ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 9 ಹೊಸ ವಿವಿ ಮುಚ್ಚುವುದು ಒಳಿತು

| Published : Feb 19 2025, 12:47 AM IST

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 9 ಹೊಸ ವಿವಿ ಮುಚ್ಚುವುದು ಒಳಿತು
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸರ್ಕಾರ ಮಾಡಿರುವ ಹೊಸ ವಿವಿಗಳ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ 34000 ಕೋಟಿ ರೂ. ಬೇಕಾಗುತ್ತದೆ. ಇದು ದುಂದು ವೆಚ್ಚ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯದ 9 ಹೊಸ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದು ಒಳಿತು ಎಂದು ಕೆಪಿಸಿಸಿ ವಕ್ತಾರ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ. ವೆಂಕಟೇಶ್ ತಿಳಿಸಿದರು.

2022ರಲ್ಲಿ ಬಿಜೆಪಿ ಸರ್ಕಾರ ವಿಶ್ವವಿದ್ಯಾನಿಲಯಗಳ ಕಾಯ್ದೆಗೆ ತಿದ್ದುಪಡಿ ತಂದು, ಯಾವುದೇ ಮೂಲಸೌಕರ್ಯ ಕಲ್ಪಿಸದೆ ಜಿಲ್ಲೆಗಳಲ್ಲಿ ಇದ್ದ ಸ್ನಾತಕೋತ್ತರ ಕೇಂದ್ರಗಳನ್ನೇ ವಿಶ್ವವಿದ್ಯಾನಿಲಯಗಳೆಂದು ಘೋಷಿಸಿರುವುದು ಸರಿಯಲ್ಲ. ಕುಲಪತಿಗಳು, ಕುಲಸಚಿವರನ್ನು ನೇಮಕ ಮಾಡಿ ಲೂಟಿ ಹೊಡೆಯಲು ಬಿಜೆಪಿ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಂತಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ವಿಶ್ರಾಂತ ಕುಲಪತಿ ಪಠಾಣ್ ವರದಿ ಪ್ರಕಾರ ಒಂದು ವಿಶ್ವವಿದ್ಯಾನಿಲಯದ ಐದು ವರ್ಷಗಳ ನಿರ್ವಹಣೆಗೆ 340 ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ, ಬಿಜೆಪಿ ಸರ್ಕಾರ ಮಾಡಿರುವ ಹೊಸ ವಿವಿಗಳ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ 34000 ಕೋಟಿ ರೂ. ಬೇಕಾಗುತ್ತದೆ. ಇದು ದುಂದು ವೆಚ್ಚ. ಹೀಗಾಗಿ ಈ ವಿವಿಗಳನ್ನು ಮುಚ್ಚುವುದು ಒಳಿತು ಎಂದು ಅವರು ಹೇಳಿದರು.

ಯುಜಿಸಿ ನಿಯಮಾವಳಿ ಪ್ರಕಾರ ಒಂದು ವಿಶ್ವವಿದ್ಯಾನಿಲಯ ಸ್ಥಾಪನೆಗೆ 100 ಎಕರೆ ಜಮೀನಿರಬೇಕು. ಆದರೆ, ಈ ನಿಯಮಾವಳಿಯನ್ನೇ ಪಾಲಿಸಿಲ್ಲ. ಬದಲಿಗೆ ಈ ವಿವಿಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನಾಗಲೀ, ವಾಹನವನ್ನಾಗಲೀ ಖರೀದಿಸುವಂತಿಲ್ಲ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾನಿಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಬಳಸಿಕೊಂಡು ಸ್ಥಾಪಿಸುವುದು. ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ ಎಂದು ಬಿಜೆಪಿ ಸರ್ಕಾರ ಹೇಳಿದೆ. ಇದು ಬಿಜೆಪಿಯವರಿಗೆ ಉನ್ನತ ಶಿಕ್ಷಣದ ಬಗೆಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದಾರೆ. ಚುನಾವಣೆ ಸಮೀಪದಲ್ಲಿದ್ದಾಗ ತರಾತುರಿಯಲ್ಲಿ ಯಾರೂ ಕೇಳದಿದ್ದರೂ ಹೊಸ ವಿವಿಗಳನ್ನು ಸ್ಥಾಪಿಸಿ, ಕುಲಪತಿ ಹುದ್ದೆಗಳನ್ನು ಹರಾಜು ಹಾಕಿದರು. ಇದನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ ಕೂಡಲೇ ಬಿಜೆಪಿಯವರಿಗೆ ತಳಮಳ ಶುರುವಾಗಿದೆ ಎಂದು ಅವರು ಕುಟುಕಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎನ್.ಎಸ್. ಗೋಪಿನಾಥ್, ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ಎಲ್. ಗೌಡ, ರೇವಣ್ಣ ಇದ್ದರು.