ಕೌಟುಂಬಿಕ ವ್ಯಾಜ್ಯದಲ್ಲಿ ತೊಡಗಿರುವ ಪತಿ-ಪತ್ನಿ ಪೈಕಿ ಯಾರಾದರೊಬ್ಬರು ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್‌ ನೀಡುವಂತೆ ಅರ್ಜಿ ಸಲ್ಲಿಸಿದಾಗ ಮಗುವಿನ ಸುಪರ್ದಿ ಬಗ್ಗೆ ವಾಸ್ತವಾಂಶಗಳನ್ನು ಸರಿಯಾಗಿ ಘೋಷಿಸಬೇಕು ಎಂದು ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ವ್ಯಾಜ್ಯದಲ್ಲಿ ತೊಡಗಿರುವ ಪತಿ-ಪತ್ನಿ ಪೈಕಿ ಯಾರಾದರೊಬ್ಬರು ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್‌ ನೀಡುವಂತೆ ಅರ್ಜಿ ಸಲ್ಲಿಸಿದಾಗ ಮಗುವಿನ ಸುಪರ್ದಿ ಬಗ್ಗೆ ವಾಸ್ತವಾಂಶಗಳನ್ನು ಸರಿಯಾಗಿ ಘೋಷಿಸಬೇಕು ಎಂದು ಆದೇಶಿಸಿದೆ.

ತಮಗೆ ಹೊಸ ಪಾಸ್‌ಪೋರ್ಟ್‌ ನೀಡುವಂತೆ ಮತ್ತು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ ನವೀಕರಣಕ್ಕೆ ನಿರ್ದೇಶನ ನೀಡುವಂತೆ ಕೋರಿ ಇಬ್ಬರು ಅಪ್ರಾಪ್ತ ಮಕ್ಕಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಪತಿ-ಪತ್ನಿಯಲ್ಲಿ ಯಾರಾದರೊಬ್ಬರು ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್‌ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಮಗುವಿನ ಸುಪರ್ದಿ ಬಗ್ಗೆ ಸುಳ್ಳು ಘೋಷಣೆ ಮಾಡಿದರೆ ಅದನ್ನು ಮಾನ್ಯ ಮಾಡಲಾಗದು. ಹಾಗಾಗಿ, ಪೋಷಕರು ಪಾಸ್‌ಪೋರ್ಟ್‌ಗಳಲ್ಲಿ ವಾಸ್ತವಾಂಶಗಳನ್ನು ಸರಿಯಾಗಿ ಘೋಷಿಸಬೇಕು. ಒಂದು ವೇಳೆ ವಿಚ್ಛೇದನವಾಗಿದ್ದರೆ ಮತ್ತು ಮಗುವಿನ ಸುಪರ್ದಿಯ ಕುರಿತು ಆದೇಶಗಳಿದ್ದರೆ, ಆ ದಾಖಲೆಗಳನ್ನು ಪಾಸ್‌ಪೋರ್ಟ್‌ ವಿತರಣೆ/ನವೀಕರಣಕ್ಕೆ ಕೋರಿದ ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಪೀಠ ಆದೇಶಿಸಿದೆ.ಅಲ್ಲದೆ, ಪ್ರಕರಣದಲ್ಲಿ ಅರ್ಜಿದಾರರು ಅಪ್ರಾಪ್ತ ವಯಸ್ಕರಾಗಿದ್ದಾರೆ, ಪೋಷಕರು ಈಗ ಪಾಸ್‌ಪೋರ್ಟ್‌ ನೀಡಲು ಯಾವುದೇ ಆಕ್ಷೇಪಣೆ ಇಲ್ಲವೆಂದು ಪತ್ರ ನೀಡಿದ್ದಾರೆ. ಹಾಗಾಗಿ ಪಾಸ್‌ಪೋರ್ಟ್‌ ಅರ್ಜಿಗೆ ಒಪ್ಪಿಗೆ ನೀಡಬೇಕು. ಪಾಸ್‌ಪೋರ್ಟ್‌ಗಳ ಮರುವಿತರಣೆಗಾಗಿ ಅರ್ಜಿಗಳ ಪ್ರಕ್ರಿಯೆ ಮುಂದುವರಿಸಲು ಮತ್ತು ಅರ್ಜಿದಾರರು ತಾಯಿ ಮತ್ತು ತಂದೆ ಇಬ್ಬರೂ ಸಹಿ ಮಾಡಿ ಘೋಷಣೆ ಪತ್ರ ಸಲ್ಲಿಸಿದ ಹತ್ತು ದಿನಗಳಲ್ಲಿ ಅಗತ್ಯ ಆದೇಶಗಳನ್ನು ಮಾಡಬೇಕು ಎಂದು ಪಾಸ್‌ಪೋರ್ಟ್‌ ಅಧಿಕಾರಿಗಳಿಗೆ ಪೀಠ ಆದೇಶಿಸಿದೆ.

ಅರ್ಜಿದಾರರು ಅಪ್ರಾಪ್ತ ವಯಸ್ಕರಾಗಿರುವುದರಿಂದ, ಪಾಸ್‌ಪೋರ್ಟ್‌ ವಿತರಣೆಗೆ ಇಬ್ಬರೂ ತಂದೆ-ತಾಯಿಂದ ಅಗತ್ಯ ಒಪ್ಪಿಗೆ ಪತ್ರ ಲಗತ್ತಿಸದ ಕಾರಣ ಅವರ ಅರ್ಜಿಗಳನ್ನು ಪಾಸ್‌ಪೋರ್ಟ್‌ ಇಲಾಖೆ ಪರಿಗಣಿಸಿರಲಿಲ್ಲ. ಇದರಿಂದ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.