ಸಾರಾಂಶ
ಪಾಂಡವಪುರ : ಸರ್ಕಾರದ ಬೊಕ್ಕಸ ಹೆಚ್ಚಿಸಲು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ಪ್ರಗತಿಪರವಾದ ತೆರಿಗೆ ಹಾಕಿ ಜನ ಸಾಮಾನ್ಯರಿಗೆ ಮರು ಹಂಚಿಕೆ ಮಾಡಬೇಕು ಎಂದು ಹೋರಾಟಗಾರ, ಚಿತ್ರನಟ ಚೇತನ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಅಸೋಸಿಯೇಷನ್, ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಹಬ್ಬ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಗಳಿಂದ ಉತ್ತಮ ಶಿಕ್ಷಣ, ಆರೋಗ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಶೋಷಿತ ಸಮುದಾಯಗಳು ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಮೂಡಿಸಿಕೊಂಡು ತಮಗೆ ಬೇಕಿರುವ ಯೋಜನೆ, ನೀತಿ, ಕಾನೂನುಗಳನ್ನು ರಚಿಸಿಕೊಳ್ಳಬೇಕಾಗಿದೆ ಎಂದರು.
ಸರ್ಕಾರ ಬೊಕ್ಕಸದಲ್ಲಿ ಹಣವಿಲ್ಲವೆಂದು ಸಾರಿಗೆ, ಜಿಎಸ್‌ಟಿ, ದಿನಗಳಕೆ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವ ಬದಲು ಸಮಾಜದಲ್ಲಿ ಇರುವ ಶ್ರೀಮಂತರಿಗೆ ಶೇ.40 ರಿಂದ 50ರಷ್ಟು ಪ್ರಗತಿಪರವಾದ ತೆರಿಗೆ ಹೆಚ್ಚಿಸಿ ಅದನ್ನು ಸಮಾಜಕ್ಕೆ ಮರುಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ 3 ಸಾವಿರ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಂಡಿವೆ. ಇದರಲ್ಲಿ ಯಾವ ರಾಜಕೀಯ ಪಕ್ಷಗಳು ಸಹ ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿಲ್ಲ. ವೈಜ್ಞಾನಿಕತೆಯನ್ನು ಅಂಕಿ-ಅಂಶಗಳು, ದಾಖಲೆಗಳ ಮೂಲಕ ತೀರ್ಮಾನಿಸಬೇಕೆ ಹೊರತು ಮೌಢ್ಯ, ಮೂಡನಂಬಿಕೆಗಳಿಂದಲ್ಲ ಎಂದರು.
ಈ ಹಿಂದೆ ಆಳ್ವಿಕೆ ನಡೆಸಿರುವವರು ತಮ್ಮ ಮೂಗಿನ ನೇರಕ್ಕೆ ಇತಿಹಾಸ ತಿಳಿಸುವ ಕೆಲಸ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ನಾವು ನಿಜವಾದ ಇತಿಹಾಸ ತಿಳಿಸುವ ಕೆಲಸ ಮಾಡಬೇಕು. ಚಳವಳಿಗಳ ಮೂಲಕ ಅರಿವು ಮೂಡಿಸಬೇಕು. ಮಕ್ಕಳಿಗೆ ಅಂಬೇಡ್ಕರ್ ಅವರ ಪ್ರತಿಜ್ಞೆ, ಸಂಪುಟಗಳನ್ನು ಓದಿಸಬೇಕು ಎಂದರು.
ಪ್ರಾಧ್ಯಾಪಕ ಡಾ.ಡಿ.ಉಮಾಶಂಕರ್ ಮಾತನಾಡಿ, ಇಡೀ ಜಗತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿರುವ ಜ್ಞಾನವನ್ನು ಹುಡುಕಿದರೆ, ಭಾರತದಲ್ಲಿ ಅಂಬೇಡ್ಕರ್ ಅವರ ಜಾತಿ ಹುಡುಕುತ್ತಿದೆ. ಇಂತಹ ಮಹಾನ್ ನಾಯಕನನ್ನು ಜಾತಿಯಿಂದ ನೋಡುವುದನ್ನು ಬಿಟ್ಟು ಅವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಜಾತಿ ವಿನಾಶವಾಗಿ ರಾಷ್ಟ್ರೀಯ ಪ್ರಜ್ಞೆ ಮೂಡಿ ಶಿಕ್ಷಣ ಮೂಲ ಹಕ್ಕಾಗಬೇಕು. ಅಂತರ ಜಾತಿ ವಿವಾಹ, ಭೋಜನಗಳು ಸರ್ವ ಸಮಾನವಾಗಿ ನಡೆಯಬೇಕು ಎಂಬ ಧ್ಯೇಯ ಅಂಬೇಡ್ಕರ್ ಅವರದಾಗಿತ್ತು. ಆದರೆ, ಸಮಾಜದಲ್ಲಿ ಜಾತಿವ್ಯವಸ್ಥೆ ದಿನೇ ದಿನೇ ಗಟ್ಟಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂದು ವಿಷಾದಿಸಿದರು.
ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಡಾ.ಎಚ್.ಕೆ.ಕಲಾವತಿ ಮಾತನಾಡಿ, ಸಮಾಜದಲ್ಲಿ ಶೇ.24ರಷ್ಟು ಜನಸಂಖ್ಯೆ ಹೊಂದಿರುವ ನಾವುಗಳು ಗಟ್ಟಿಯಾದ ರಾಜಕೀಯ ನಾಯಕತ್ವವವನ್ನು ಕಟ್ಟುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಜನ ಸಾಮಾನ್ಯರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ರಾಜಕೀಯ ಶಕ್ತಿ ಪಡೆದುಕೊಳ್ಳದೆ ನಾವು ಯಾವುದೇ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿಕಾಣಲು ಸಾಧ್ಯವಿಲ್ಲ ಎಂದರು.
ಇದಕ್ಕೂ ಮುನ್ನ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಟ್ಟಣದ ಐದು ದೀಪದ ವೃತ್ತದಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಂಘಟನೆಯ ನೂರಾರು ಕಾರ್‍ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಅಸೋಸಿಯೇಷನ್ ಅಧ್ಯಕ್ಷ ಜೆ.ಅಂಕಯ್ಯ, ಕಾರ್‍ಯದರ್ಶಿ ದೊಡ್ಡವೆಂಕಟಯ್ಯ, ಉಪಾಧ್ಯಕ್ಷ ಟಿ.ಎಸ್.ಹಾಳಯ್ಯ(ಸೊಸೈಟಿ), ಖಜಾಂಚಿ ವೆಂಕಟೇಶ್, ನಿರ್ದೇಶಕರಾದ ಪ್ರಕಾಶ್ ಬ್ಯಾಡರಹಳ್ಳಿ, ದೇವರಾಜು, ಪಾಪಯ್ಯ, ಎಚ್.ಪಿ.ಜವರಯ್ಯ, ಬಾಲಕೃಷ್ಣ, ಮುಖಂಡರಾದ ಕಣಿವೆರಾಮು, ಬೊಮ್ಮರಾಜು, ಕಣಿವೆಯೋಗೇಶ್, ಜಿ.ಬಿ.ಸುರೇಶ್, ನಲ್ಲಹಳ್ಳಿ ಸುರೇಶ್, ಬೇವಿನಕುಪ್ಪೆ ದೇವರಾಜು, ಡಿ.ಕೆ.ಅಂಕಯ್ಯ, ಹಾರೋಹಳ್ಳಿ ಸೋಮಶೇಖರ್, ಮೂರ್ತಿ, ಬನ್ನಂಗಾಡಿ ಯೋಗೇಶ್, ಮಂಜು ಮಂಡಿಬೆಟ್ಟಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.