ಅಕ್ರಮ ಮರಳುಗಾರಿಕೆ: ಕಂದಾಯ ಅಧಿಕಾರಿ ದಾಳಿ

| Published : Mar 10 2025, 12:15 AM IST

ಸಾರಾಂಶ

ಕಡಂದಲೆ ಗ್ರಾಮದ ತುಳುಮುಗೇರ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಶನಿವಾರ ನಸುಕಿನ ಜಾವ ಮೂಡುಬಿದಿರೆ ಕಂದಾಯ ನಿರೀಕ್ಷ ಮಂಜುನಾಥ ಎಚ್.ಬಿ. ಒಬ್ಬರೇ ದಾಳಿ ನಡೆಸಿ ಎರಡು ಟಿಪ್ಪರ್ ಹಾಗೂ ಒಂದು ಬೋಟನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಡಂದಲೆ ಗ್ರಾಮದ ತುಳುಮುಗೇರ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಶನಿವಾರ ನಸುಕಿನ ಜಾವ ಮೂಡುಬಿದಿರೆ ಕಂದಾಯ ನಿರೀಕ್ಷ ಮಂಜುನಾಥ ಎಚ್.ಬಿ. ಒಬ್ಬರೇ ದಾಳಿ ನಡೆಸಿ ಎರಡು ಟಿಪ್ಪರ್ ಹಾಗೂ ಒಂದು ಬೋಟನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಿಂದ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಮಂಜುನಾಥ್, ಎರಡು ಬಾರಿ ಸ್ಥಳಕ್ಕೆ ತೆರಳಿದ್ದಾಗ ಮಾಹಿತಿ ಸೋರಿಕೆಯಿಂದಾಗಿ ಆರೋಪಿಗಳು ತಪ್ಪಿಸಿಕೊಂಡಿದ್ದು, ಸ್ಥಳದಲ್ಲಿ ಯಾವುದೇ ಸ್ವತ್ತುಗಳು ಇರಲಿಲ್ಲ ಎನ್ನಲಾಗಿದೆ. ಶನಿವಾರ ಸರ್ಕಾರಿ ರಜೆಯಾಗಿದ್ದರೂ ಕಂದಾಯ ಅಧಿಕಾರಿ ಬೆಳಗ್ಗೆ ೫ ಗಂಟೆಗೆ ಒಬ್ಬರೇ ಕಾರಿನಲ್ಲಿ ಸ್ಥಳಕ್ಕೆ ತೆರಳಿ ಕಾದು ಕುಳಿತಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ಅಕ್ರಮ ಮರಳುಗಾರಿಕೆ ಪ್ರಾರಂಭವಾದಾಗ ಟಿಪ್ಪರ್ ಸಂಚರಿಸುವ ರಸ್ತೆಗೆ ಅಧಿಕಾರಿ ತನ್ನ ಕಾರನ್ನು ಅಡ್ಡ ಇಟ್ಟು ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿದ್ದ ಟಿಪ್ಪರ್‌ಗಳು ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಬ್ಬಿಣದ ಬೋಟನ್ನು ದಾಖಲೆ ಪ್ರಕಾರ ವಶಕ್ಕೆ ಪಡೆದಿದ್ದರೂ ಎತ್ತಲು ಸಾಧ್ಯವಾಗದೆ ಸ್ಥಳದಲ್ಲೇ ಬಿಡಲಾಗಿದೆ. ಟಿಪ್ಪರ್‌ಗಳನ್ನು ಮೂಡುಬಿದಿರೆ ಪೊಲೀಸರಿಗೆ ಹಸ್ತಾಂತರಿಸಿ ಅದರ ಮಾಲಕರ ವಿರುದ್ಧ ಕ್ರಮಕ್ಕೆ ಪತ್ರ ಬರೆಯಲಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಗಣಿ ಇಲಾಖಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.