ಮುಂಡರಗಿ: ಕೃಷಿ ಪರಿಕರಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ಅಲ್ಲದೆ ತಪ್ಪದೇ ರಶೀದಿ ನೀಡಬೇಕು. ಯಾವುದೇ ಕಾರಣಕ್ಕೂ ಬೀಜ, ಗೊಬ್ಬರ ಕೃತಕ ಅಭಾವ ಸೃಷ್ಟಿಸದೇ ರೈತ ಸ್ನೇಹಿ ವ್ಯವಹಾರ ಕೈಗೊಳ್ಳಬೇಕು. ನಿಯಮ ಮೀರಿದಲ್ಲಿ ಕಾಯ್ದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಎಚ್ಚರಿಸಿದರು.

ಪಟ್ಟಣದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಬುಧವಾರ ಮುಂಡರಗಿ ತಾಲೂಕು ಕೃಷಿ ಪರಿಕರ ಮಾರಾಟಗಾರರಿಗೆ ಬುಧವಾರ ನಡೆದ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಣಾಮವಾಗಿ ರಸಗೊಬ್ಬರ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಆದರೂ ಕೃಷಿ ಇಲಾಖೆ ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ವ್ಯಾಪಾರಸ್ಥರು ಮುಂಚಿತವಾಗಿ ಗೊಬ್ಬರ ಸಂಗ್ರಹಿಸಿ ರೈತರ ಹಿತ ಕಾಪಾಡಬೇಕು ಎಂದು ಸೂಚಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಯಾವುದೇ ವ್ಯಾಪಾರಸ್ಥರು ನಿಗದಿಗಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡಬಾರದು. ವ್ಯಾಪಾರಸ್ಥರು ಒಂದು ತಿಂಗಳ ಮೊದಲೇ ಗೊಬ್ಬರದ ಬೇಡಿಕೆಯನ್ನು ಇಲಾಖೆಗೆ ಸಲ್ಲಿಸಬೇಕು. ಕೇವಲ ಗೊಬ್ಬರವಷ್ಟೆ ಅಲ್ಲದೆ, ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲು ಆದ್ಯತೆ ನೀಡಬೇಕು ಎಂದರು.ಕೃಷಿ ಇಲಾಖೆ ಜಾಗೃತದಳ ಅಧಿಕಾರಿ ಮೇಘನಾ ನಾಡಿಗೇರ್ ಮಾತನಾಡಿ, ಕ್ರಿಮಿನಾಶಕಗಳ ಬಳಕೆ, ಇಲಾಖೆಯ ನಿಯಮಗಳು ಹಾಗೂ ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವೀರಣ್ಣ ತಂಟ್ರಿ ಮಾತನಾಡಿ, ಗೊಬ್ಬರ ಕಂಪನಿಗಳು ಅನಗತ್ಯವಾಗಿ ಗೊಬ್ಬರದ ಜತೆಗೆ ಲಿಂಕ್ ನೀಡುತ್ತಿದ್ದು, ಈ ಲಿಂಕ್ ಪದ್ಧತಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿಸಲ್ಲಿಸಿದರು. ಸಭೆಯಲ್ಲಿ ತಾಲೂಕಿನ ಎಲ್ಲ ಖಾಸಗಿ ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಜರಿದ್ದರು.