ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಹಾಗೂ ಮಣ್ಣು, ಅದಿರು ಸಾಗಾಣೆಗೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿದ ಮುಳ್ಳಯ್ಯನಗಿರಿ- ಬಾಬಾಬುಡನ್ ಗಿರಿ ಶ್ರೇಣಿಯಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರ ಬಳಸಿ ಹೊಸ ರಸ್ತೆಗಳ ನಿರ್ಮಾಣ ನಡೆಯುತ್ತಿದೆ. ಶೋಲಾ ಕಾಡುಗಳು ಹಾಗೂ ಹುಲ್ಲುಗಾವಲು ಪ್ರದೇಶ ಬಗೆದು ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿ ಸಾಧ್ಯತೆಯಿದೆ.

ಪ್ರಸ್ತಾಪಿತ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ವ್ಯಾಪ್ತಿಯಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಆದರೂ ಭಾರೀ ಯಂತ್ರಗಳ ಬಳಕೆಯಿಂದ ರಸ್ತೆ ನಿರ್ಮಾಣ ನಡೆಯುತ್ತಿರುವುದು ಪರಿಸರ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗಿರಬಹುದು.

ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಅಪಾಯ ಹೆಚ್ಚಾಗಿದೆ. ಮೃದುವಾದ ಮಣ್ಣಿನ ಪ್ರದೇಶಗಳಲ್ಲಿ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಕಾರ್ಯಾಚರಣೆ ಭೂಸ್ಥಿರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಅಕ್ರಮ ರಸ್ತೆ ನಿರ್ಮಾಣ, ಮಣ್ಣು ಮತ್ತು ಅದಿರು ಸಾಗಾಣೆ ಕುರಿತು ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಪರಿಸರ ಸೂಕ್ಷ್ಮ ವಲಯ ದಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ಸಂಬಂಧಿತ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಎಂದು ಆರೋಪಿಸಿದ್ದಾರೆ.-- ಕೋಟ್‌ --


ಅಕ್ರಮ ರಸ್ತೆ ನಿರ್ಮಾಣ ಹಾಗೂ ಗುಡ್ಡ ಬಗೆಯುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಂತ್ರಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಇತರೆ ಪರಿಸರ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು.

- ವಿರೇಶ್‌,

ಪರಿಸರವಾದಿ, ಚಿಕ್ಕಮಗಳೂರು

----

ಕೆಲವು ಪ್ರದೇಶಗಳಲ್ಲಿ ಗುಡ್ಡಗಳನ್ನು ಬಗೆದು ಮಣ್ಣು ಮತ್ತು ಅದಿರು ಸಾಗಣೆ ನಡೆಸಲಾಗುತ್ತಿದೆ. ಜತೆಗೆ, ಈ ಚಟುವಟಿಕೆಗಳು ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಹಾಗೂ ಇತರ ಪ್ರವಾಸೋದ್ಯಮ ಸಂಬಂಧಿತ ನಿರ್ಮಾಣಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿವೆಯೇ ಎಂಬ ಅನುಮಾನ ಉಂಟಾಗಿದೆ.

- ವಿಜಯ್‌ ಕುಮಾರ್‌, ಸ್ಥಳೀಯ ನಿವಾಸಿ