ಕೆ.ಆರ್.ಪೇಟೆ ತಾಲೂಕಿನಲ್ಲಿ ಇನ್ನೂ ನಿಲ್ಲದ ಅಕ್ರಮ ಮರಳು ದಂಧೆ..!

| Published : Apr 02 2024, 01:00 AM IST

ಕೆ.ಆರ್.ಪೇಟೆ ತಾಲೂಕಿನಲ್ಲಿ ಇನ್ನೂ ನಿಲ್ಲದ ಅಕ್ರಮ ಮರಳು ದಂಧೆ..!
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ತಡೆದು ಪ್ರಾಕೃತಿಕ ಸಂಪತ್ತನ್ನು ರಕ್ಷಿಸಬೇಕಾದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಪೊಲಿಸರಿಗೆ ತಿಳಿದಿದೆ. ಆದರೆ, ಮಾಸಿಕ ಇಂತಿಷ್ಟು ಹಣ ಪಡೆದು ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಳೆಯಿಲ್ಲದೆ ತಾಲೂಕಿನಲ್ಲಿ ಬರಿದಾಗಿರುವ ಕೆರೆ ಕಟ್ಟೆಗಳಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಈ ದಂಧೆಕೋರರಿಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ತಾಲೂಕಿನ ಶೀಳನೆರೆ ಮತ್ತು ಸಂತೇಬಾಚಹಳ್ಳಿ ಹೋಬಳಿಯ ಬಹುತೇಕ ಕೆರೆಗಳ ಒಡಲು ಮರಳುಗಳ್ಳರ ಹಾವಳಿಗೆ ತುತ್ತಾಗಿವೆ.

ಹೇಮಾವತಿ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಕೆರೆ ಬಯಲಿನಲ್ಲಿ ಫಿಲ್ಟರ್ ಮರಳು ದಂಧೆ ಯಾವ ಅಡೆತಡೆಯೂ ಇಲ್ಲದೆ ನಡೆಯುತ್ತಿದೆ.

ಸಾರ್ವಜನಿಕರ ಮಾಹಿತಿಯಂತೆ ತಾಲೂಕಿನ ರಾಯಸಮುದ್ರ, ಮರುವನಹಳ್ಳಿ, ಹರಳಹಳ್ಳಿ, ನೀತಿಮಂಗಲ, ಶೀಳನೆರೆ, ಹೆಮ್ಮನಹಳ್ಳಿ ಹಳ್ಳ, ಸಾರಂಗಿ, ಜಾಗಿನ ಕೆರೆ, ರಂಗನಾಥಪುರ ಕ್ರಾಸ್, ನಾಗರಘಟ್ಟ, ಅಘಲಯ, ಚಿಕ್ಕಹಾರನಹಳ್ಳಿ, ನಾಯಕನಹಳ್ಳಿ ಮುಂತಾದ ಕೆರೆಗಳಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಮರಳು ಫೀಲ್ಟರ್ ದಂಧೆ ನಡೆಯುತ್ತಿದೆ.

ಅಕ್ರಮ ಮರಳು ದಂಧೆ ಬಗ್ಗೆ ಕ್ಷೇತ್ರದ ಶಾಸಕ ಎಚ್‌.ಟಿ.ಮಂಜು ಕೂಡ ಧ್ವನಿಯೆತ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಡಿವಾಣ ಹಾಕಲು ಕ್ರಮ ವಹಿಸುವಂತೆ ಸೂಚಿಸಿದ್ದರು.

ಆದರೆ, ಅಕ್ರಮ ಮರಳು ಗಣಿಗಾರಿಕೆ ತಡೆದು ಪ್ರಾಕೃತಿಕ ಸಂಪತ್ತನ್ನು ರಕ್ಷಿಸಬೇಕಾದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ತಾಲೂಕಿನ ಹಲವು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಪೊಲಿಸರಿಗೆ ತಿಳಿದಿದೆ. ಆದರೆ, ಮಾಸಿಕ ಇಂತಿಷ್ಟು ಹಣ ಪಡೆದು ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕಳೆದ ಡಿಸಂಬರ್ 14 ರಂದು ಕನ್ನಡಪ್ರಭ ಸಮಗ್ರ ವರದಿ ಮಾಡಿತ್ತು. ಪತ್ರಿಕಾ ವರದಿ ಆದರಿಸಿ ರಾಜ್ಯ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ತಾಲೂಕಿನ ತಹಸೀಲ್ದಾರರು, ತಾಪಂ ಇಒ, ಪಟ್ಟಣ, ಗ್ರಾಮಾಂತರ ಮತ್ತು ಕಿಕ್ಕೇರಿ ಪೊಲೀಸ್ ಠಾಣೆ ನಿರೀಕ್ಷಕರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕು ಅಧಿಕಾರಿ ಮತ್ತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ನಿರ್ದೇಶಕಿ ಸೇರಿದಂತೆ ಒಟ್ಟು 7 ಮಂದಿ ಅಧಿಕಾರಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.

ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಜಿಪಂ ಸಿಇಒಗೆ ಸೂಚಿಸಿದ್ದರು. ಮರಳು ಗಣಿಗಾರಿಕೆ ಸ್ಥಳ ಪರಿಶೀಲಿಸಿ ಈ ಬಗ್ಗೆ ವೀಡಿಯೋ ಮತ್ತು ಚಿತ್ರ ಸಹಿತ ವರದಿ ನೀಡುವಂತೆ ಜಿಲ್ಲಾ ಎಸ್ಪಿಗೂ ಸೂಚಿಸಿದ್ದರು. ಆ ಅನಂತರವೂ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಇದರ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.

ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಮಟ್ಟದ ಸಿಬ್ಬಂದಿ ಹಣ ಪಡೆದು ಮರಳು ಗಣಿಗಾರಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಸಲು ಕಾರಣ ಎಂದು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ದೂರಿದ್ದಾರೆ.