ಸಾರಾಂಶ
ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮರಳಿ ಸದೃಢ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಕಾಂಗ್ರೆಸ್‌ನ ಮಂಗಳೂರು ವಿಭಾಗ (ಮಲೆನಾಡು ಪ್ರದೇಶ)ದ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಸೋಲಿನ ಪರಾಮರ್ಶೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ದೊರೆತಿಲ್ಲ. ಸೋಲಿನ ಕಾರಣಗಳ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ವರದಿ ಆಧಾರದ ಮೇಲೆ ಮತ್ತೆ ಪಕ್ಷವನ್ನು ಬಲಗೊಳಿಸಲಾಗುವುದು. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮರಳಿ ಸದೃಢ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಕಾಂಗ್ರೆಸ್‌ನ ಮಂಗಳೂರು ವಿಭಾಗ (ಮಲೆನಾಡು ಪ್ರದೇಶ)ದ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.ಕಾಂಗ್ರೆಸ್ ಸೋಲಿನ ಪರಾಮರ್ಶೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಕ್ಷ ಸಂಘಟನೆ ವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಆದರೆ ಈ ವರದಿಯ ಅಂಶಗಳನ್ನು ಬಹಿರಂಗಗೊಳಿಸಲಾಗದು ಎಂದು ಹೇಳಿದರು.ಪ್ರಜಾಪ್ರಭುತ್ವದ ಸೋಲು:
ದೇಶದಲ್ಲಿ ಇಂಡಿಯಾ ಒಕ್ಕೂಟ 300 ಸೀಟ್ ಗೆಲ್ಲುವ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ 20 ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಮತದಾರರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ. ಬಿಜೆಪಿಗೂ ವ್ಯತಿರಿಕ್ತ ತೀರ್ಪನ್ನೇ ನೀಡಿದ್ದಾರೆ. ಈ ಸೋಲು ಕಾಂಗ್ರೆಸ್‌ಗೆ ಮಾತ್ರ ಉಂಟಾದ ಸೋಲಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಿರುವ ಸೋಲು. ಸಂವಿಧಾನಕ್ಕೆ ಅಪಚಾರ ಎಸಗಿರುವ ಮೋದಿ ಮತ್ತವರ ತಂಡವನ್ನು ಸೋಲಿಸಬೇಕಿತ್ತು ಎಂದು ಉಗ್ರಪ್ಪ ಹೇಳಿದರು.ಸರ್ಕಾರಿ ಅಧಿಕಾರಿಗಳು ಆರೆಸ್ಸೆಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂಬ ಕೇಂದ್ರ ಸರ್ಕಾರದ ತೀರ್ಮಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಧರ್ಮ ನಿರಪೇಕ್ಷತೆಯ ಸಂವಿಧಾನದಲ್ಲಿ ಇದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ಐವನ್ ಡಿಸೋಜ, ಪದ್ಮರಾಜ್ ಆರ್., ಎಂ.ಎಸ್. ಮೊಹಮ್ಮದ್ ಮತ್ತಿತರರಿದ್ದರು.