಧಿಕಾರಿ ಡಾ.ರಾಜಶೇಖರ್ ಪಾಳೆದವರ್, ತಾಲೂಕು ಮಟ್ಟದ ಆಹಾರ ಸುರಕ್ಷತಾಧಿಕಾರಿಗಳಾದ ಮಂಜನಾಥ.ಕೆ.ಒ ಹಾಗೂ ನಾಗೇಶ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಕೆ.ಚನ್ನಬಸಪ್ಪ, ನಗರ ಸಭೆ ಆರೋಗ್ಯ ನಿರೀಕ್ಷರುಗಳಾದ ರುಕ್ಮುಣಿ, ಭಾರತಿ.ಕೆ.ವಿ, ಹೀನಾ ಕೌಸರ್ ಸೇರಿದಂತೆ ಮತ್ತಿರರು ಇದ್ದರು.