ಬದುಕುವ ಆಸೆ ಇದ್ದರೆ ಮರಗಿಡ ಬೆಳೆಸಿ: ವೀರೇಶಪ್ಪ

| Published : Jun 13 2024, 12:53 AM IST

ಸಾರಾಂಶ

ಕಿಕ್ಕೇರಿ ಸಮೀಪದ ಮಾಕವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಿಕ್ಕೇರಿ: ಭೂಮಿ ಮೇಲೆ ಆರೋಗ್ಯಕರ ಬದುಕು ಸಾಗಿಸಲು ಪ್ರತಿಯೊಬ್ಬರು ಮರಗಿಡ ಬೆಳೆಸಲು ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ಹೇಳಿದರು.ಮಾಕವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವರಾಶಿ ಬದುಕಲು ಪಂಚಭೂತಗಳ ಅವಶ್ಯವಿದೆ. ಇವುಗಳನ್ನು ಮಾಲಿನ್ಯ ಮಾಡಿದರೆ ಸರ್ವನಾಶ ಖಚಿತ ಎಂದು ಎಚ್ಚರಿಸಿದರು.

ಮರಗಿಡ ಹನನದಿಂದ ಪರಿಸರ, ವಾಯ ಮಾಲಿನ್ಯವಾಗಿ ಕೋವಿಡ್ ವೇಳೆ ಶುದ್ಧ ಗಾಳಿ ಇಲ್ಲದೆ ಉಸಿರಾಡಲಾರದೆ ಲಕ್ಷಾಂತರ ಮಂದಿ ಮೃತರಾಗಿದ್ದಾರೆ. ಇದು ನಮಗೆ ಎಚ್ಚರಿಕೆ ಪಾಠವಾಗಿದೆ. ಸಮುದಾಯ ಒಂದಾಗಿ ಮರಗಿಡ ಬೆಳೆಸಿ ಉಳಿಸಿದರೆ ಮಾತ್ರ ಬದುಕಲು ಸಾಧ್ಯ ಎಂದರು. ಹಣಕ್ಕೆ ಸಿಗಲಾರದು ಅಮೂಲ್ಯ ಜೀವವಸ್ತುವನ್ನು ಪಡೆಯಲು ಮನೆಗೊಂದು ಮರ ಎನ್ನುವ ಪ್ರತಿಜ್ಞೆ ಮಾಡೋಣ. ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಿ ಪ್ರಬಂಧ, ಚಿತ್ರಕಲಾ ಸ್ಪರ್ಧೆಯಂತಹ ಕಾರ್ಯಕ್ರಮ ರೂಪಿಸಬೇಕು ಇದಕ್ಕೆ ಸಂಸ್ಥೆಯ ಸಹಕಾರವಿದೆ ಎಂದು ತಿಳಿಸಿದರು.

ಕಾಂಕ್ರೀಟ್‌ ಕಾಡಿನಿಂದ ಮಳೆಗಾಲವೇ ಬದಲಾಗುತ್ತಿದೆ. ಜಲಮೂಲದ ಜಾಡು ಬದಲಾಗುತ್ತಿದೆ. ಎಲ್ಲವನ್ನು ತಪ್ಪಿಸಲು ರಸ್ತೆ ಬದಿ, ಜಮೀನು, ಗೋಮಾಳ, ಗುಂಡುತೋಪು, ಖಾಲಿ ಜಾಗಗಲ್ಲಿ ಮರಗಿಡ ಬೆಳೆಸಬೇಕು. ಅರಣ್ಯ, ಗುಡ್ಡಗಾಡಿನಲ್ಲಿ ಸೀಡ್‌ಬಾಲ್ ಬಿತ್ತಬೇಕು. ಸಂಸ್ಥೆ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ ಲಾಯಪ್ಪ ಮಾತನಾಡಿದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪರಿಸರ ಶಿಕ್ಷಕ ಹೇಮಂತ್‌ ಕುಮಾರ್, ಚಿತ್ರಕಲಾ ಶಿಕ್ಷಕ ಪರಮೇಶ್, ವಲಯ ಮೇಲ್ವಿಚಾರಕ ಪ್ರವೀಣ್, ಸೇವಾ ಪ್ರತಿನಿಧಿ ಶೋಭಾ, ಶಿಕ್ಷಕ ಮಂಜುನಾಥ್, ಹೇಮಂತಕುಮಾರ್, ರಮೇಶ್, ವೇದಾವತಿ, ರೂಪಾ ಉಪಸ್ಥಿತರಿದ್ದರು.