ಕನ್ನಡಪ್ರಭ ವಾರ್ತೆ ಮಂಡ್ಯ

ಕಾನೂನು ಬದ್ಧವಾಗಿ ಕೆಲಸ ಮಾಡಿದರೆ ನಾನೇ ತಲೆಬಾಗುತ್ತೇನೆ. ಅದು ಬಿಟ್ಟು ಕಾನೂನು ಮೀರಿ ಕೆಲಸ ಮಾಡಿದರೆ ಭ್ರಷ್ಟರನ್ನು ಬಿಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಕೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 2ನೇ ದಿನ ಮಂಡ್ಯ ತಾಲೂಕಿನ ಬಾಕಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಲ್ಲೂ ಒಳ್ಳೆಯ ಅಧಿಕಾರಿಗಳಿದ್ದಾರೆ. ಅತ್ಯುತ್ತಮ ಎಸ್ಪಿಗಳು ಸಿಕ್ಕಿದರೆ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಾವೇ ಸುಪ್ರೀಂ ಎಂದುಕೊಂಡಿದ್ದಾರೆ. ನಾವೇ ಇಒ, ಸಿಇಒ, ಡೀಸಿ ಎಂಬ ಭಾವನೆಯಲ್ಲಿದ್ದಾರೆ. ಪಿಡಿಒಗಳಿಗೆ ಭಯವೇ ಇಲ್ಲದಂತಾಗಿದೆ. ಪಂಚಾಯತ್ ರಾಜ್ ನಿಯಮಗಳನ್ನು ಓದಿಕೊಂಡು ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ನಾನು ಮತ್ತೆ 6 ತಿಂಗಳ ನಂತರ ಬರುತ್ತೇನೆ. ಕಾನೂನು ಬದ್ಧವಾಗಿ ಕೆಲಸ ಮಾಡಿದರೆ ತಲೆಬಾಗುತ್ತೇನೆ. ಅದು ಬಿಟ್ಟು ಕಾನೂನು ಮೀರಿ ಕೆಲಸ ಮಾಡಿದರೆ ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಎರಡು ದಿನಗಳಲ್ಲಿ 124 ಪ್ರಕರಣಗಳ ಇತ್ಯರ್ಥ:


ಎರಡು ದಿನಗಳ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ 256 ಪ್ರಕರಣಗಳ ಪೈಕಿ 124 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಮೊದಲ ದಿನ 64, ಎರಡನೇ ದಿನ 60 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ. ನಾವು 256 ಪ್ರಕರಣಗಳಲ್ಲಿ ಕನಿಷ್ಠ 150 ಪ್ರಕರಣಗಳ ಇತ್ಯರ್ಥ ಪಡಿಸುವ ಗುರಿ ಇಟ್ಟುಕೊಂಡಿದ್ದೇವು. ಆದರೆ, ಅದು ಸಾಧ್ಯವಾಗಲಿಲ್ಲ. ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ಇನ್ನೂ ಜಡತ್ವದಿಂದ ಹೊರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಮಾಜದ ಒಳಿತಿಗಾಗಿ ನ್ಯಾಯದ ಪರ, ಪ್ರಾಮಾಣಿಕ, ಜವಾಬ್ದಾರಿಯುತ ಕೆಲಸ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ, ಅಕ್ರಮ ವಿರುದ್ಧ ಕ್ರಮ ಅಗತ್ಯ. ಜನಸಾಮಾನ್ಯರಿಗೆ ತೊಂದರೆಯಾಗುವ ನೀತಿಗಳ ವಿರುದ್ಧ ಕ್ರಮ ವಹಿಸಬೇಕು ಎಂದರು.

ಅಧಿಕಾರಿಗಳು ಕೆಲಸ- ಕಾರ್ಯಗಳಲ್ಲಿ ಶಿಸ್ತು ಪಾಲಿಸಿ, ತೆಗಳುವ ಕೆಲಸ ಮಾಡಬೇಡಿ. ಕಾನೂನು ಎಲ್ಲರಿಗೂ ಒಂದೇ. ಮಾಧ್ಯಮದವರು ಸರ್ಕಾರದ ಕಚೇರಿಗಳಲ್ಲಿ ಆಗುತ್ತಿರುವ ಅಕ್ರಮ ಹಾಗೂ ಸರಿ- ತಪ್ಪುಗಳನ್ನು ಎತ್ತಿ ಹಿಡಿಯಬೇಕು. ಇದರಿಂದ ಸಮಾಜವನ್ನು ದಿಟ್ಟ ಹಾದಿಯಲ್ಲಿ ನಡೆಸಲು ಸಾಧ್ಯ ಎಂದು ಹೇಳಿದರು.

ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಶೌಚಾಲಯ ನಿರ್ವಹಣೆ ಇಲ್ಲದೆ ಇರುವ ಬಗ್ಗೆ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿದರು. ವಿದ್ಯಾರ್ಥಿ ನಿಲಯದ ಅಧಿಕಾರಿಗಳಿಗೆ 15 ದಿನಗಳಲ್ಲಿ ವಿದ್ಯಾರ್ಥಿ ನಿಲಯ ವರ್ಗಾವಣೆ, ವಸತಿ ನಿಲಯದ ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್ ಬದಲಾವಣೆಗೆ ಸೂಚಿಸಿದ್ದೇನೆ ಎಂದರು.

ಈ ವೇಳೆ ಉಪ ಆಯುಕ್ತರ ಆಪ್ತ ಸಹಾಯಕ ಅರವಿಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್‍ಯದರ್ಶಿ ಆನಂದ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಲೋಕಾಯುಕ್ತ ಎಸ್ಪಿ ಸುರೇಶ್‌ಕುಮಾರ್ ಇತರರು ಹಾಜರಿದ್ದರು.

---------------

22ಕೆಎಂಎನ್ ಡಿ25

ಮಂಡ್ಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸುದ್ಧಿಗಾರರೊಂದಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿದರು.