ಅಕ್ರಮ ಮರಳು: ಸರ್ಕಾರಿ ಕಾಮಗಾರಿ ಹೆಸರಲ್ಲಿ ಸಾಗಾಟ

| Published : Feb 01 2024, 02:00 AM IST

ಸಾರಾಂಶ

ಹಟ್ಟಿ ಚಿನ್ನದ ಗಣಿ ಹೆಸರಿನ ಅನುಮತಿ ಪತ್ರದಲ್ಲಿ ಖಾಸಗಿಯಾಗಿ ಮರಳು ಸಾಗಾಟ ನಡೆದಿದ್ದು, ದಂಧೆಕೋರರು ಸರ್ಕಾರಿ ಹೆಸರಲ್ಲಿ ಮರಳು ಲೂಟಿ ನಡೆಸಿದ್ದಾರೆಂದು ದೂರುಗಳು ಕೇಳಿಬರುತ್ತಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ವಾರದ ಹಿಂದೆಯಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಗಳು ಕಾವೇರಿದ್ದ ಬೆನ್ನಲ್ಲೇ, ಮರಳು ದಂಧೆ ಸಾಗಾಟಕ್ಕೆ ಕೊಂಚ ತಡೆ ಬಿದ್ದಂತಾಗಿದೆ. ಆದರೂ, ಸರ್ಕಾರಿ ಕಾಮಗಾರಿಗಳ ಹೆಸರಲ್ಲಿ ಮರಳು ಸಾಗಾಟ ನಡೆದಿದ್ದು, ಕಲಬುರಗಿ ಭಾಗದಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಮೂಡಿಬಂದಿವೆ.

ಹಟ್ಟಿ ಚಿನ್ನದ ಗಣಿ ಹೆಸರಿನ ಅನುಮತಿ ಪತ್ರದಲ್ಲಿ ಖಾಸಗಿಯಾಗಿ ಮರಳು ಸಾಗಾಟ ನಡೆದಿದ್ದು, ದಂಧೆಕೋರರು ಸರ್ಕಾರಿ ಹೆಸರಲ್ಲಿ ಮರಳು ಲೂಟಿ ನಡೆಸಿದ್ದಾರೆಂದು ದೂರುಗಳು ಕೇಳಿಬರುತ್ತಿವೆ.

ಇನ್ನು, ಶಹಾಪುರ ತಾಲೂಕಿನ ಗೌಡೂರು ಭಾಗದಲ್ಲಿ ಕಳೆದ ಡಿ.1ರಂದು ಜಪ್ತಿ ಮಾಡಲಾಗಿದ್ದ ಸುಮಾರು 4.20 ಕೋಟಿ ರು.ಗಳ ಮೌಲ್ಯದ, 60 ಸಾವಿರ ಮೆಟ್ರಿಕ್‌ ಟನ್‌ ಮರಳು ದಾಸ್ತಾನಿನ ಮೇಲೆ ಕಣ್ಣು ಬಿದ್ದಿದ್ದು, ಅಕ್ರಮ ಸಕ್ರಮಕ್ಕೆ ಸಂಚು ನಡೆದಿದೆ. ಹಂತ ಹಂತವಾಗಿ ದಾಸ್ತಾನನ್ನು ಬೇರೆಡೆ ಸಾಗಿಸಿ, ಮಾರಾಟ ಮಾಡುವ ಹುನ್ನಾರ ನಡೆದಿದೆ ಎಂದು "ಕನ್ನಡಪ್ರಭ "ಕ್ಕೆ ಬಲ್ಲ ಮೂಲಗಳು ತಿಳಿಸಿವೆ.

ಅಕ್ರಮ ಮರಳು ಸಾಗಾಟ ತಡೆಯಬೇಕಾಗಿರುವ ಚೆಕ್ಪೋಸ್ಟ್‌ಗಳಲ್ಲಿ ಸಿಸಿಟಿವಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಉದ್ದೇಶಪೂರ್ವಕಾಗಿಯೇ ಇರದಂತೆ ನೋಡಿಕೊಂಡಿರುವ ಹಿಂದೆ, ಮರಳು ಮಾಫಿಯಾ ಕೈವಾಡ ಅಡಗಿರಬಹುದು ಎಂಬ ಶಂಕೆಯಿದೆ. ಹೀಗಾಗಿ, ಜಿಲ್ಲೆಯ ಗಡಿ ಭಾಗದಿಂದ ಮತ್ತೊಂದು ಜಿಲ್ಲೆಗೆ ಇದನ್ನು ಸಾಗಿಸಿದ ಕುರಿತು ಸಾಕ್ಷಿಗಳು ಸಿಗದಂತಾಗುತ್ತದೆ.

ಈ ಮಧ್ಯೆ, ಕೋಹಿನೂರ್ ವಜ್ರ ಖ್ಯಾತಿಯ ಕೊಳ್ಳೂರು (ಎಂ) ಸೇರಿದಂತೆ ವಿವಿಧೆಡೆ ಕೇಳಿಬರುತ್ತಿದ್ದ ಅಕ್ರಮ ಮರಳು ದಂಧೆಗೆ ಕೊಂಚ ಬ್ರೇಕ್‌ ಬಿದ್ದಿದೆ. ಕೆಡಿಪಿ ಸಭೆಯಲ್ಲಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಈ ಬಗ್ಗೆ ಗಂಭೀರವಾಗಿ ಆರೋಪಿಸಿದ್ದಾಗ, ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಪರ್ಮಿಟ್‌ ಹೊಂದಿರುವ ಬಿಟ್ಟರೆ ಉಳಿದ್ಯಾವ ಸಾಗಾಟ ಕಂಡರೆ ವಶಪಡಿಸಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿ, ಜಪ್ತಿ ಮಾಡಿಟ್ಟ ದಾಸ್ತಾನನ್ನೂ ಕೂಡ ಹರಾಜು ಹಾಕದಂತೆ ತಿಳಿಸಿದ್ದರು.

ಐಕೂರು ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಐಕೂರಿನಲ್ಲಿ ಡಿಆರ್‌ ವಾಹನ ನಿಲ್ಲಿಸಲಾಗಿದ್ದರೆ, ಗೊಂದೆನೂರಿನಲ್ಲಿ ಮರಳು ಅಕ್ರಮ ಸಾಗಾಟಕ್ಕೆ ರಸ್ತೆ ನಿರ್ಮಿಸಿದ್ದರಾದರೂ, ಪೊಲೀಸ್‌ ಬೀಟ್‌ ಹಾಕಿದ್ದು, ಅಕ್ರಮ ತಡೆಯುವಲ್ಲಿ ಮುಂದಾಗಿದ್ದಾರೆ.ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ಜಿಲ್ಲಾಡಳಿತ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಚೆಕ್ಪೋಸ್ಟ್ಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು.

ಡಾ. ಸುಶೀಲಾ, ಜಿಲ್ಲಾಧಿಕಾರಿ, ಯಾದಗಿರಿ