ಸಾರಾಂಶ
ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ ತಮ್ಮ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ದೇಶವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಮೂಲಕ ಜನಪರ ಯೋಜನೆ ಜಾರಿಗೆ ತಂದು ಸುಭದ್ರ ಆಡಳಿತ ನೀಡುತ್ತಿದ್ದಾರೆ ಎಂದು ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯತ್ ಆವರಣದಲ್ಲಿ ಪಪಂ ಹಾಗೂ ವಿವಿಧ ಇಲಾಖೆಯ ವತಿಯಿಂದ ಆಯೋಜಿಸಿದ್ದ ಭಾರತ ವಿಕಸಿತ ಸಂಕಲ್ಪಯಾತ್ರೆಯಡಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಸ್ಥರಗಳ ಆತ್ಮನಿರ್ಭರ (ಪಿಎಂ ಸ್ವನಿಧಿ) ಸ್ವನಿಧಿ ಸೇ ಸಮೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈಗಾಗಲೇ ೫೪ ಕೋಟಿ ಜನತೆಗೆ ಉಚಿತವಾಗಿ ಬ್ಯಾಂಕ್ ಖಾತೆ ತರಲಾಗಿದೆ. ೧೪ ಕೋಟಿ ಮಹಿಳೆಯರಿಗೆ ಉಚಿತವಾಗಿ ಉಜ್ವಲ ಗ್ಯಾಸ್ ವಿತರಣೆ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಹೀಗೆ ಅನೇಕ ಯೋಜನೆಗಳ ಮೂಲಕ ಜನತೆಗೆ ಅನುಕೂಲವಾಗಿದೆ. ಬ್ಯಾಂಕುಗಳಲ್ಲಿ ಮಕ್ಕಳಿಗೆ ಮತ್ತು ನಾಗರಿಕರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಇಡೀ ವಿಶ್ವವೇ ಮೆಚ್ಚುವಂತಹ ಆಡಳಿತ ನೀಡುತ್ತಾ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ದೇಶದ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಮೂಲಕ ವರ್ಷಕ್ಕೆ ೬ ಸಾವಿರ ಅವರ ಖಾತೆಗೆ ನೇರವಾಗಿ ಹಾಕುತ್ತಿದ್ದಾರೆ. ಹೆಚ್ಚುವರಿಯಾಗಿ ಇನ್ನು ಎರಡು ಸಾವಿರ ಹಾಕಿದ್ದಾರೆ. ಒಟ್ಟು ೮ ಸಾವಿರ ಹಣ ರೈತರಿಗೆ ಖಾತೆ ಜಮಾ ಆಗುತ್ತಿರುವುದು ಅವರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಆಪ್ತ ಸಮಾಲೋಚಕ ಪಂಪನಗೌಡ ಪಾಟೀಲ್, ಅಂಚೆ ಅಧಿಕಾರಿ ದೇವಪ್ಪ ದ್ರಾಕ್ಷಿ, ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ನಾಯ್ಕರ್ ಹಾಗೂ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸಾಲಸೌಲಭ್ಯ, ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಆಯುಷ್ಮಾನ್ ಭಾರತ್, ಆರೋಗ್ಯ ಯೋಜನೆ, ಜನೌಷಧಿ ಕೇಂದ್ರ ಸ್ಥಾಪನೆ, ಸುಕನ್ಯಾ ಸಮೃದ್ಧಿ, ಮುದ್ರಾ ಯೋಜನೆ, ಆಹಾರ ಭದ್ರತೆ ಯೋಜನೆ ಹೀಗೆ ಅನೇಕ ಯೋಜನೆ ಜಾರಿಗೆ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದರು.
ಪಪಂ ಮುಖ್ಯಾಧಿಕಾರಿ ನಾಗೇಶ ಸಭೆ ಅಧ್ಯಕ್ಷತೆ ವಹಿಸಿ ಬೀದಿ ಬಿದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯದದಡಿ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಪಪಂ ಸದಸ್ಯ ರೇವಣೆಪ್ಪ ಹಿರೇಕುರುಬರ, ಅಂದಯ್ಯ ಕಳ್ಳಿಮಠ, ಬಸವಲಿಂಗಪ್ಪ ಕೊತ್ತಲ್, ವಸಂತ ಭಾವಿಮನಿ, ಕಳಕಪ್ಪ ತಳವಾರ, ಈರಪ್ಪ ಬಣಕಾರ ಹಾಗೂ ಸಿಬ್ಬಂದಿಗಳು ಇದ್ದರು.