ನೈಸ್‌ ಯೋಜನೆಯ ಮೂಲ ಯೋಜನಾ ವೆಚ್ಚವೇ 1,583.76 ಕೋಟಿ ರು. ಇದೆ. ನೈಸ್‌ ಸಂಸ್ಥೆ ಯೋಜನೆ ಪೂರ್ಣಗೊಳಿಸದೆ ಈವರೆಗೆ ಸುಮಾರು 4,756.48 ಕೋಟಿ ರು. ಅಕ್ರಮವಾಗಿ ವಸೂಲಿ ಮಾಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೈಸ್‌ ಯೋಜನೆಯ ಮೂಲ ಯೋಜನಾ ವೆಚ್ಚವೇ 1,583.76 ಕೋಟಿ ರು. ಇದೆ. ನೈಸ್‌ ಸಂಸ್ಥೆ ಯೋಜನೆ ಪೂರ್ಣಗೊಳಿಸದೆ ಈವರೆಗೆ ಸುಮಾರು 4,756.48 ಕೋಟಿ ರು. ಅಕ್ರಮವಾಗಿ ವಸೂಲಿ ಮಾಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ನೈಸ್ ಯೋಜನೆ ವಿರುದ್ಧ ಕಟುವಾದ ಶಬ್ದಗಳಲ್ಲಿ ಅಭಿಪ್ರಾಯ ದಾಖಲಿಸಿದೆ. ಈ ಅಭಿಪ್ರಾಯಕ್ಕೆ ಸುಪ್ರೀಂಕೋರ್ಟ್ ತಡೆ ನೀಡದಿದ್ದರೂ ಈ ನೈಸ್ ಸಂಸ್ಥೆ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಅಕ್ರಮ ಟೋಲ್ ಸಂಗ್ರಹವು 2008-2009 ರಲ್ಲಿ ವರ್ಷಕ್ಕೆ 5.59 ಕೋಟಿ ರು. ಇತ್ತು, 2024-2025ರ ವೇಳೆಗೆ ವರ್ಷಕ್ಕೆ 734.92.ಕೋಟಿ ರು. ತಲುಪಿದೆ. ನೈಸ್ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರು. ಅಕ್ರಮ ಟೋಲ್ ದರೋಡೆ ಮುಂದುವರಿದೆ. ಬಡ ರೈತರ ಭೂಮಿಯನ್ನು ಲೂಟಿ ಮಾಡುತ್ತಿದೆ. ಹೈಕೋರ್ಟ್ ಆದೇಶದ ನಂತರವೂ ಅಕ್ರಮವಾಗಿ ಟೋಲ್ ಸುಲಿಗೆ ಆಗುತ್ತಿದೆ. ತಕ್ಷಣವೇ ಟೋಲ್ ಸಂಗ್ರಹ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ 20 ವರ್ಷಗಳಿಂದ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನಡೆಸಿಕೊಂಡು ಬಂದ ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. ಇಷ್ಟೆಲ್ಲಾ ಅಕ್ರಮಗಳನ್ನು ನಡೆಸಿರುವ ನೈಸ್ ಕಂಪನಿಯ ಪಾಪದ ಕೊಡ ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಸಿಎ ಮತ್ತು ಕರಾರುಗಳ ಉಲ್ಲಂಘನೆ:

2000 ಸೆ.4ರಂದು ರಾಜ್ಯ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹಾಗೂ ನೈಸ್‌ ಸಂಸ್ಥೆ ನಡುವೆ ಟೋಲ್‌ ಕನ್ಸೇಷನ್‌ ಒಪ್ಪಂದ(ಟಿಸಿಎ) ಆಗಿತ್ತು. 1997ರ ಏ.3ರ ಮೂಲ ಫ್ರೇಮ್‌ ವರ್ಕ್‌ ಅಗ್ರಿಮೆಂಟ್‌(ಎಫ್‌ಡಬ್ಲ್ಯೂಎ) ಪ್ರಕಾರವೇ ಎಲ್ಲವೂ ನಡೆಯಬೇಕು. ಟೋಲ್ ಒಪ್ಪಂದಕ್ಕೂ ಫ್ರೇಮ್‌ವರ್ಕ್ ಅಗ್ರಿಮೆಂಟ್ ನೀಡಿದ ಕರಾರುಗಳಿಗೂ ಸಂಘರ್ಷ ಏರ್ಪಟ್ಟರೆ ಫ್ರೇಮ್‌ವರ್ಕ್ ಅಗ್ರಿಮೆಂಟ್ ನಿಬಂಧನೆಗಳೇ ಅಂತಿಮವಾಗಿರುತ್ತವೆ ಎಂದು ಒಪ್ಪಿ ಅಂಕಿತ ಹಾಕಲಾಗಿತ್ತು. ಒಪ್ಪಂದದ ಪ್ರಕಾರ 4 ಪಥಗಳ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆ ಹಾಗೂ ನಿರ್ವಹಣಾ ಪ್ರದೇಶಗಳನ್ನು ನಿರ್ಮಿಸಿದ ನಂತರವೇ ಕಂಪನಿಯು ಟೋಲ್ ಸಂಗ್ರಹಿಸಬೇಕಿತ್ತು. ಆದರೆ ಯಾವುದೇ ನಿಬಂಧನೆ ಪಾಲಿಸದೆ 2008ರಿಂದ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಕೆರೆಗಳ ಅತಿಕ್ರಮಣ:

ಎಚ್‌.ಟಿ.ಸೋಮಶೇಖರ್ ರೆಡ್ಡಿ ಪ್ರಕರಣದಲ್ಲಿ ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮುಂದೆ ಪೆರಿಫೆರಲ್ ರಸ್ತೆಗೆ 2,193 ಎಕರೆ ಸೇರಿ ಒಟ್ಟು 6,999 ಎಕರೆ ಭೂಮಿಯನ್ನು ಮಾತ್ರ ಕೇಳಿತ್ತು. ಇದರಲ್ಲಿ ಕರಾಬು, ಖುಷ್ಕಿ, ತರಿ ಮತ್ತು ತೋಟದ ಜಮೀನು ಇತ್ತೇ ಹೊರತು ಯಾವುದೇ ಕೆರೆ ಜಾಗವನ್ನು ಕೇಳಿರಲಿಲ್ಲ. ಆದರೆ, 2021ರಲ್ಲಿ ಎಂಜಿನಿಯರ್ ಕಪಿಲ್ ಶರ್ಮ ಎಂಬುವವರು ದಿಶಾಂಕ್ ಆ್ಯಪ್ ಬಳಸಿ ಕೆರೆಗಳನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದನ್ನು ಪತ್ತೆ ಹಚ್ಚಿ ದೂರು ನೀಡಿದ್ದರು ಎಂದು ಹೇಳಿದ ಕುಮಾರಸ್ವಾಮಿ, ಕೆರೆಗಳಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಬಿಡುಗಡ ಮಾಡಿದರು.

ಕ್ಯಾಬಿನೆಟ್‌ ಒಪ್ಪಿಗೆ ಪಡೆಯದೆ ಒಡಿಪಿ ಬದಲಾವಣೆ:

2004ರ ಫೆ.12ರಂದು ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ (ಒಡಿಪಿ) ಮೂಲಕ ಸಚಿವ ಸಂಪುಟದ ಅನುಮೋದನೆ ಪಡೆಯದೇ ಕಾನೂನುಬಾಹಿರವಾಗಿ ಯೋಜನೆಯ ಮೂಲ ಒಪ್ಪಂದದ ಅಲೈನ್‌ಮೆಂಟ್ ಬದಲಾಯಿಸಲಾಯಿತು. ಈ ಮೂಲಕ ಭೂಮಿ ಹೆಚ್ಚಳ ಮಾಡಿಕೊಂಡರು. ಕ್ಯಾಬಿನೆಟ್ ಅನುಮೋದನೆ ಇಲ್ಲದೆ ಪೆರಿಫೆರಲ್ ರಸ್ತೆಯ ಭೂಮಿಯನ್ನು 2,193 ಎಕರೆಯಿಂದ 2,747 ಎಕರೆಗೆ ಹಾಗೂ ಟೋಲ್ ರಸ್ತೆಯ ಜಮೀನನ್ನು 6,999 ಎಕರೆಯಿಂದ 9,468 ಎಕರೆಗೆ ಏಕಪಕ್ಷೀಯವಾಗಿ ಹೆಚ್ಚಿಸಿಕೊಳ್ಳಲಾಯಿತು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು. ಯೋಜನೆ ಮೂಲ ಚೌಕಟ್ಟು ಒಪ್ಪಂದ ಉಲ್ಲಂಘಿಸಿ ಅನೇಕ ರೀತಿಯಲ್ಲಿ ನೈಸ್ ಕಂಪನಿ ಹಣ ಮಾಡಿದೆ. ಇದರಲ್ಲಿ ಭೂ ಮಾರಾಟದಿಂದ 384 ಕೋಟಿ ರು., ಭೂಮಿ ಮತ್ತು ನಿರ್ಮಾಣ ಯೋಜನೆಗಳ ಜಂಟಿ ಅಭಿವೃದ್ಧಿಗಳ ಮುಂಗಡವಾಗಿ 108 ಕೋಟಿ, ರು., ಕನ್ವೆನ್ಷನ್ ಸೆಂಟರ್‌ಗಳಿಂದ 338 ಕೋಟಿ ರು. ಗಳಿಸಿದೆ ಎಂದು ಮಾಹಿತಿ ನೀಡಿದರು.

2016ರಲ್ಲಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು, ನೈಸ್ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಹೆಚ್ಚುವರಿ ಜಮೀನನ್ನು ಹಿಂಪಡೆಯಲು ಶಿಫಾರಸು ಮಾಡಿದ್ದರು. ಆಗಸ್ಟ್ 2023ರಲ್ಲಿ ಈ ನೈಸ್ ರಸ್ತೆ ಅಗತ್ಯವಿಲ್ಲ ಎಂದಿದ್ದ ಜಯಚಂದ್ರ ಅವರು, 2025 ಮೇ ತಿಂಗಳಲ್ಲಿ ನೈಸ್ ಯೋಜನೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಹಿಂದಿನ ರಹಸ್ಯವೇನು? ಇಲ್ಲಿ ಕಾಣದ ಕೈಗಳ ಕೈವಾಡ ಎದ್ದು ಕಾಣುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಟೋಲ್‌ ಸಂಗ್ರಹ ಬಂದ್‌ ಮಾಡಿ: ಸಚಿವ

ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ 2002ರ ನ.4ರಂದು ನಡೆದ ಸಂಪುಟ ನಿರ್ಣಯದಂತೆ 6 ವರ್ಷಗಳಲ್ಲಿ 4 ಪಥದ ಕಾಂಕ್ರೀಟ್ ರಸ್ತೆ ಪೂರ್ಣಗೊಳಿಸದಿದ್ದರೆ ಟೋಲ್ ವಸೂಲಿಯನ್ನು ಹಿಂಪಡೆಯಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತಕ್ಷಣವೇ ಕಾನೂನುಬಾಹಿರವಾಗಿ ನಡೆಯುತ್ತಿರುವ ನೈಸ್ ಟೋಲ್ ಸಂಗ್ರಹವನ್ನು ಬಂದ್ ಮಾಡಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.ಅಕ್ರಮ ಸುಲಿಗೆ ನಿಲ್ಲಿಸಲು ಇನ್ನೂ ಎಷ್ಟು ವರ್ಷ ಬೇಕಪ್ಪಾ? ಟೋಲ್‌ ವಸೂಲಿಗೆ ಇನ್ನೂ 10 ವರ್ಷ ಇದೆ ಎನ್ನುತ್ತಾರೆ. ದರೋಡೆ ಮಾಡೋಕಾ? ಇದೇನಾ ನೀವು ಪ್ರಜಾ ಸೇವೆ ಮಾಡುವುದು?

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ