ಸಾರಾಂಶ
ಪೆನ್‌ಡ್ರೈವ್ ಪ್ರಕರಣದ ಇನ್ನಷ್ಟು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಹಾಗೂ ತನಿಖೆ ಸಾಗಿರುವ ಬಗ್ಗೆ ತಿಳಿಯಲು ಇನ್‌ಸ್ಪೆಕ್ಟರ್ ಜನರಲ್ (ಐಜಿ) ಅಮಿತ್ ಸಿಂಗ್ ಮಂಗಳವಾರ ಹಾಸನದ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.
ಪೊಲೀಸ್ ಅಧಿಕಾರಿಗಳ ಜೊತೆ ಮಹತ್ವದ ಸಭೆ
ಕನ್ನಡಪ್ರಭ ವಾರ್ತೆ ಹಾಸನಲೈಂಗಿಕ ದೌರ್ಜನ್ಯ, ಪೆನ್‌ಡ್ರೈವ್ ಹಾಗೂ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ ಕುರಿತಂತೆ ಬಾರಿ ಚರ್ಚೆಗೆ ಒಳಗಾಗಿದ್ದು, ಈ ಕುರಿತು ಇನ್ನಷ್ಟು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಹಾಗೂ ತನಿಖೆ ಸಾಗಿರುವ ಬಗ್ಗೆ ತಿಳಿಯಲು ಇನ್‌ಸ್ಪೆಕ್ಟರ್ ಜನರಲ್ (ಐಜಿ) ಅಮಿತ್ ಸಿಂಗ್ ಮಂಗಳವಾರ ಹಾಸನದ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.
ಈಗಾಗಲೇ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಅಮಿತ್ ಸಿಂಗ್ ಅವರಿಗೆ ಹಾಸನದ ಪರಿಚಯ ಇದೆ. ಇವರ ನಂತರ ಅನೇಕ ಪೊಲೀಸ್ ಅಧಿಕಾರಿಗಳು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗವಾಗಿ, ಬಡ್ತಿ ಹೊಂದಿದ್ದಾರೆ. ಈಗ ಅಮಿತ್ ಸಿಂಗ್ ಅವರು ಬಡ್ತಿ ಪಡೆದು ಐಜಿಯಾಗಿ ಹಾಸನಕ್ಕೆ ಬಂದಿದ್ದು, ಲೋಕಸಭಾ ಚುನಾವಣೆ ವೇಳೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ವೇಳೆ ಸಂಸದ ಕೂಡ ದೇಶ ಬಿಟ್ಟು ಜರ್ಮನಿ ಸೇರಿದ್ದರು. ಇದಾದ ಬಳಿಕ ಸಂತ್ರಸ್ತೆ ಅಪಹರಣ ವಿಚಾರವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಜೈಲಿಗೆ ಹಾಕಿ ನಂತರ ಬಿಡುಗಡೆ ಮಾಡಲಾಗಿತ್ತು.ಈ ಪ್ರಕರಣಗಳಲ್ಲಿ ಇಬ್ಬರೂ ಬಿಜೆಪಿ ಮುಖಂಡರು ಸೇರಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಶೀಘ್ರದಲ್ಲಿಯೇ ಸತ್ಯಾಂಶ ಹೊರ ಹಾಕುವ ನಿಟ್ಟಿನಲ್ಲಿ ಐಜಿ ಅಮಿತ್ ಸಿಂಗ್ ಅವರು ಹಾಸನಕ್ಕೆ ಆಗಮಿಸಿ ಎಸ್ಪಿ ಮಹಮ್ಮದ್ ಸುಜೀತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.