ಸಕಲೇಶಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ; ಪೊಲೀಸರೇ ಪಾಲುದಾರರು?

| Published : Apr 24 2024, 02:19 AM IST

ಸಕಲೇಶಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ; ಪೊಲೀಸರೇ ಪಾಲುದಾರರು?
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಪೋಲಿಸರೇ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿದೆ. ಮರಳಿನ ಒಡಲನ್ನು ಹೊಂದಿರುವ ಹೇಮಾವತಿ, ಐಗೂರುಹೊಳೆ, ಪಾಲಹಳ್ಳಿಹೊಳೆ ಸೇರಿದಂತೆ ತಾಲೂಕಿನ ಏಳು ಉಪನದಿಗಳಿಂದ ಯಥೇಚ್ಛವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.

ಹೇಮಾವತಿ, ಐಗೂರುಹೊಳೆ, ಪಾಲಹಳ್ಳಿಹೊಳೆ ಸೇರಿ ಏಳು ನದಿಗಲ್ಮರಳ ಒಡಲಲ್ಲಿ ಕೃತ್ಯ । 150 ವಾಹನಗಳು ಅಕ್ರಮದಲ್ಲಿ ಸಕ್ರಿಯ

ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅಕ್ರಮ ಮರಳು ಗಣಿಗಾರಿಕೆಗೆ ಪೋಲಿಸರೇ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿದೆ.

ಚಿನ್ನದಂತಹ ಮರಳಿನ ಒಡಲನ್ನು ಹೊಂದಿರುವ ಹೇಮಾವತಿ, ಐಗೂರುಹೊಳೆ, ಪಾಲಹಳ್ಳಿಹೊಳೆ ಸೇರಿದಂತೆ ತಾಲೂಕಿನ ಏಳು ಉಪನದಿಗಳಿಂದ ಯಥೇಚ್ಛವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ತಾಲೂಕಿನಲ್ಲಿ ೧೫೦ಕ್ಕೂ ಅಧಿಕ ಪಿಕ್‌ಅಪ್ ವಾಹನಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸಕ್ರಿಯವಾಗಿದ್ದು ಪ್ರತಿರಾತ್ರಿ ಕನಿಷ್ಠ ೧೦ ರಿಂದ ನಲ್ವತ್ತು ಲೋಡ್ ಮರಳನ್ನು ಪ್ರತಿ ಪಿಕ್‌ಅಪ್ ವಾಹನಗಳು ಮರಳು ಸಾಗಿಸುತ್ತಿವೆ.

ಆಲೂರು ತಾಲೂಕಿನ ಹರಿಹಳ್ಳಿ, ಕಿತ್ತಗೆರೆ ಸಕಲೇಶಪುರ ತಾಲೂಕಿನ ಮಾಗಲು, ಕೆರೊಡಿ, ಹಾಲೇಬೇಲೂರು, ಕೊಣ್ಣೂರು, ಹೆನ್ನಲಿ, ಹಾದಿಗೆ ಗ್ರಾಮಗಳ ಸಮೀಪ ಹರಿಯುವ ಹೇಮಾವತಿ ಒಡಲಿನಲ್ಲಿ ಅಕ್ರಮ ಮರಳುಗಣಿಗಾರಿಕೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದರೆ, ಹೆತ್ತೂರು ಹಾಗೂ ಯಸಳೂರು ಭಾಗದಲ್ಲಿನ ಹಲವು ಉಪನದಿಗಳ ಒಡಲನ್ನು ಮರಳುಗಳ್ಳರು ಹೇರಳವಾಗಿ ಬಗೆಯುತ್ತಿದ್ದಾರೆ. ಸಕಲೇಶಪುರ ಹಾಗೂ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಭಾಗವು ಒಳಗೊಂಡಂತೆ ತಾಲೂಕಿನಲ್ಲಿ ನಿತ್ಯ ೧೫೦ಕ್ಕೂ ಅಧಿಕ ಪಿಕ್‌ಅಪ್‌ ವಾಹನಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದು ಪ್ರತಿಯೊಂದು ವಾಹನದ ಮಾಲೀಕರು ಪೋಲಿಸರ ಸ್ನೇಹಿತರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಪೋಲಿಸರದೇ ಲೆಕ್ಕ:

ನಿತ್ಯ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ವಾಹನಗಳು ಎಷ್ಟು ಮರಳನ್ನು ಎಲ್ಲಿಗೆ ಸಾಗಿಸಿದ್ದಾರೆ ಎಂಬ ಲೆಕ್ಕವನ್ನು ಆಯಾ ಠಾಣೆ ವ್ಯಾಪ್ತಿಯ ಹಾಕುತ್ತಿದ್ದು ಇವರ ಲೆಕ್ಕವನ್ನಾಧರಿಸಿ ಇಂತಿಷ್ಟು ಹಣವನ್ನು ದಂಧೆಕೋರರು ಪೋಲಿಸರಿಗೆ ನೀಡಬೇಕಾಗಿದೆ. ಇದರಿಂದಾಗಿ ಯಸಳೂರು, ಸಕಲೇಶಪುರ ಗ್ರಾಮಾಂತರ, ಪಟ್ಟಣ ಠಾಣೆಗಳಲ್ಲಿ ಹಗಲು ಕರ್ತವ್ಯವಿದ್ದರೂ ರಾತ್ರಿಯು ಕಾರ್ಯಾಚರಣೆಯಲ್ಲಿ ತೊಡಗುವ ಪೋಲಿಸರ ಸಂಖ್ಯೆ ಹೆಚ್ಚು. ಇನ್ನೂ ಇಬ್ಬಡಿ, ಹಾದಿಗೆಯಂತಹ ಗ್ರಾಮಗಳಿಂದ ನಿತ್ಯ ಹಗಲು ವೇಳೆಯೇ ಮರಳು ಸಾಗಣಿಕೆ ನಡೆಯುತ್ತಿದ್ದರೂ ಕೇಳುವವರಿಲ್ಲ.

ರಾಶಿ ಮರಳು:

೨೦೧೭ ರಲ್ಲಿ ಮರಳು ಗಣಿಗಾರಿಕೆಗೆ ನೀಡಿದ್ದ ಅನುಮತಿ ೨೦೨೩ ಮಾರ್ಚ್ ತಿಂಗಳಿಗೆ ಮುಕ್ತಾಯಗೊಂಡಿದೆ. ಮರಳು ಗಣಿಗಾರಿಕೆ ಸ್ಥತಿಗೊಂಡಿದೆ ಎಂಬ ಕಾರಣಕ್ಕೆ ನಿರ್ಮಾಣ ಕ್ಷೇತ್ರಕ್ಕೆ ಮರಳು ಕೊರತೆಯಾಗಿದೆ ಎಂದರೆ ತಪ್ಪಾಗಲಿದೆ. ಪಟ್ಟಣ ಒಂದರಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ೩೪೨ ಮನೆಗಳ ನಿರ್ಮಾಣ ಮಾಡಲಾಗಿದ್ದರೆ, ಇಂದಿಗೂ ೧೬೩ ಮನೆ ಹಾಗೂ ಕಟ್ಟಡಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ಹೊಂದಾಣಿಕೆ:

ಹಲವು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಈ ಮೊದಲು ಸಾಕಷ್ಟು ದೂರುಗಳು ಪೋಲಿಸರಿಗೆ ಬರುತ್ತಿದ್ದವು. ಆದರೆ, ಸದ್ಯ ಎಲ್ಲ ಪಕ್ಷದ ಕೆಲವು ಕಾರ್ಯಕರ್ತರು ದಂಧೆಯಲ್ಲಿ ತೊಡಗಿದ್ದು ಎಲ್ಲರೂ ಹೊಂದಾಣಿಕೆಯ ಮೂಲಕ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮರಳು ನೀತಿ ಬೇಕಿದೆ

ಮಾರ್ಚ್ ೨೦೨೩ಕ್ಕೆ ಮರಳು ಗಣಿಗಾರಿಕೆ ಕೊನೇಗೊಂಡಿದ್ದು ನಂತರದ ಅವಧಿಯಲ್ಲಿ ಮರು ಮರಳು ನೀತಿ ಜಾರಿಯಾಗದಿರುವುದು ದಂಧೆಕೋರರಿಗೆ ಹಬ್ಬದಂತಾಗಿದೆ. ಲ್ಯಾಂಡ್ ಆರ್ಮಿಗೆ ಮರಳು ಗಣಿಗಾರಿಕೆ ನೀಡಲಾಗಿದೆ ಎಂಬ ಮಾತಿದ್ದರೂ ಸಿಬ್ಬಂದಿ ಕೊರತೆಯ ಕಾರಣ ಅವರೂ ಸಹ ಮರಳು ಗಣಿಗಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ದೂರು ಬಂದೆಡೆಯೆಲ್ಲ ದಾಳಿ ನಡೆಸಿ ಹಲವು ಮರಳು ಸಾಗಿಸುವ ವಾಹನಗಳನ್ನು ವಶಕ್ಕೆ ಪಡೆದು ದಂಡ ಹಾಕಲಾಗಿದೆ. ಸದ್ಯ ಚುನಾವಣೆ ಕರ್ತವ್ಯದಲ್ಲಿರುವುದರಿಂದ ಗಮನಹರಿಸಲು ಸಾಧ್ಯವಾಗಿಲ್ಲ. ಪೋಲಿಸರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಸಂಬಂಧಿತ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ.

ಡಾ.ಎಂ.ಕೆ ಶೃತಿ. ಉಪವಿಭಾಗಾಧಿಕಾರಿ. ಸಕಲೇಶಪುರ ಉಪವಿಭಾಗ.

ಮರಳು ದಂಧೆ ಎಂಬುದಕ್ಕಿಂತ ಲೂಟಿ ಎಂದರೆ ಹೆಚ್ಚು ಸೂಕ್ತ. ರಾತ್ರಿ ವೇಳೆ ಅತಿವೇಗದಿಂದ ಸಾಗುವ ಮರಳು ವಾಹನಗಳಿಂದ ಹಲವು ಅಪಘಾತಗಳು ಸಂಭವಿಸಿವೆ. ಮರಳು ಲೂಟಿ ತಡೆಗೆ ಹೊಸ ಮರಳು ನೀತಿ ಜಾರಿಯೇ ಮಾರ್ಗ.

ಸುರೇಶ್ ಆಳ್ವ. ಹೋರಾಟಗಾರ. ಮಾಸವಳ್ಳಿ ಗ್ರಾಮ.

ಸಕಲೇಶಪುರ ಪಟ್ಟಣದ ಬಡಾವಣೆಯೊಂದರಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೂಲಕ ಸಂಗ್ರಹವಾಗಿರುವ ಮರಳು.