ಅನಾರೋಗ್ಯ: ಸಿಐಎಸ್‌ಎಫ್‌ ಯೋಧ ಸಾವು

| Published : Jul 08 2024, 01:34 AM IST / Updated: Jul 08 2024, 09:39 AM IST

ಸಾರಾಂಶ

ಅನಾರೋಗ್ಯದಿಂದ ತಾಲೂಕಿನ ಭರದ್ವಾಡ ಗ್ರಾಮದ ಸಿಐಎಸ್‌ಎಫ್‌ ಯೋಧ ಯಲ್ಲಪ್ಪ ಸೂರಣಗಿ (37) ಬಳ್ಳಾರಿಯ ಎನ್‌ಎಂಡಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.

  ಕುಂದಗೋಳ :  ಅನಾರೋಗ್ಯದಿಂದ ತಾಲೂಕಿನ ಭರದ್ವಾಡ ಗ್ರಾಮದ ಸಿಐಎಸ್‌ಎಫ್‌ ಯೋಧ ಯಲ್ಲಪ್ಪ ಸೂರಣಗಿ (37) ಬಳ್ಳಾರಿಯ ಎನ್‌ಎಂಡಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.

ಕಳೆದ 13 ವರ್ಷಗಳಿಂದ ಸಿಐಎಸ್‌ಎಫ್‌ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈನ ಬೆಟಾಲಿಯನ್ ಕರ್ತವ್ಯದಲ್ಲಿದ್ದ ವೇಳೆ ಅನಾರೋಗ್ಯಕ್ಕೀಡಾಗಿದ್ದರು. ಆನಂತರ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ಎನ್‌ಎಂಡಿಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ಪತ್ನಿ, ಪುತ್ರ, ಓರ್ವ ಪುತ್ರಿ ಇದ್ದಾರೆ. ಯೋಧನ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಭರದ್ವಾಡದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

 ಹುಬ್ಬಳ್ಳಿ

ಬಡ್ಡಿ ಕಿರುಕುಳಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮೀರಷಾ (60) ಎಂಬುವರೆ ಆತ್ಮಹತ್ಯೆ ಮಾಡಿಕೊಂಡವರು. ಬಸಪ್ಪ ಮತ್ತು ಗುರು ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಅಮೀರಷಾ ಅವರು 2019 ರಲ್ಲಿ ಬಸಪ್ಪನ ಹತ್ತಿರ ಸಂಬಂಧಿಕರ ಮನೆಯ ಪೇಪರ್ ಇಟ್ಟು ಒಟ್ಟು ₹30ಲಕ್ಷ ಸಾಲವನ್ನು ಶೇ. 10ರ ಬಡ್ಡಿಯಂತೆ ತೆಗೆದುಕೊಂಡಿದ್ದಾರೆ. ಈ ವೇಳೆ 4 ಖಾಲಿ ಬಾಂಡ್, 5 ಚೆಕ್‌ಗಳನ್ನು ಸಹಿಮಾಡಿ ಕೊಟ್ಟಿದ್ದಾರೆ. ನಂತರ ಮಧ್ಯವರ್ತಿ ಗುರು ಮೂಲಕ ತಿಂಗಳಿಗೆ ₹3 ಲಕ್ಷದಂತೆ ₹28 ಲಕ್ಷ ಕಟ್ಟಿದ್ದಾರೆ. ಒಟ್ಟು ₹2 ಲಕ್ಷ ಮಾತ್ರ ಬಾಕಿ ಇತ್ತು. ಆದರೆ, ಮೃತರು ಈ ಹಿಂದೆ ಸಹಿ ಮಾಡಿಕೊಟ್ಟ ಪೇಪರ್‌ನಲ್ಲಿ ಒಟ್ಟು ₹65 ಲಕ್ಷ ಎಂದು ನಕಲಿ ಸಹಿ ಮಾಡಿ ಬಡ್ಡಿ ಹಣ ಕಟ್ಟುವಂತೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಪೇಪರ್‌ನಲ್ಲಿ ಆಸ್ತಿ ನಕಲು ಮಾಡಿಕೊಂಡು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಇದೇ ನೋವಿನಿಂದ ಅಮಿರಷಾ ಗುರುವಾರ ಬೆಳಗ್ಗೆ ವಿಷ ಸೇವಿಸಿದ್ದಾರೆ. ಕಿಮ್ಸ್‌ಗೆ ದಾಖಲಿಸಿದ್ದಾಗ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತರ ಪುತ್ರ ಸೈಯದಹುಸೇನ ದೂರು ನೀಡಿದ್ದಾರೆ. ಈ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.