ಸಾರಾಂಶ
ತಾಲೂಕಿನ ದೋಣಿಮಲೈ ಅರಣ್ಯದಲ್ಲಿ ಅಕ್ರಮ ಸುರಂಗ ನಿರ್ಮಿಸಿ, ವನ್ಯಜೀವಿಗಳ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಸಂಡೂರು: ತಾಲೂಕಿನ ದೋಣಿಮಲೈ ಅರಣ್ಯದಲ್ಲಿ ಅಕ್ರಮ ಸುರಂಗ ನಿರ್ಮಿಸಿ, ವನ್ಯಜೀವಿಗಳ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನ ಶ್ರೀನಿವಾಸ್ (45), ಕೊತ್ತಪಟ್ಟಣಂ ತಾಲೂಕಿನ ಏತಮುಕ್ಕುಲ ಗ್ರಾಮದ ಆಕಾಶ್ ಅಲ್ಲಾದಿ (20), ಲಕ್ಕಂತೋತಿ ಶ್ರೀರಾಂ (18), ಲಿಂಗಂಗುಂಟ ವೆಂಕಟರಾವ್ (19) ಹಾಗೂ ಕರ್ನಾಟದ ರಾಜ್ಯದ ಗದಗ-ಬೆಟಗೇರಿ ನಿವಾಸಿ ಭಗತ್‌ಸಿಂಗ್ ದೊಡ್ಡಮನಿ (50) ಬಂಧಿತ ಆರೋಪಿಗಳು.
ತಾಲೂಕಿನ ದೋಣಿಮಲೈ ಅರಣ್ಯ ವಲಯದ ನಾರಿಹಳ್ಳ ಡ್ಯಾಂನ ಹಿಂಭಾಗದ ಕೊಲ್ಲಾರಮ್ಮನ ಅಂಗಳದ ಅರಣ್ಯದಲ್ಲಿನ ಗುಹೆಯೊಳಗೆ30-40 ಅಡಿ ಸುರಂಗ ಮಾರ್ಗ ಕೊರೆದಿದ್ದಾರೆ. ಇಲ್ಲಿ ವನ್ಯಜೀವಿಗಳ ಆವಾಸ ಸ್ಥಾನವನ್ನು ನಾಶಪಡಿಸಿ, ವನ್ಯಜೀವಿಗಳ ಹತ್ಯೆಗೆ ಆರೋಪಿಗಳು ಯತ್ನಿಸಿದ್ದರು. ಮಾಹಿತಿ ತಿಳಿಸಿದ ಅರಣ್ಯ ಇಲಾಖೆಯ ದಕ್ಷಿಣ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ.1ರಂದು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ನಿಧಿ ಆಸೆಗೆ ಅಥವಾ ವನ್ಯಜೀವಿಗಳ ಬೇಟೆ ಸಂಶಯ:
ಬಂಧಿತರು ಅರಣ್ಯ ವಲಯದಲ್ಲಿ ನಿಧಿ ಆಸೆಗಾಗಿ ಅಥವಾ ಕಾಡು ಪ್ರಾಣಿಗಳ ಬೇಟೆಗಾಗಿ ಸುರಂಗ ತೋಡುತ್ತಿದ್ದರೆಂಬ ಅನುಮಾನ ವ್ಯಕ್ತವಾಗಿದೆ. ಬಂಧಿತರಿಂದ ಕಾರು, ಮೊಬೈಲ್ ಫೋನ್‌ಗಳು, ಸುರಂಗ ತೋಡಲು ಬಳಸಿದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ದೋಣಿಮಲೈ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಕೆ. ಜಡಿಯಪ್ಪ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಕ್ಷಿಣ ವಲಯ ಅರಣ್ಯಾಧಿಕಾರಿ ದಾದಾ ಖಲಂದರ್ ಮಾಹಿತಿ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ಗಸ್ತು ಹೆಚ್ಚಿಸಲಿ:
ತಾಲೂಕಿನ ವಿವಿಧೆಡೆ ಗುಹೆಗಳಿದ್ದು, ಅವುಗಳು ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ನಿಧಿ ಆಸೆಗಾಗಿಯೋ ಅಥವಾ ವನ್ಯಜೀವಿಗಳನ್ನು ಬೇಟೆಯಾಡಲು ಇಂತಹ ಗುಹೆಗಳನ್ನು ನಾಶ ಮಾಡಿದರೆ, ವನ್ಯಜೀವಿಗಳ ಆವಾಸ ಸ್ಥಾನಕ್ಕೆ ತೊಂದರೆಯಾಗಲಿದೆ. ಅಲ್ಲದೆ, ವನ್ಯಜೀವಿಗಳ ಪ್ರಾಣಕ್ಕೂ ಸಂಚಕಾರ ಎದುರಾಗಲಿದೆ. ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯ ಗಸ್ತು ಹೆಚ್ಚಿಸಬೇಕು. ಇದೊಂದು ಹೈ ಪ್ರೊಫೈಲ್ ಪ್ರಕರಣದಂತೆ ಕಂಡು ಬಂದಿದೆ. ಈ ಪ್ರಕರಣದಲ್ಲಿ ಬೇರೆ ರಾಜ್ಯದವರು ಭಾಗವಹಿಸಿರುವುದರಿಂದ ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.