ಜಾತಿಗಣತಿ ಜಾರಿಯಿಂದ ಮೀಸಲಾತಿ ಏರಿಕೆ ಸಾಧ್ಯ: ಎಲ್‌.ಸಂದೇಶ್‌

| Published : Mar 08 2024, 01:53 AM IST

ಜಾತಿಗಣತಿ ಜಾರಿಯಿಂದ ಮೀಸಲಾತಿ ಏರಿಕೆ ಸಾಧ್ಯ: ಎಲ್‌.ಸಂದೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲೇ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಲ್ಲ ಸಮುದಾಯಗಳಿಗೆ ಶೇ.75ರ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಿದ್ದರು, ಮತ್ತೆ ಮೀಸಲಾತಿ ಏರಿಕೆಯಾಗಬೇಕಾದರೆ ಜಾತಿ ಸಮೀಕ್ಷೆಯ ವರದಿಯ ಜಾರಿ ಅತ್ಯಗತ್ಯ. ಸಂವಿಧಾನದ ಆಶಯದಂತೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರುಜಾತಿವಾರು ಜನಗಣತಿ ಜಾರಿಗೊಳಿಸುವುದರಿಂದ ಎಲ್ಲ ಸಮುದಾಯಗಳಿಗೆ ಅನುಕೂಲವಾಗುವುದರ ಜೊತೆಗೆ ಮೀಸಲಾತಿ ಏರಿಕೆಗೆ ಸಹಕಾರಿಯಾಗಲಿದೆ ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್‌.ಸಂದೇಶ್‌ ತಿಳಿಸಿದರು.

ಪಟ್ಟಣದ ಖಾಸಗಿ ಹೋಟೆಲ್‌ನ ಶಂಕರ್‌ ಪಾರ್ಟಿ ಹಾಲ್‌ನಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯ ತಾಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿ, ಮೀಸಲಾತಿ ಏರಿಕೆಗೆ ಅಹಿಂದಾ ಮತ್ತು ಮೇಲ್ವರ್ಗದಿಂದಲೂ ಒತ್ತಾಯಗಳು ಕೇಳಿ ಬರುತ್ತಿದ್ದು, ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ, ಜಾತಿ ಸಮೀಕ್ಷೆಯಿಂದ ಅಗತ್ಯ ಮಾಹಿತಿಗಳನ್ನ ಸಲ್ಲಿಸಿ ಮೀಸಲಾತಿ ಏರಿಸಲು ಅವಕಾಶ ದೊರೆಯಲಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಲ್ಲ ಸಮುದಾಯಗಳಿಗೆ ಶೇ.75ರ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಿದ್ದರು, ಮತ್ತೆ ಮೀಸಲಾತಿ ಏರಿಕೆಯಾಗಬೇಕಾದರೆ ಜಾತಿ ಸಮೀಕ್ಷೆಯ ವರದಿಯ ಜಾರಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಅಹಿಂದಾ ಸಮುದಾಯ ಚುನಾವಣೆಗೆ ಮತಗಳಾಗಿ ಬಳಕೆಯಾಗುವುದಕ್ಕೆ ಸೀಮಿತಿವಾಗದೇ ಸಾಮಾಜಿಕ ಸಮಾನತೆ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಬಲವರ್ಧನೆಯ ನಿಟ್ಟಿನಲ್ಲಿ ಸಂಘಟಿತರಾಗಬೇಕು. ಸಂವಿಧಾನದ ಆಶಯದಂತೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದ್ದೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಅಹಿಂದಾ ಸಂಘಟನೆಯ ಬಲವರ್ಧನೆಗೆ ನಿರಂತರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ವಿಶೇಷವಾಗಿ ಹಿಂದುಳಿದ ಸಮಾಜಗಳು ಜಾತಿಯ ಗಡಿಯನ್ನು ದಾಟಿ ವರ್ಗದ ಹೆಸರಲ್ಲಿ ಒಗ್ಗೂಡಬೇಕು. ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಆತಗೂರು ಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮರಿಹೆಗಡೆ, ಉಪಾಧ್ಯಕ್ಷ ಇಂತಿಯಾಜ್‌ ಉಲ್ಲಾಖಾನ್‌, ಕಾರ್ಯಾಧ್ಯಕ್ಷ ಪಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ಶೆಟ್ಟಿ, ಖಜಾಂಚಿ ರಮೇಶ್‌ ಮುಟ್ಟನಹಳ್ಳಿ, ಕಲಾವಿದ ಹುರುಗಲವಾಡಿ ರಾಮಯ್ಯ ಸೇರಿದಂತೆ ವಿವಿಧ ಸಮಾಜದ ಮುಖಂಡರಾದ ಗೋವಿಂದಯ್ಯ, ಬೆಟ್ಟರಾಜು, ಮಂಚಶೆಟ್ಟಿ ಕಡಿಲುವಾಗಿಲು, ರಾಮಲಿಂಗಯ್ಯ, ಮರಳಿಗ ಶಿವರಾಜ್‌, ಚಂದ್ರಶೇಖರ್‌, ಪ್ರಮೀಳಾ, ದ್ರಾಕ್ಷಾಯಿಣಿ ಭಾಗವಹಿಸಿದ್ದರು.