ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿಕೆ: ವಾದಿರಾಜ್‌

| Published : Jun 27 2024, 01:09 AM IST

ಸಾರಾಂಶ

ಚಿಕ್ಕಮಗಳೂರು, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ, ರಾಜಕೀಯ ಧುರೀಣರು ಹಾಗೂ ಜನಸಾಮಾನ್ಯರ ಮೇಲೆ ಅಧಿಕಾರ ದರ್ಪ ಎಸಗಿದವರು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ, ರಾಜಕೀಯ ಧುರೀಣರು ಹಾಗೂ ಜನಸಾಮಾನ್ಯರ ಮೇಲೆ ಅಧಿಕಾರ ದರ್ಪ ಎಸಗಿದವರು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.

ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ಬುಧವಾರ ಆಯೋಜಿಸಿದ್ಧ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

1975 ರಲ್ಲಿ ಹೊರಬಂದ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು ಚುನಾವಣಾ ಅಕ್ರಮ, ಸರ್ಕಾರಿ ಯಂತ್ರದ ದುರ್ಬಳಕೆ ಹಿನ್ನೆಲೆಯಲ್ಲಿ ಸದಸ್ಯತ್ವನ್ನು ಅಸಿಂಧುಗೊಳಿಸಿತು. ಮುಂದಿನ ಆರು ವರ್ಷ ಇಂದಿರಾಗಾಂಧಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿತ್ತು ಎಂದರು.

ತದನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಪ್ರಕರಣವನ್ನು ಹೆಚ್ಚುವರಿ ಪೀಠಕ್ಕೆ ವರ್ಗಾಯಿಸಿತು. ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಾವಿರಾರು ರಾಜಕೀಯ ನಾಯಕರನ್ನು ಜೈಲಿಗಟ್ಟಿ ಮಾಧ್ಯಮದ ಮೇಲೆ ನಿರ್ಬಂಧ ಹೇರಿದರು ಎಂದು ತಿಳಿಸಿದರು.

ಪ್ರಧಾನಮಂತ್ರಿ ಅಧಿಕಾರದ ಹುದ್ದೆ ಉಳಿಸಿಕೊಳ್ಳಲು ಇಂದಿರಾಗಾಂಧಿ ಸಂವಿಧಾನದ ಅಧ್ಯಾಯ 38, 39, 40, 41, 42 ವಿಧಿ ತಿದ್ದುಪಡಿ ಮಾಡಿದರು. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿ ಉಳಿದಿದೆ. ಅದರಲ್ಲೂ ಸಂವಿಧಾನ 39ನೇ ವಿಧಿ ತಿದ್ದುಪಡಿ ಜಗಜೀವನ್‍ ರಾಮ್ ಅವರಂತಹ ಧುರೀಣರನ್ನು ತಲೆತಗ್ಗಿಸುವಂತೆ ಮಾಡಿತು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ಸಹ 1975ನೇ ಇಸವಿಯಲ್ಲಿ ತುರ್ತುಪರಿಸ್ಥಿತಿಯಿಂದ ಸ್ವಾತಂತ್ರ್ಯ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರಜ್ಞಾವಂತ ಜನತೆ ಇವುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್, ಕಾಮಾಕ್ಷಿ ಮೂಡಿಗೆರೆ ಹಾಜರಿದ್ದರು.

----- ಬಾಕ್ಸ್‌ ----

ತುರ್ತು ಪರಿಸ್ಥಿತಿ ಇತಿಹಾಸದ ಕಪ್ಪು ಚುಕ್ಕೆ: ಅಯ್ಯರ್‌ಚಿಕ್ಕಮಗಳೂರು: ತುರ್ತು ಪರಿಸ್ಥಿತಿಯ ಕರಾಳ ಪರ್ವ ಭಾರತ ಇತಿಹಾಸದ ಕಪ್ಪುಚುಕ್ಕೆ. ನಾಗರಿಕರ ಮೂಲಭೂತ ಹಕ್ಕುಗಳ ಧಮನ, ಪತ್ರಿಕೆಗಳಿಗೆ ಸೆನ್ಸಾರ್, ನ್ಯಾಯಾಂಗದ ಮೇಲೂ ದರ್ಪತೋರಿ ಅಧಿಕಾರ ಉಳಿಸಿಕೊಳ್ಳುವ ಇಂದಿರಾ ಗಾಂಧಿ ಕಾಂಗ್ರೆಸ್‌ ತಂಡದ ಹುನ್ನಾರದಿಂದ ದೇಶವೇ ನಲುಗಿತ್ತು ಎಂದು ಹಿರಿಯ ಪತ್ರಕರ್ತ ಚೂಢನಾಥ ಅಯ್ಯರ್ ಹೇಳಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತಾಶ್ರಯದಲ್ಲಿ ’ತುರ್ತು ಪರಿಸ್ಥಿತಿ ಘೋಷಣೆಯಾದ 49 ವರ್ಷಗಳ ಹಳೆಯ ಕಹಿ ನೆನಪು’ ಅಂಗವಾಗಿ ಮನೆಯಂಗಳದಲ್ಲಿ ನೀಡಿದ ಗೌರವ ಸ್ವೀಕರಿಸಿ ನೆನಪು ಗಳನ್ನು ಮೆಲಕು ಹಾಕಿದರು.ಪ್ರಜಾಪ್ರಭುತ್ವದ ಕಗ್ಗೊಲೆ ತುರ್ತು ಪರಿಸ್ಥಿತಿ. ಸ್ವಾರ್ಥ, ಸ್ವಂತಹಿತ ಸಾಧನೆಗೆ ಭಾರತದ ಸಂವಿಧಾನವನ್ನೆ ತಿರುಚಿದ ಕರಾಳ ಅಧ್ಯಾಯ. ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಹರಣದ ಜೊತೆಗೆ ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ. ದೇಶದ ಲಕ್ಷಾಂತರ ಯುವಕರು ಮನೆ ಮಠ ತೊರೆದು ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದವರಲ್ಲಿ ತಾವೂ ಒಬ್ಬರು ಎಂಬುದು ಹೆಮ್ಮೆ ಮೂಡಿಸುತ್ತಿದೆ ಎಂದರು.

ದೇಶದ ಬುದ್ಧಿವಂತ ಜಾಗೃತ ಜನತೆ ಮತದಾನದ ಮೂಲಕ ಸರ್ವಾಧಿಕಾರಿಯನ್ನು ಸೋಲಿಸಿತು. ಪಕ್ಷದ ಜೊತೆಗೆ ನಾಯಕರನ್ನೂ ಚುನಾವಣೆಯಲ್ಲಿ ಪರಾಭವಗೊಳಿಸಿದ ಇಲ್ಲಿಯ ಜನರ ಪ್ರಜಾಪ್ರಭುತ್ವ ಪ್ರೀತಿ ಜಗತ್ತಿನ ಬೇರೆಕಡೆ ನೋಡಲು ಸಾಧ್ಯವಿಲ್ಲ. ಕಮ್ಯೂನಿಸ್ಟರು, ಕಾಂಗ್ರೆಸಿಗರಿಗೆ ಸಂವಿಧಾನ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದ ಅವರು, ಜನತಾಪಕ್ಷದ ಸರ್ಕಾರ ಕೇಂದ್ರದಲ್ಲಿ ರಚನೆಯಾದ ನಂತರ ಇಂತಹ ತುರ್ತುಪರಿಸ್ಥಿತಿ ಜಾರಿಗೊಳಿಸದಂತೆ ಕಾನೂನು ತಿದ್ದುಪಡಿ ತಂದಿದೆ ಎಂದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲರಾದ ಎ.ಜಿ.ವಿಶ್ವಮೂರ್ತಿ ಮತ್ತು ಹುಲಿಕೆರೆ ಮಹಾಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ಅಭಾಸಾಪದ ವಿ.ಟಿ.ದಾಮೋದರ್ ಮಾತನಾಡಿದರು. ಅಭಾಸಾಪ ಜಿಲ್ಲಾ ಕಾರ್‍ಯದರ್ಶಿ ಅಶ್ವಥ್‌ ಕೆ.ಆರ್.ಪೇಟೆ ಸ್ವಾಗತಿಸಿ, ಪ್ರತಿಷ್ಠಾನದ ಸಂಚಾಲಕ ರುದ್ರೇಶ್ ಎನ್.ಕಡೂರ್ ನಿರೂಪಿಸಿ, ಕಾರ್‍ಯದರ್ಶಿ ಸುಮಿತ್ರಾ ಶಾಸ್ತ್ರಿ ವಂದಿಸಿದರು.

26 ಕೆಸಿಕೆಎಂ 6ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ಬುಧವಾರ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದ ನಡೆಯಿತು. ಬಿ. ತಿಪ್ಪೇರುದ್ರಪ್ಪ, ವಾದಿರಾಜ್‌, ಪಿ. ರಾಜೀವ್‌, ಕಾಮಾಕ್ಷಿ ಮೂಡಿಗೆರೆ ಇದ್ದರು.