ಸಾರಾಂಶ
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಎಚ್ .ಡಿ.ಕುಮಾರಸ್ವಾಮಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಾಜಿ ಸಚಿವ ಡಿ.ಸಿ .ತಮ್ಮಣ್ಣ ದಿಡೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಜರುಗಿದೆ. ಕಳೆದ ಎರಡು ದಿನಗಳಿಂದ ಬೇಸಿಗೆ ಬಿಸಿಲು ಝಳದಿಂದ ರಕ್ತದೊತ್ತಡ, ಗಂಟಲು ಬೇನೆ, ಮೈಕೈ ನೋವುಗಳಿಂದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಬಳಲುತ್ತಿದ್ದರು. ಬಳಲಿಕೆಯ ನಡುವೆಯೂ ಸಹ ಕ್ಷೇತ್ರ ವ್ಯಾಪ್ತಿಯ ಕೆಸ್ತೂರು ಮತ್ತು ಚಾಮನಹಳ್ಳಿ ಜಿಪಂನ ಹಲವು ಗ್ರಾಮಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲದೇ ನಿರಂತರವಾಗಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸುತ್ತಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದರೂ ಶನಿವಾರ ಚಾಮನಹಳ್ಳಿ ಪ್ರಚಾರ ಕಾರ್ಯದ ನಂತರ ಗೆಜ್ಜಲಗೆರೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಮಧ್ಯಾಹ್ನ ವೈದ್ಯರ ಸಲಹೆ ಮತ್ತು ಸೂಚನೆ ಮೇರೆಗೆ ಗೆಜ್ಜಲಗೆರೆ ಸಭೆ ನಂತರ ಬೆಂಗಳೂರಿಗೆ ತೆರಳಿದ ಡಿ.ಸಿ.ತಮ್ಮಣ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ತಮ್ಮಣ್ಣ ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ. ತಾತ್ಕಾಲಿಕವಾಗಿ ಯಾವುದೇ ಸಭೆ ಸಮಾರಂಭ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗದಂತೆ ಸೂಚನೆ ನೀಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.