ಹೆಣ್ಣು ಮಕ್ಕಳ ಮತ್ತು ಮಹಿಳೆಯರ ರಕ್ಷಣೆ ಹಾಗೂ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ನಗರ ವ್ಯಾಪ್ತಿಯ ಸ್ತ್ರೀಬಂಧು ಒಕ್ಕೂಟಗಳಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪ್ರತಿಭಟನೆ ನೇತೃತ್ವವಹಿಸಿದ್ದ ಪ್ರಮುಖರು ಮಾತನಾಡಿ, ತಾಲೂಕಿನಲ್ಲಿ ಸ್ತ್ರೀಬಂಧು ಒಕ್ಕೂಟಗಳು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಸಂಘಗಳಾಗಿವೆ. ಕಳೆದ 13 ವರ್ಷಗಳಿಂದ ಮಹಿಳೆಯರ, ಅವರ ಕುಟುಂಬ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಸಮುದಾಯದಲ್ಲಿನ ಸಮಸ್ಯೆ ಮತ್ತು ದೌರ್ಜನ್ಯಗಳನ್ನು ಖಂಡಿಸಿ ಶೋಷಿತ, ಬಡ ಬಗ್ಗರ, ದೀನದಲಿತರ, ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ, ಮಹಿಳೆಯರ ಸಾಮರ್ಥ್ಯ ಅಭಿವೃದ್ಧಿಗಾಗಿ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯಾನಿರ್ವಹಿಸುತ್ತಿದೆ ಎಂದರು.

ಈ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಕ್ಕೂಟಗಳು, ಪ್ರತಿನಿಧಿಗಳು, ಸ್ವ-ಸಹಾಯ ಸಂಘಗಳು ಹಾಗು ಮಹಿಳೆಯರು ವಿಶಿಷ್ಟವಾಗಿ ಆಚರಿಸುತ್ತಿದ್ದು, ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ, ಲೈಂಗಿಕ ಕಿರುಕುಳ, ಹತ್ಯೆ ಮುಂತಾದ ಕಂಡು ಕೇಳರಿಯದ ಬಿಭತ್ಸ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಅಂತ್ಯ ಹಾಡುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಎಲ್ಲಾ ದೌರ್ಜನ್ಯ, ಹಿಂಸೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಶಾಶ್ವತವಾಗಿ ಅಂತ್ಯವಾಗಬೇಕಾದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ, ಶಾಶ್ವತ ಜಾಮೀನು ನಿರಾಕರಣೆ, ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದು ಮಹಿಳೆಯರು ಮತ್ತು ಮಕ್ಕಳಿಗೆ ಸಮಾಜದಲ್ಲಿ ಮುಕ್ತವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

ಸ್ತ್ರೀ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಕಾರೇಹಳ್ಳಿ ಅಧ್ಯಕ್ಷೆ ಮೇನಕಾ, ನ್ಯೂಟೌನ್ ಅಧ್ಯಕ್ಷೆ ಉಷಾರಾಣಿ, ಗಾಂಧಿನಗರ ಅಧ್ಯಕ್ಷೆ ಫಿಲೋಮಿನಾ ಮತ್ತು ಬೊಮ್ಮನಕಟ್ಟೆ ಅಧ್ಯಕ್ಷೆ ಎವಲಿನ್, ಮಹಿಳಾ ಮುಖಂಡರು, ಸದಸ್ಯೆಯರು ಪಾಲ್ಗೊಂಡಿದ್ದರು.