ಸಾರಾಂಶ
ಪಿಎಸ್‌ಐ ಮಹೇಶ್ ಪುಜೇರಿ ವಾಗ್ವಾದ ನಡೆಸಿ, ಠಾಣೆಗೆ ಕರೆತಂದು ಎಎಸ್‌ಐ ರಾಮಪ್ಪ, ಸಿಬ್ಬಂದಿ ಶಶಿಧರ, ಗುರುಪ್ರಸಾದ್, ನಿಖಿಲ್ ಮತ್ತು ಯುವರಾಜರ ಜತೆ ಸೇರಿಕೊಂಡು ದೈಹಿಕವಾಗಿ ಮನಸೋ ಇಚ್ಚೆ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹೊಡೆದು ದುರ್ವತನೆ ತೋರಿದ್ದಾರೆ. ಪೊಲೀಸರ ಈ ಅನಾಗರಿಕ ವರ್ತನೆ ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ವಕೀಲರನ್ನು ಠಾಣೆಗೆ ಕರೆದುಕೊಂಡು ಬಂದು ಮನಸೋ ಇಚ್ಚೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಂಡ ಚಿಕ್ಕಮಗಳೂರು ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮದ ಜತೆಗೆ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಕೂಡಲೇ ವಿಧಾನಸಭಾ ಅಧಿವೇಶನದಲ್ಲಿ ಜಾರಿಗೊಳಿಸುವಂತೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.ಚಿಕ್ಕಮಗಳೂರಿನಲ್ಲಿ ನ್ಯಾಯವಾದಿ ಎನ್.ಟಿ ಪ್ರೀತಂ ವಿರುದ್ದ ಪೊಲೀಸರು ಹಲ್ಲೆ ನಡೆಸಿದ ವಿರುದ್ಧ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ತಾಲೂಕು ವಕೀಲರ ಸಂಘ ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ನ.30ರಂದು ನ್ಯಾಯವಾದಿ ಎನ್.ಟಿ. ಪ್ರೀತಂ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿಕ್ಕಮಗಳೂರು ನಗರ ಠಾಣೆ ಪಿಎಸ್‌ಐ ಮಹೇಶ್ ಪುಜೇರಿ ವಾಗ್ವಾದ ನಡೆಸಿ, ಠಾಣೆಗೆ ಕರೆತಂದು ಎಎಸ್‌ಐ ರಾಮಪ್ಪ, ಸಿಬ್ಬಂದಿ ಶಶಿಧರ, ಗುರುಪ್ರಸಾದ್, ನಿಖಿಲ್ ಮತ್ತು ಯುವರಾಜರ ಜತೆ ಸೇರಿಕೊಂಡು ದೈಹಿಕವಾಗಿ ಮನಸೋ ಇಚ್ಚೆ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹೊಡೆದು ದುರ್ವತನೆ ತೋರಿದ್ದಾರೆ. ಪೊಲೀಸರ ಈ ಅನಾಗರಿಕ ವರ್ತನೆ ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪಿಎಸ್‌ಐ ಹಾಗೂ ಸಿಬ್ಬಂದಿ ಸಾರ್ವಜನಿಕರ ಜತೆ ಜನಸ್ನೇಹಿಯಾಗಿ ವರ್ತಿಸದೆ, ಸರ್ವಾಧಿಕಾರಿಯಂತೆ ನಡೆದಿದ್ದಾರೆ. ಜನತೆಗೆ ನ್ಯಾಯ ದೊರಕಿಸಿಕೊಡುವ ವಕೀಲರ ವಿರುದ್ಧವೇ ಅಧಿಕಾರಿಗಳ ದಬ್ಬಾಳಿಕೆ ನಡೆದಿದೆ. ಇನ್ನು ಜನಸಾಮಾನ್ಯರ ಜತೆ ಪೊಲೀಸರ ವರ್ತನೆ ಹೇಗಿರುತ್ತದೆಂಬ ಬಗ್ಗೆ ಕಳವಳಕಾರಿಯಾಗಿದೆ. ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರ ಸಹಿತ 15 ವಕೀಲರ ವಿರುದ್ಧ ಅನಾವಶ್ಯಕ 4 ಪ್ರಕರಣ ದಾಖಲಿಸಿದ ಚಿಕ್ಕಮಗಳೂರು ಪೊಲೀಸ್ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಲಾಪ ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು ತಾಲೂಕು ಕಚೇರಿಗೆ ಆಗಮಿಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಾರ್ಯದರ್ಶಿ ಪ್ರಕಾಶ್, ಹಿರಿಯ ನ್ಯಾಯವಾದಿ ಕೋಡ್ಯಪ್ಪ, ಪರಮೇಶ್ವರಪ್ಪ, ಎಂ.ಎನ್ ಕೃಷ್ಣಪ್ಪ, ಲಕ್ಷ್ಮಣಪ್ಪ, ವಿನಯ ಬಾಬು, ಯೋಗಾನಂದ್, ಹೇಮರಾಜ, ನಿಂಗಪ್ಪ, ಕವಿತ, ರಜನಿ, ಜ್ಯೋತಿ, ಸುಪ್ರಿಯಾ ಮತ್ತಿತರರು ಹಾಜರಿದ್ದರು.- - - -4ಕೆ.ಎಸ್.ಕೆ.ಪಿ 2:
-ವಕೀಲರ ವಿರುದ್ಧ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೋಮವಾರ ಶಿಕಾರಿಪುರ ತಾ.ವಕೀಲರ ಸಂಘದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.