ಚುಚ್ಚುಮದ್ದು ಪಡೆಯುವಲ್ಲಿ ಅಜ್ಞಾನ ಸಲ್ಲದು: ಡಾ. ಅರುಣ್‌ ಪ್ರಸಾದ್‌ ಕಿವಿಮಾತು

| Published : Jul 01 2025, 01:48 AM IST

ಚುಚ್ಚುಮದ್ದು ಪಡೆಯುವಲ್ಲಿ ಅಜ್ಞಾನ ಸಲ್ಲದು: ಡಾ. ಅರುಣ್‌ ಪ್ರಸಾದ್‌ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಹಲವರು ವರ್ಷಕ್ಕೆ 15ರಷ್ಟು ಟಿ.ಟಿ ಇಂಜೆಕ್ಷನ್ ತೆಗೆದುಕೊಳ್ಳುವವರಿದ್ದಾರೆ. ಈ ರೀತಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಂಜೆಕ್ಷನ್ ತೆಗೆದುಕೊಳ್ಳುವುದು ಒಮ್ಮೊಮ್ಮೆ ಜೀವಕ್ಕೆ ಅಪಾಯ ತರುತ್ತದೆ ಎನ್ನುವುದು ಜನರಿಗೆ ತಿಳಿದಿಲ್ಲ ಎಂದು ವೈದ್ಯ ಡಾ. ಅರುಣ್ ಪ್ರಸಾದ್ ವೈದ್ಯರ ದಿನದ ವಿಶೇಷ ಬರೆಹದಲ್ಲಿ ಕಿವಿಮಾತು ಹೇಳಿದ್ದಾರೆ.

ಜಗತ್ತಿನಲ್ಲಿ ತಾಂತ್ರಿಕ ಬೆಳವಣಿಗೆ ಅಗಾಧವಾಗಿದ್ದರೂ ಜನರಲ್ಲಿ ಇನ್ನೂ ವೈದ್ಯಕೀಯ ಜ್ಞಾನದ ಕುರಿತು ತುಂಬಾ ಅಜ್ಞಾನವಿದೆ ಎನ್ನುವುದು ಜನರು ಟೆಟಾನಸ್ ಟಾಕ್ಸಯಿಡ್ (ಟಿಟಿ) ಇಂಜೆಕ್ಷನ್ ತೆಗೆದುಕೊಳ್ಳುವುದರಲ್ಲಿ ತೋರುವ ನಿಲುವಿನಿಂದ ಅರ್ಥವಾಗುತ್ತದೆ.

ನಮ್ಮ ಜೀವಮಾನವಿಡೀ ಹೆಚ್ಚೆಂದರೆ ಸುಮಾರು 15 ಬಾರಿ ಟೆಟಾನಸ್ ಇಂಜೆಕ್ಷನ್ ತೆಗೆದುಕೊಂಡರೆ ಅದು ಹೆಚ್ಚೇ ಎನ್ನಬಹುದು. ಆದರೆ ಈಗ ಚುಚ್ಚುಮದ್ದು ತೆಗೆದುಕೊಳ್ಳುವುದು ಫ್ಯಾಶನ್ ಆಗಿಬಿಟ್ಟಿದೆ. ಹಲವರು ವರ್ಷಕ್ಕೆ 15ರಷ್ಟು ಟಿ.ಟಿ ಇಂಜೆಕ್ಷನ್ ತೆಗೆದುಕೊಳ್ಳುವವರಿದ್ದಾರೆ. ಈ ರೀತಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಂಜೆಕ್ಷನ್ ತೆಗೆದುಕೊಳ್ಳುವುದು ಒಮ್ಮೊಮ್ಮೆ ಜೀವಕ್ಕೆ ಅಪಾಯ ತರುತ್ತದೆ ಎನ್ನುವುದು ಜನರಿಗೆ ತಿಳಿದಿಲ್ಲ .

ಟೆಟಾನಸ್ ಕಾಯಿಲೆಗೆ ಧನುರ್ವಾತ ಎನ್ನುತ್ತೇವೆ. ಕ್ಲಾಡಿಯಂ ಟೆಟಾನಿ ಎಂಬ ಬ್ಯಾಕ್ಟಿರಿಯದಿಂದ ಈ ಕಾಯಿಲೆ ಬರುತ್ತದೆ ಈ ಬ್ಯಾಕ್ಟಿರಿಯಾಗಳು ಪ್ರಾಣಿಗಳ ಕರುಳಿನಲ್ಲಿ, ಮಣ್ಣಿನಲ್ಲಿ, ಅಲ್ಲಲ್ಲಿ ಬಿದ್ದಿರುವ ವಸ್ತುಗಳಲ್ಲಿ ಹೆಚ್ಚಾಗಿ ವಾಸವಾಗಿರುತ್ತವೆ. ಈ ರೋಗಾಣುಗಳು ತಮ್ಮಷ್ಟಕ್ಕೆ ಸುಮ್ಮಗೆ ಇದ್ದಾಗ ಅಪಾಯಕಾರಿಯಲ್ಲ. ಆದರೆ ನಮ್ಮ ದೇಹಕ್ಕೆ ಯಾವುದೇ ರೀತಿಯ ಗಾಯವಾದಾಗ ಅಲ್ಲಿ ಗಾಯ ಸೆಫ್ಟಿಕ್ ಅಂದರೆ ನಂಜು ಆದಾಗ ಆ ಸ್ಥಳಗಳಲ್ಲಿ ಆಕ್ಸಿಜನ್ ಇರುವುದಿಲ್ಲ. ಇಂಥ ಸ್ಥಳಗಳಲ್ಲಿ ಸೇರಿರುವ ಟೆಟಾನಸ್ ರೋಗಾಣುಗಳು ಆಕ್ಸಿಜನ್ ಇಲ್ಲದಾಗ ಅಲ್ಲಿ ತಮ್ಮ ದೇಹದಿಂದ ನಂಜನ್ನು ಬಿಡುತ್ತವೆ. ಈ ನಂಜು ನಮ್ಮ ರಕ್ತದ ಮುಖಾಂತರ ದೇಹ ಪ್ರವೇಶಿಸಿ ದೇಹದಲ್ಲಿರುವ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಟಾಕ್ಸಿನ್ ನಿಂದ ನರಗಳು ತುಂಬಾ ಉದ್ರೇಕಗೊಂಡು ಮಾಂಸಗಳು ಆಕುಂಚನ ಸ್ಥಿತಿಗೆ ಒಳಗಾಗಿ ದೇಹವಿಡೀ ಸೆಟೆದುಕೊಂಡು ಬಿಲ್ಲಿನಂತಾಗುವುದರಿಂದ ಇದಕ್ಕೆ ಧನುರ್ವಾತ ಕಾಯಿಲೆ ಎಂದು ಕರೆಯುತ್ತಾರೆ.

ಈ ಕಾಯಿಲೆಯಲ್ಲಿ ಜಗಿಯಲು ಸಹಾಯಕವಾದ ಮಾಂಸಖಂಡಗಳು ಮೊದಲು ರೋಗಕ್ಕೆ ತುತ್ತಾಗುವುದರಿಂದ ಬಾಯಿ ತೆರೆಯಲಿಕ್ಕಾಗುವುದಿಲ್ಲ. ಬಾಯಿಗೆ ಬೀಗ ಹಾಕಿದಂತಾಗುವ ಸ್ಥಿತಿ ಉತ್ಪನ್ನವಾಗುವುದರಿಂದ ಈ ರೋಗದ ಪ್ರಾರಂಭಿಕ ಚಿಹ್ನೆಗೆ ಲಾಕ್ ಜಾ ಎನ್ನುತ್ತೇವೆ.ಈ ರೋಗ ಬಾರದಂತೆ ತಡೆಯಲು ಟಿಟಿ ಇಂಜೆಕ್ಷನ್ ಕೊಡಲಾಗುತ್ತದೆ.

ಹಿಂದೆ ಈ ಇಂಜೆಕ್ಷನ್ ತೆಗೆದುಕೊಳ್ಳಬೇಕು ಎಂಬ ತಿಳಿವಳಿಕೆ ಜನರಲ್ಲಿ ಇರಲಿಲ್ಲ. ಗರ್ಭಿಣಿಯರು ವೈದ್ಯರಲ್ಲಿಗೆ ಹೋಗಿ ತಪಾಸಣೆ ಮಾಡಿಕೊಳ್ಳುವ ಪರಿಪಾಠವಿರಲಿಲ್ಲ ಹೆರಿಗೆ ಮನೆಯಲ್ಲಿಯೇ ಆಗುತ್ತಿತ್ತು ಒಂದೆಡೆ ಗರ್ಭಿಣಿ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳದಿರುವುದರಿಂದ, ಇನ್ನೊಂದೆಡೆ ಕೊಳಕು ಚಾಕು ಬ್ಲಡ್ ಗಳಿಂದ ಹೊಕ್ಕಳಬಳ್ಳಿ ಕತ್ತರಿಸುವುದರಿಂದ ರೋಗಾಣುಗಳು ಹೊಕ್ಕುಳ ಬಳ್ಳಿಯಲ್ಲಿ ಬೆಳೆದು ಧನುರ್ವಾತ ಕಾಯಿಲೆ ಬಂದು ಎಷ್ಟೋ ಮಕ್ಕಳು ಸಾಯುತ್ತಿದ್ದರು. ದೊಡ್ಡವರು ಈ ಇಂಜೆಕ್ಷನ್ ತೆಗೆದುಕೊಳ್ಳದಿರುವುದರಿಂದ ಅವರಿಗೂ ಗಾಯಗಳಾದಾಗ ಈ ಕಾಯಿಲೆ ಬಂದು ಮರಣವನ್ನಪ್ಪುತ್ತಿದ್ದರು. ಆದರೆ ಈಗ ಜನರಲ್ಲಿ ಈ ಕಾಯಿಲೆ ಕುರಿತು ಜಾಗೃತಿ ಮೂಡಿದೆ. ಆದರೆ ಈ ಜಾಗೃತಿ ವಿಪರೀತವಾಗಿದೆ.

ತಾವು ಈ ಇಂಜೆಕ್ಷನ್ ಯಾವಾಗ ತೆಗೆದುಕೊಳ್ಳಬೇಕು ಯಾಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜನರಿಗೆ ಗೊತ್ತಿಲ್ಲ ಎನ್ನುವುದು ಸತ್ಯ. ಅನೇಕ ಜನರು ಈ ಇಂಜೆಕ್ಷನ್‌ನಿಂದಲೇ ಸೆಪ್ಟಿಕ್ ಕಡಿಮೆ ಮಾಡುತ್ತದೆ ಎಂದು ನಂಬಿದ್ದಾರೆ. ಆದರೆ ಗಾಯ ಬೇಗನೆ ಗುಣವಾಗುವುದು ಸೆಪ್ಟಿಕ್ ಆಗದಂತೆ ನೋಡಿಕೊಳ್ಳುವ ಔಷಧಿಗಳಿಂದ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೆಲವರಂತೂ ಮೈತುರಿಕೆ ಆದರೆ ಅಥವಾ ತಲೆ ತಿರುಗಿದರೂ ಸಾಕು ಡಾಕ್ಟರೇ ನನಗೆ ಸ್ವಲ್ಪ ಪಿತ್ತ ಆಗಿದೆ, ಟಿಟಿ ಇಂಜೆಕ್ಷನ್ ತೆಗೆದುಕೊಳ್ಳದೆ ತುಂಬಾ ದಿನ ಆಯ್ತು ಒಂದು ಟಿ.ಟಿ ಕೊಟ್ಟುಬಿಡಿ ಎಂದು ಹೇಳುವವರಿದ್ದಾರೆ!

ಟೆಟನಸ್ ಕಾಯಿಲೆ ಕೂಡಲೇ ಬರುವುದಿಲ್ಲ ಗಾಯವಾದ ವಾರದಿಂದ 4 ತಿಂಗಳ ಅವಧಿಯಲ್ಲಿ ಬರುತ್ತದೆ. ಇದನ್ನು ತಡೆಯಲು ಗರ್ಭಿಣಿಗೆ ಟಿ ಟಿ ಇಂಜೆಕ್ಷನ್ ಕೊಡುತ್ತಾರೆ ಮಗು ಹುಟ್ಟಿದ ನಂತರ ವರ್ಷದೊಳಗೆ ಮಗುವಿಗೆ ಡಿಪಿ ರೋಗ ನಿರೋಧಕ ಇಂಜೆಕ್ಷನ್, ಒಂದೂವರೆ ವರ್ಷಕ್ಕೆ ಮತ್ತೊಂದು ಬೂಸ್ಟರ್ ಕೊಡುತ್ತಾರೆ. ಹತ್ತು ವರ್ಷಕ್ಕೆ ಇನ್ನೊಂದು ಟೆಟಾನಸ್ ಇಂಜೆಕ್ಷನ್ ಕೊಡುತ್ತಾರೆ. ಪುನಃ 5/10 ವರ್ಷಕ್ಕೆ ಇನ್ನೊಂದು ಟಿಟಿ ಇಂಜೆಕ್ಷನ್ ಕೊಡುತ್ತಾರೆ. ನಂತರ ಈಗಿನ ನಿಯಮದ ಪ್ರಕಾರ ಹತ್ತು ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ತೆಗೆದುಕೊಂಡರೆ ಸಾಕು. ವಿನಃ ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ಸಣ್ಣಪುಟ್ಟ ಗಾಯಗಳಾಯಿತೆಂದು ಗಾಯವಾದಾಗಲೆಲ್ಲ ಇಂಜೆಕ್ಷನ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.ನಾವು ಇಲ್ಲಿ ತಿಳಿಯಬೇಕಾದುದೇನೆಂದರೆ ಯಾವುದೇ ಗಾಯ ಸೆಪ್ಟಿಕ್ ಆದರೇನೇ ಟೆಟನಸ್ ರೋಗಾಣುಗಳು ಆ ಭಾಗದಲ್ಲಿ ಕ್ರಿಯಾಶೀಲವಾಗಿ ವಿಷವಸ್ತುಗಳನ್ನು ಉತ್ಪಾದಿಸುತ್ತವೆ. ಈ ವಿಷವಸ್ತುಗಳು ಟೆಟನಸ್ ಕಾಯಿಲೆ ತರುತ್ತದೆ ಗಾಯ ಸೆಪ್ಟಿಕ್ ಆಗದಂತೆ ನೋಡಿಕೊಂಡರೆ ಟೆಟನಸ್ ಕಾಯಿಲೆ ಬರುವುದೇ ಇಲ್ಲ. ಗಾಯವಾದ ಕೂಡಲೇ ಹೈಡೋಜನ್ ಪೆರಾಡಿನಿಂದ ಗಾಯ ತೊಳೆದರೆ ಅಲ್ಲಿ ಟೆಟನಸ್ ರೋಗಾಣುಗಳು ತಟಸ್ಥವಾಗಿ ವಿಷವಸ್ತು ತಯಾರಾಗುವುದಿಲ್ಲ. ನಂತರ ಗಾಯ ಸೋಂಕು ಆಗದ ರೀತಿ ಮುಲಾಮ್ ಹಚ್ಚಿ ಪಟ್ಟಿ ಕಟ್ಟುವುದು ಹಾಗೂ ಔಷಧ ಸೇವನೆ ಮುಖ್ಯ ವಿನಃ ಕೇವಲ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಸೆಪ್ಟಿಕ್ ಕಡಿಮೆಯಾಗುವುದಿಲ್ಲ. ಟಿಟಿ ಇಂಜೆಕ್ಷನ್ ಅನ್ನು ತುಂಬಾ ಪ್ರಮಾಣದಲ್ಲಿ ತೆಗೆದುಕೊಂಡರೂ ಅದು ಜೀವಕ್ಕೆ ಹಾನಿಕರ.-ಡಾ.ಅರುಣ್ ಪ್ರಸಾದ್‌, ಅಶ್ವಿನಿ ಹೆಲ್ತ್‌ ಕ್ಲಿನಿಕ್‌ ಮುಡಿಪು, ಉಳ್ಳಾಲ ತಾಲೂಕು.