ಸಾರಾಂಶ
ಚುನಾವಣೆಯಲ್ಲಿ ಸೋಲು ಗೆಲುವು ನಿಶ್ಚಿತ, ಆದರೆ ಪ್ರಾಮಾಣಿಕ ಕೆಲಸ ಮಾಡಬೇಕು. ದ.ಕ. ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ ಎಂದು ರಮಾನಾಥ ರೈ ಹೇಳಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಾಂಗ್ರೆಸ್ ಪಕ್ಷ ಕುಟುಂಬವಿದ್ದಂತೆ, ಜಿಲ್ಲೆಯಲ್ಲಿ ಇಚ್ಚಾಶಕ್ತಿಯಿಂದ ಮುಖಂಡರು ಕಾರ್ಯಕರ್ತರು ಕೆಲಸ ಮಾಡಿದರೆ ಮತ್ತೆ ಪಕ್ಷಕ್ಕೆ ಅಧಿಕಾರ ಸಿಗುವುದು ನಿಶ್ಚಿತ. ನಾಯಕರುಗಳು ಹೊಂದಾಣಿಕೆಯ ರಾಜಕಾರಣ ಮಾಡದೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದಡಿಯಲ್ಲಿ ನಿಷ್ಠೆಯ ರಾಜಕಾರಣ ಮಾಡಿದರೆ ಮತ್ತೊಮ್ಮೆ ಕಾಂಗ್ರೆಸ್ ಬಲಿಷ್ಠವಾಗಲು ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪಾಣೆಮಂಗಳೂರು ಸಾಗರ್ ಅಡಿಟೋರಿಯಂ ಹಾಲ್‌ನಲ್ಲಿ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ.ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಚುನಾವಣೆಯಲ್ಲಿ ಸೋಲು ಗೆಲುವು ನಿಶ್ಚಿತ, ಆದರೆ ಪ್ರಾಮಾಣಿಕ ಕೆಲಸ ಮಾಡಬೇಕು. ದ.ಕ. ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ ಎಂದರು. ಇತ್ತೀಚೆಗಿನ ಪುರಸಭೆಯ ವಿದ್ಯಮಾನಗಳ ಬಗ್ಗೆ ಸಂಸದರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಪುರಸಭೆಯಲ್ಲಿ ಈ ಹಿಂದೆ ದಿನೇಶ್ ಭಂಡಾರಿ ಅಧ್ಯಕ್ಷರಾದದ್ದು ಹೇಗೆ, ಮುಸ್ಲಿಂ ಲೀಗ್ ನ ಸಹಾಯ ಪಡೆದು ಅಧ್ಯಕ್ಷರಾದಾಗ ಡಿ.ಎನ್.ಎ.ಯಾರದಾಗಿತ್ತು ಎಂದು ಪ್ರಶ್ನಿಸಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಉದ್ದೇಶ ಎಂದರು.ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್‌ನ ಎಲ್ಲ ಮುಂಚೂಣಿಯ ಘಟಕಗಳು ಹೊಂದಾಣಿಕೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಬ್ಲಾಕ್ ಕಾಂಗ್ರೆಸ್ ಬಲಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ನತ್ತ ಜನ ಆಕರ್ಷಿತರಾಗಿದ್ದು , ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್‌ಗೆ ಉಳಿಗಾಲವಿಲ್ಲ ಎಂಬ ಹೆದರಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಅಧಿಕಾರ ಹಸ್ತಾಂತರ ಮಾಡಲಾಯಿತು. ಕಿಸಾನ್ ಘಟಕ ಹಾಗೂ ಕಾರ್ಮಿಕ ಘಟಕದ ಪದಾಧಿಕಾರಿಗಳಿಗೂ ಅಧಿಕಾರ ಹಸ್ತಾಂತರ ಮಾಡಲಾಯಿತು.ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಜಿ.ಎ. ಬಾವ, ವಾಸು ಪೂಜಾರಿ, ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಬಿ.ಎಚ್. ಖಾದರ್, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಮೋಹನ್ ಗೌಡ ಕಲ್ಮಂಜ, ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ, ಸುಹಾನ್ ಆಳ್ವ , ಜಯಂತಿ ಆರ್. ಪೂಜಾರಿ, ಚಿತ್ತರಂಜನ್ ಶೆಟ್ಟಿ , ವಿಲ್ಮಾ ಮೋರಾಸ್, ಸುರೇಶ್ ಜೋರಾ, ಬೇಬಿ ಕುಂದರ್, ಇಬ್ರಾಹಿಂ ನವಾಜ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್,ಸುದರ್ಶನ ಜೈನ್ , ಮಹಮ್ಮದ್ ಸಪ್ವಾನ್, ಮತ್ತಿತರರು ಉಪಸ್ಥಿತರಿದ್ದರು. ಸುದೀಪ್ ಶೆಟ್ಟಿ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.