ಅಕ್ರಮವಾಗಿ ಆಹಾರ ಪದಾರ್ಥ ಶೇಖರಣೆ: 26 ಜನರ ಬಂಧನ

| Published : Feb 19 2025, 12:48 AM IST

ಸಾರಾಂಶ

ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸುವಲ್ಲಿ ಇಲ್ಲಿಯ ಕಸಬಾಪೇಟ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ: ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸುವಲ್ಲಿ ಇಲ್ಲಿಯ ಕಸಬಾಪೇಟ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಬೋಲೆರೋ ವಾಹನದ ಮಾಲೀಕ ನರೇಂದ್ರದ ಶಿವಕುಮಾರ ದೇಸಾಯಿ, ಲಕಮಾಪುರದ ಬಸವರಾಜ ಭದ್ರಶೆಟ್ಟಿ, ಗೋದಾಮು ಮಾಲೀಕ ನೇಕಾರನಗರದ ಮೊಹ್ಮದ್‌ಗೌಸ್ ಖಲೀಫಾ, ಗೋದಾಮು ಬಾಡಿಗೆದಾರ ಜನ್ನತ್ ನಗರದ ಗೌತಮಸಿಂಗ್ ಠಾಕೂರ, ಕುರಡಿಕೇರಿಯ ಮಂಜುನಾಥ ಮಾದರ, ಕುಂದಗೋಳ ತಾಲೂಕಿನ ಯರಗುಪ್ಪಿಯ ಫಕೀರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ, ಅಂಗನವಾಡಿ ಕಾರ್ಯಕರ್ತೆಯರಾದ ಶಮೀಮಬಾನು ಮುಜಾವರ, ಶಮೀಮಬಾನು ದಾರುಗಾರ, ಬೀಬಿಆಯಿಷಾ ಕಾರಿಗಾರ, ರೇಷ್ಮಾ ವಡ್ಡೊ, ಶಾಹೀನ ಚಕ್ಕೇಹಾರಿ, ಫೈರೋಜಾ ಮುಲ್ಲಾ, ಬೀಬಿಆಯಿಷಾ ಶೇಖ್, ಮೆಹಬೂಬಿ ಹುಲ್ಯಾಳ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾಕೌಸರ ನರಗುಂದ, ಹೀನಾಕೌಸರ್ ಮೇಸ್ತ್ರಿ, ಶೀಲಾ ಹಿರೇಮಠ, ಶ್ರುತಿ ಕೊಟಬಾಗಿ, ಪರವೀನಬಾನು ಖಲೀಫ, ರೇಣುಕಾ ಕಮಲದಿನ್ನಿ, ಗಂಗಮ್ಮ ಪಾಂಡರೆ ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 329 ಚೀಲಗಳಲ್ಲಿದ್ದ 8 ಟನ್ 84 ಕೆಜಿ ಆಹಾರ ಪದಾರ್ಥ ಜಪ್ತಿ ಮಾಡಿದ್ದು, ಇದರ ಮೌಲ್ಯ ₹4 ಲಕ್ಷ ಮತ್ತು ₹3 ಲಕ್ಷ ಮೌಲ್ಯದ ಎರಡು ಬೋಲೆರೋ ವಾಹನ ಸೀಜ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಚುರುಕುಗೊಳಿಸುವುದಾಗಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.

15ರಂದು ಅಧಿಕಾರಿಗಳಿಂದ ದಾಳಿಫೆ. 15ರಂದು ಮಧ್ಯಾಹ್ನ 4.30ಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹಳೇಗಬ್ಬೂರ ಹೊರವಲಯದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಲಾಗಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಕಮಲವ್ವ ಬೈಲೂರ ಅವರು ಇಲ್ಲಿನ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ತಪ್ಪೆಸಗಿರುವುದು ಖಚಿತವಾಗಿದೆ: ಎನ್‌. ಶಶಿಕುಮಾರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣ ಮಾಲೀಕ, ಉಗ್ರಾಣವನ್ನು ಬಾಡಿಗೆ ಪಡೆದ ವ್ಯಕ್ತಿ, ವಾಹನ ಚಾಲಕ ಸೇರಿ 8 ಜನರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿತ್ತು. ಅವರು ಕೊಟ್ಟ ಸುಳಿವು ಆಧರಿಸಿ 18 ಅಂಗನವಾಡಿ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ವೇಳೆ ತಪ್ಪೆಸಗಿರುವುದು ಕಂಡುಬಂದಿದೆ ಎಂದರು.

ಅಗತ್ಯಕ್ಕಿಂತ ಹೆಚ್ಚು ಪೌಷ್ಟಿಕ ಆಹಾರ ಪಡೆದುಕೊಳ್ಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಒಂದು ವಾಹನದಲ್ಲಿಯೇ ಅದನ್ನು ಬೇರೆ ಗೋದಾಮಿಗೆ ಸಾಗಿಸುತ್ತಿದ್ದರು. ನಂತರ ಅದನ್ನು ಕಾಳ ಸಂತೆಗೆ ಪೂರೈಕೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಈ ಪ್ರಕರಣದ ಪ್ರಮುಖ ಆರೋಪಿ ಕೂಡ ಅಂಗನವಾಡಿ ಕಾರ್ಯಕರ್ತೆ ಎನ್ನುವ ಮಾಹಿತಿ ದೊರೆತಿದೆ. ಇದರ ಪ್ರಮುಖ ಆರೋಪಿಗಳಿಬ್ಬರು ಹೊರರಾಜ್ಯದಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವಶಕ್ಕೆ ಪಡೆದ ಆರೋಪಿಗಳಿಂದ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದ್ದು, ಇನ್ನುಳಿದವರನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಅಬ್ಬಯ್ಯ

ಹುಬ್ಬಳ್ಳಿ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಆಹಾರ ಕದ್ದು ಮಾರಾಟ ಮಾಡುವ ನೀಚ ಕೆಲಸಕ್ಕೆ ಕೈ ಹಾಕುವುದು ಪಾಪದ ಕೃತ್ಯ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಕೆ ನೀಡಿದರು.

ಇಲ್ಲಿನ ಪಾಲಿಕೆ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಮಂಗಳವಾರ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಿದರು.

ಕ್ಷಮೆಗೆ ಅರ್ಹವಲ್ಲದ ತಪ್ಪು ಯಾರೂ ಮಾಡಬಾರದು. ಒಂದು ಹೆಣ್ಣಾಗಿ ಮಕ್ಕಳಿಗೆ, ಗರ್ಭಿಣಿಯರಿಗೆ ಸೇರಿಬೇಕಿದ್ದ ಪೌಷ್ಟಿಕ ಆಹಾರ ಕದಿಯುತ್ತಿರುವುದು ಅಮಾನವೀಯ ಘಟನೆ. ಅಗತ್ಯ ಜನರಿಗೆ ಸೇರಬೇಕಿದ್ದ ಆಹಾರವನ್ನು ಕದ್ದು, ಮಾರಾಟ ಮಾಡುವುದು ಪಾಪದ ಕೆಲಸ. ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಿದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ 26 ಜನರನ್ನು ಬಂದಿಸಿರುವುದೇ ಸಾಕ್ಷಿಯಾಗಿದೆ ಎಂದರು.

ಅನೇಕ ಅಂಗನವಾಡಿಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಒಂದೊಂದೇ ಮಾಹಿತಿ ಹೊರಬೀಳುತ್ತಿವೆ. ಅಧಿಕಾರಿಗಳು ಸೇರಿದಂತೆ ಮೇಲ್ವಿಚಾರಕರು, ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಇಂಥ ಪ್ರಕರಣಗಳು ಮರುಕಳಿಸದಂತೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲಾ ಉಪನಿರ್ದೇಶಕ ಎಚ್.ಎಚ್. ಕುಕನೂರ, ಜಿಲ್ಲಾ ನಿರೂಪಣಾಧಿಕಾರಿ ಕಮಲಾ ಬೈಲೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುತ್ತಣ್ಣ ಸೇರಿದಂತೆ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಪಾಲ್ಗೊಂಡಿದ್ದರು.