ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಕಳೆದ 2-3 ತಿಂಗಳಿಂದ ಅಕ್ರಮ ಮರಳು ದಂಧೆ ಸ್ಥಗಿತಗೊಂಡಿತ್ತು. ಆದರೆ ಕಳೆದ ವಾರದಿಂದ ಪುನಃ ಅನಧಿಕೃತ ಹಾಗೂ ಅಕ್ರಮ ಮರಳು ಸಾಗಾಣಿಕೆ ಭರದಿಂದ ಸಾಗಿದ್ದು, ಶಾಸಕರ ಸೂಚನೆಗಳಿಗೆ, ಮೇಲಧಿಕಾರಿಗಳ ಅದೇಶಗಳಿಗೆ ಕಿಮ್ಮತ್ತಿಲ್ಲವೇ? ಎಂಬ ಪ್ರಶ್ನೆ ಎದುರಾಗಿದೆ.ಅಕ್ರಮ ಮರಳು ದಂಧೆ ವಿರುದ್ಧ ಶಾಸಕಿ ಕರೆಮ್ಮ ಜಿ.ನಾಯಕ ಧ್ವನಿ ಎತ್ತಿದ್ದರು. ಕೆಲವಡೆ ತಾವೇ ಅಕ್ರಮ ಮರಳು ತುಂಬಿದ್ದ ಲಾರಿಗಳನ್ನು ಪೊಲೀಸರನ್ನು ಸ್ಥಳಕ್ಕೆ ಕರೆಸಿ ಕ್ರಮಕೈಗೊಂಡಿದ್ದರು. ಬಳಿಕ ಪೊಲೀಸರ ಮೇಲೆ ಹಲ್ಲೆ ಹಾಗೂ ಪೊಲೀಸ್ ಠಾಣೆಯಲ್ಲಿ ಶಾಸಕರ ಧರಣಿಯಂತಹ ಘಟನೆಗಳು ಜರುಗಿದ್ದ ಪರಿಣಾಮ ಏಕಾಏಕಿ ಮರಳು ದಂಧೆ ಸ್ಥಗಿತಗೊಂಡಿತ್ತು. ನಿಯಮಾನುಸಾರ ಆದೇಶಗಳು ಜಾರಿಗೊಂಡ ಬಳಿಕ ಮರಳು ಸಾಗಾಣಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಕಳೆದ ವಾರದಿಂದ ದೊಂಡಂಬಳ್ಳಿ ಗ್ರಾಮದ ಬಳಿ ಇರುವ ಕೃಷ್ಣಾ ನದಿ ಪಾತ್ರದಲ್ಲಿ ಟ್ರ್ಯಾಕ್ಟರ್‌ಗಳಿಂದ ಅಕ್ರಮ ಮರಳು ಸಾಗಾಣಿಕೆ ಹಾವಳಿ ತೀವ್ರಗೊಂಡಿದೆ. ಟ್ರ್ಯಾಕ್ಟರ್‌ಗಳಿಂದ ಅರ್ಭಟಕ್ಕೆ ಸುತ್ತಮುತ್ತಲಿನ ಗ್ರಾಮಸ್ತರು ದಂಗಾಗಿ ಹೋಗಿದ್ದಾರೆ. ಅಕ್ಕಪಕ್ಕದ ಜಮೀನುಗಳು, ರಸ್ತೆಗಳು ಹಾಳಾಗಿ ಹೋಗುವ ಆತಂಕ ಕೇಳಿ ಬರುತ್ತಿದೆ.ಚಿಕ್ಕರಾಯಕುಂಪಿ ಗ್ರಾಮ ಬಳಿ ಇರುವ ಕೃಷ್ಣಾನದಿಗೆ ಬೃಹತ್ ಇಟಾಚಿ, ಜೆಸಿಬಿ ಯಂತ್ರಗಳು ನದಿ ಒಡಲನ್ನು ಕೊರೆಯಲು ಪ್ರಾರಂಭಿಸಿವೆ. ಕೆಪಿಟಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ನದಿ ಪಾತ್ರದಲ್ಲಿ ಜಲಾಶಯದಿಂದ ಒಂದು ಟಿಎಎಂಸಿ ನೀರು ಬಿಡಲಾಗಿದೆ.
ತಾಲೂಕಿನಲ್ಲಿ ಕುಡಿವ ನೀರಿನ ಅಭಾವ ಕೊಂಚ ಕಡಿಮೆಯಾಗಬಹುದು ಎನ್ನುತ್ತಿರುವಾಗಲೇ ಪುನಃ ಅಕ್ರಮ ಮರಳು ಎತ್ತುವಳಿ ನಡೆದಿರುವುದರಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಎನ್ನಲಾಗುತ್ತಿದೆ. ಅಕ್ರಮ ಮರಳು ಸಾಗಾಣಿಕೆ ಇದೀಗ ಗೂಗಲ್ ಬ್ರಿಜ್ ಕಂ ಬ್ಯಾರೇಜ್ ರಸ್ತೆ ಮಾರ್ಗವಾಗಿ ಲಾರಿಗಳು ಸಂಚರಿಸುತ್ತಿವೆ. ಚಿಕ್ಕರಾಯಕುಂಪಿಯಿಂದ ಪ್ರತಿನಿತ್ಯ 30-40 ಮರಳು ಲಾರಿಗಳು ವಡಗೇರಾ ಮಾರ್ಗವಾಗಿ ಕಲಬುರಗಿ ಹೋಗುತ್ತಿವೆ.ಅಕ್ರಮ ಮರಳು ಸಾಗಾಣಿಕೆ ಅನಧಿಕೃತವಾಗಿ ಪುನರಾರಂಭಗೊಂಡಿರುವ ಕುರಿತು ಈ ಭಾಗದ ಮುಖಂಡರೊಬ್ಬರು ಜಿಲ್ಲಾಧಿಕಾರಿಗಳಿಗೆ, ಗಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಒಂದು ವಾರ ಕಳೆದರೂ ಕಡಿವಾಣ ಹಾಕದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಲೋಕಸಭಾ ಚುನಾವಣೆಗಳ ಭರಾಟೆ ಹಾಗೂ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಮಧ್ಯೆ ಮರಳು ಸಾಗಾಣಿಕೆ ಕುರಿತು ಯಾರೂ ಗಮನ ಸೆಳೆಯುವುದಿಲ್ಲ ಎಂಬ ಉದ್ದೇಶದಿಂದ ಅಕ್ರಮ ದಂಧೆ ಪುನರಾರಂಭಗೊಂಡಿದೆ ಎಂದು ಹೇಳಲಾಗುತ್ತಿದೆ.
ಅಕ್ರಮ ಮರಳು ಸಾಗಾಣಿಕೆಗೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆಲ ಅಧಿಕಾರಿಗಳು ಚುನಾವಣೆ ಕಾರ್ಯಗಳಿಗೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ದಂಧೆಗೆ ಪೂರಕ ವಾತಾವರಣ ನಿರ್ಮಿಸಿದಂತಾಗಿದೆ. ಕೂಡಲೇ ತಾಲೂಕು ಮತ್ತು ಜಿಲ್ಲಾಡಳಿತ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾಗಿದೆ. ಇಲ್ಲದೇ ಹೋದಲ್ಲಿ ತಾಲೂಕಿನ ಎಲ್ಲಾ ನದಿ ಪಾತ್ರದಲ್ಲಿ ಇದೇ ದಂಧೆ ಹೆಚ್ಚಾಗಲಿದೆ.