ಸಾರಾಂಶ
- ಯಾವುದೇ ಇಲಾಖೆಯಲ್ಲಿ ತಪ್ಪು ಕಂಡು ಬಂದ್ರೆ ಶಿಸ್ತು ಕ್ರಮ ಖಚಿತ । ಹಣದ ಕೊರತೆ ಇದ್ರೆ ಕೇಳಿ, ಕೆಲಸದಲ್ಲಿ ವಿಳಂಬ ಆಗಬಾರದು
--- ಜಿಲ್ಲೆಯಲ್ಲಿ ಒಟ್ಟು 1729 ಕೆರೆಗಳಿವೆ
-756 ಕೆರೆಗಳು ಒತ್ತುವರಿಯಾಗಿವೆ- 637 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ
- ಜಿಲ್ಲೆಯಲ್ಲಿ ಮಳೆ ಮತ್ತು ಭೂ ಕುಸಿತದಿಂದ ಸುಮಾರು 3.20 ಕೋಟಿ ರು. ನಷ್ಟಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಯಾವುದೇ ಇಲಾಖೆಯಲ್ಲಿ ತಪ್ಪು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮದ ಅನುಷ್ಠಾನಕ್ಕೆ ಹಣದ ಕೊರತೆ ಇದ್ದರೆ ಗಮನಕ್ಕೆ ತರಬೇಕು. ಹಣ ಇಲ್ಲವೆಂಬ ನೆಪ ಹೇಳಿ ಸಮಯ ವ್ಯರ್ಥ ಮಾಡಬಾರದು. ಸಾರ್ವಜ ನಿಕರಿಗೂ ತೊಂದರೆ ನೀಡಬಾರದು ಎಂದು ಕಿವಿ ಮಾತು ಹೇಳಿದರು.
ಕೆರೆಗಳ ಅಳತೆ ಮತ್ತು ಒತ್ತುವರಿ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಭೂ ಮಾಪನ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 1729 ಕೆರೆಗಳಿವೆ. ಈ ಪೈಕಿ 1727 ಕೆರೆಗಳನ್ನು ಅಳತೆ ಮಾಡಲಾಗಿದೆ. ಇವುಗಳಲ್ಲಿ 756 ಕೆರೆಗಳು ಒತ್ತುವರಿಯಾಗಿವೆ. 119 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ, ಇನ್ನು 637 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ. 1090 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ ಎಂದು ಹೇಳಿದರುಆಗ ರಾಜೇಂದರ್ ಕುಮಾರ್ ಕಟಾರಿಯಾ ಮಾತನಾಡಿ, ಕೆರೆಗಳನ್ನು ಸರ್ವೆ ಮಾಡಿಸಬೇಕು, ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕೆಂದು ಕಳೆದ ಒಂದು ವರ್ಷದ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡು ಬರುತ್ತಿಲ್ಲ, ಒತ್ತುವರಿ ತೆರವುಗೊಳಿಸಿದರೆ ಸಾಲದು, ಆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು, ಗಿಡಗಳನ್ನು ನೆಡಬೇಕು. ಈ ಕೆಲಸಕ್ಕೆ ಹಣದ ಕೊರತೆ ಇದ್ದರೆ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಬಹು ಭಾಗ ಮಲೆನಾಡು, ಇಲ್ಲಿ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಭೂ ಕುಸಿತ, ರಸ್ತೆ ಕುಸಿತ, ಅತಿವೃಷ್ಠಿ ಹಾನಿಯಾಗುವ ಸಾಧ್ಯತೆ ಇರುವುದರಿಂದ ಅಂತಹ ಪ್ರದೇಶಗಳನ್ನು ಗುರುತಿಸಿ ಪರಿಹಾರೋಪಾಯ ಕಂಡುಕೊಳ್ಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಮತ್ತು ಭೂ ಕುಸಿತದಿಂದ 4 ಮಂದಿ ಮೃತಪಟ್ಟಿದ್ದಾರೆ. 7 ಸೇತುವೆಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಕಂಬಗಳು ಹಾಗೂ ಲೈನ್‌ಗಳಿಗೆ ಹಾನಿಯಾಗಿದೆ. ಇದರಿಂದ ಸುಮಾರು 3.20 ಕೋಟಿ ರು. ನಷ್ಟವಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಹೋಂ ಗಾರ್ಡ್, ಈಜು ತಜ್ಞರನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದಾಗ, ಕಟಾರಿಯಾ ಮಾತನಾಡಿ, ಭೂ ಕುಸಿತ, ರಸ್ತೆ ಕುಸಿತ ಉಂಟಾದಾಗ ಜನರಿಗೆ ಒದಗಿಸುವ ಮೂಲಭೂತ ಸೌಲಭ್ಯದಲ್ಲಿ ಯಾವುದೇ ರೀತಿಯಲ್ಲೂ ಕೊರತೆಯಾಗಬಾರದು ಎಂದು ಸೂಚಿಸಿದರು.ಬಿತ್ತನೆ ಬೀಜ:
ಜಿಲ್ಲೆಯಲ್ಲಿ 5507 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಸರ್ಕಾರದಿಂದ 2161 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು, ಈವರೆಗೆ 1028 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇನ್ನು 1133 ಕ್ವಿಂಟಾಲ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಮಾಹಿತಿ ನೀಡಿದರು.117748 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈವರೆಗೆ 25146 ಮೆಟ್ರಿಕ್ ಟನ್ ವಿತರಣೆ ಮಾಡಲಾಗಿದೆ. ಇನ್ನು 41099 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಂದು ಹಾಸ್ಟಲ್‌ಗಳ ನಿರ್ವಹಣೆ ಮೇಲೆ ನಿಗಾ ಇಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲಿನ ಕೊರತೆಗಳ ಬಗ್ಗೆ ಪಟ್ಟಿ ಮಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ನೀಡಬೇಕು. ಆದರೆ, ಕೊಟ್ಟ ವರದಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿಲ್ಲ ಎಂಬ ವಿಷಯ ಚರ್ಚೆಯ ಸಮಯದಲ್ಲಿ ಕಟಾರಿಯಾ ಅವರ ಗಮನಕ್ಕೆ ಬಂದಾಗ, ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿ ಪೋಟೋ ಹಾಗೂ ವರದಿ ಸಹಿತ ತಮಗೆ ಇ- ಫೈಲ್ ಮೂಲಕ ಕಳುಹಿಸಬೇಕು ಎಂದು ಜಿಪಂ ಸಿಇಒ ಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 10 ಕೆಸಿಕೆಎಂ 1ಜಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಇದ್ದರು.