ಸುಪ್ರೀಂ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಿ

| Published : Sep 10 2024, 01:37 AM IST

ಸಾರಾಂಶ

ಸುಪ್ರೀಂಕೋರ್ಟ್ ತೀರ್ಪು ನೀಡಿ ೪೦ ದಿನಗಳು ಕಳೆದಿವೆ. ಸರ್ಕಾರ ಈ ಬಗ್ಗೆ ದೃಢ ನಿಲುವು ತಾಳಿಲ್ಲ. ಆದ್ದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿಶಿಷ್ಟರ ಮೀಸಲಾಗಿ ವರ್ಗೀಕರಣಕ್ಕೆ ಒತ್ತಾಯಿಸಿ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಗಿದೆ. ಬೆಂಗಳೂರಿನಲ್ಲಿಯೂ ಸಹ ೨೦೨೪ ಸೆಪ್ಟಂಬರ್ ೯ರಂದು ಫ್ರೀಡಂ ಪಾರ್ಕ್‌ನಿಂದ ಮುಖ್ಯಮಂತ್ರಿಯವರ ನಿವಾಸಕ್ಕೆ ಬೃಹತ್ ಪ್ರತಿಭಟನಾ ನಡೆಸಿ ಮನವಿ ಸಲ್ಲಿಸಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರವು ವಿಳಂಬ ಮಾಡದೆ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ಮಾತನಾಡಿ, ಪರಿಶಿಷ್ಟರ ಮೀಸಲಾತಿ ಪರಿಶಿಷ್ಟ ಜನಾಂಗದ ೧೦೧ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ ೩ (ಮೂರು) ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ.

ಸುಪ್ರೀಂಕೋರ್ಟ್ ತೀರ್ಪು ನೀಡಿ ೪೦ ದಿನಗಳು ಕಳೆದಿವೆ. ಸರ್ಕಾರ ಈ ಬಗ್ಗೆ ದೃಢ ನಿಲುವು ತಾಳಿಲ್ಲ. ಆದ್ದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿಶಿಷ್ಟರ ಮೀಸಲಾಗಿ ವರ್ಗೀಕರಣಕ್ಕೆ ಒತ್ತಾಯಿಸಿ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಗಿದೆ. ಬೆಂಗಳೂರಿನಲ್ಲಿಯೂ ಸಹ ೨೦೨೪ ಸೆಪ್ಟಂಬರ್ ೯ರಂದು ಫ್ರೀಡಂ ಪಾರ್ಕ್‌ನಿಂದ ಮುಖ್ಯಮಂತ್ರಿಯವರ ನಿವಾಸಕ್ಕೆ ಬೃಹತ್ ಪ್ರತಿಭಟನಾ ನಡೆಸಿ ಮನವಿ ಸಲ್ಲಿಸಿದೆ ಎಂದು ಹೇಳಿದರು.

ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವರವರ ಆಯೋಗದ ವರದಿಯಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಜಾರಿ ಮಾಡಲು ಮನವಿ ಮಾಡಿದರು. ಅಷ್ಟೇ ಅಲ್ಲದೆ ದಲಿತರ ಹಲವು ಜ್ವಲಂತ ಸಮಸ್ಯೆಗಳ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರಮುಖ ಹಕ್ಕೊತ್ತಾಯಗಳು:

ಸುಪ್ರೀಂ ಕೋರ್ಟ್ ೭ ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಬೇಕು. ೨೦೨೩-೨೪ ಮತ್ತು ೨೦೨೪-೨೫ ನೇ ಸಾಲಿನಲ್ಲಿ ೨೫,೩೯೧ ಕೋಟಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭಿವೃದ್ಧಿ ಹಣವನ್ನು ಸಾಮಾನ್ಯ ಯೋಜನೆಗೆ ಬಳಸಲಾಗಿದೆ. ರಾಜ್ಯ ಸರ್ಕಾರ ಈ ಹಣವನ್ನು ಈ ಸಮಾಜದ ಅಭಿವೃದ್ಧಿಗೆ ವಾಪಸ್‌ ನೀಡಲು ವಿನಂತಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿ ವೇತನವನ್ನು ಸಕಾಲಕ್ಕೆ ನೀಡುತ್ತಿಲ್ಲ. ಹಾಗೂ ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶ ವ್ಯಾಸಂಗದ " ಪ್ರಬುದ್ಧ ಯೋಜನೆ " ರದ್ದಾಗಿರುವ ದಟ್ಟ ವದಂತಿ ಹಬ್ಬಿದೆ ಪುನರಾರಂಭಿಸಲಿ ಎಂದರು.

ಪರಿಶಿಷ್ಟ ಮೀಸಲಾತಿ ವರ್ಗೀಕರಣವಾಗುವವರೆಗೂ ಸರ್ಕಾರ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ ಮತ್ತು ಖಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್‌ಸಿ, ಎಸ್‌ಟಿ ಮೀಸಲಾತಿ ನೀಡಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಲಯ ಪ್ರಧಾನ ಕಾರ್ಯದರ್ಶಿ ಟಿ. ಕುಮಾರಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಸಿ.ಆರ್‌. ಧರ್ಮಯ್ಯ, ಜಿಲ್ಲಾ ಕಾರ್ಯದರ್ಶಿ ಎನ್.ಆರ್‌. ಧರ್ಮ, ಶಿವಕುಮಾರ್‌ ಇತರರು ಉಪಸ್ಥಿತರಿದ್ದರು.