ರಕ್ತದಾನದಿಂದ ನಿರೋಧಕ ಶಕ್ತಿ ಹೆಚ್ಚು: ಡಾ. ಸಾವಿತ್ರಿ ಎ.

| Published : Jun 18 2024, 12:51 AM IST

ಸಾರಾಂಶ

ರಕ್ತದಾನ ಮಾಡುವುದರಿಂದ ಅನೇಕ ಲಾಭಗಳಿವೆ. ರಕ್ತ ಶುದ್ಧಿಯಾಗಿ ರಕ್ತದೊತ್ತಡ ಕಡಿಮೆಯಾಗುವುದು, ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿಯುವುದು, ಚರ್ಮದ ಕಾಂತಿ ಹೆಚ್ಚುವುದು, ರೋಗನಿರೋಧಕ ಶಕ್ತಿ ಹೆಚ್ಚುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆಯ ನಿರ್ದೇಶಕಿ ಡಾ. ಸಾವಿತ್ರಿ ಎ. ಹೇಳಿದರು. ಹಾಸನದಲ್ಲಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಮೊಸಳೆಹೊಸಳ್ಳಿ ಕಾಲೇಜಲ್ಲಿ ರಕ್ತದಾನ ಶಿಬಿರ

ಹಾಸನ: ರಕ್ತದಾನ ಮಾಡುವುದರಿಂದ ಅನೇಕ ಲಾಭಗಳಿವೆ. ರಕ್ತ ಶುದ್ಧಿಯಾಗಿ ರಕ್ತದೊತ್ತಡ ಕಡಿಮೆಯಾಗುವುದು, ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿಯುವುದು, ಚರ್ಮದ ಕಾಂತಿ ಹೆಚ್ಚುವುದು, ರೋಗನಿರೋಧಕ ಶಕ್ತಿ ಹೆಚ್ಚುವುದು ಹೀಗೆ ಅನೇಕ ಲಾಭಗಳಿವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆಯ ನಿರ್ದೇಶಕಿ ಡಾ. ಸಾವಿತ್ರಿ ಎ. ಹೇಳಿದರು.

ತಾಲೂಕಿನ ಮೊಸಳೆಹೊಸಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ-ಹಾಸನ ಜಿಲ್ಲಾ ಶಾಖೆ ಮತ್ತು ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜಂಟಿಯಾಗಿ ಆಯೋಜಿಸಿದ ‘ಸ್ವಯಂಪ್ರೇರಿತ ರಕ್ತದಾನ ಶಿಬಿರ’ದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಕೃತಕವಾಗಿ ಉತ್ಪಾದಿಸಲಾಗದ ಏಕೈಕ ಅಂಶವೆಂದರೆ ಅದು ರಕ್ತ ಮಾತ್ರ. ಅದು ನೈಸರ್ಗಿಕವಾಗಿ ಮಾನವನ ದೇಹದಲ್ಲಿ ರಚನೆಯಾಗುವ ಅತ್ಯಮೂಲ್ಯ ಧಾತು. 18 ವರ್ಷ ವಯಸ್ಸು ಹಾಗೂ 45 ಕೆ.ಜಿ. ಗಿಂತ ಹೆಚ್ಚು ತೂಕವುಳ್ಳ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ಡಾ.ಟಿ.ರಂಗಸ್ವಾಮಿ ಮಾತನಾಡಿ, ‘ರಕ್ತದಾನ ಎಂಬುದು ಒಬ್ಬ ಮನುಷ್ಯನು ಮತ್ತೊಬ್ಬರ ಜೀವ ಉಳಿಸಲು ಇರುವ ಸರಳ ಮಾರ್ಗ. ನೀವು ನೀಡುವ ಒಂದು ಹನಿ ರಕ್ತದಿಂದ ಮೂವರ ಪ್ರಾಣ ಉಳಿಯುತ್ತದೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಹೀಗೆ ಮುಂತಾದ ವೈದ್ಯಕೀಯ ತುರ್ತು ಸಮಯದಲ್ಲಿ ಅವರಿಗೆ ರಕ್ತದಾನ ಮಾಡುವುದರ ಮೂಲಕ ನೆರವಾಗಿ, ಇತರರಿಗೂ ಮಾದರಿಯಾಗಿ ಎಂದು ಹೇಳಿದರು.

ಶಿಬಿರದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ರಕ್ತದಾನ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ.ವೈ.ಎಸ್.ವೀರಭದ್ರಪ್ಪ, ಕಾರ್ಯದರ್ಶಿ ಶಬ್ಬೀರ್ ಅಹಮದ್, ಖಜಾಂಚಿ ಎಚ್.ಡಿ. ಜಯೇಂದ್ರ ಕುಮಾರ್, ನಿರ್ದೇಶಕರಾದ ಜಯಶ್ರೀ ಕೆ.ಟಿ, ಎಚ್.ಡಿ.ಕುಮಾರ್, ಡಾ. ತೇಜಸ್ವಿ ಎಚ್.ಜೆ., ಡಾ.ಕಾವ್ಯಶ್ರೀ ಜಿ., ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗುರುಬಸವಣ್ಣ ಎಂ.ಜಿ. ಇದ್ದರು.