ಕೆನೆಪದರ ಜಾರಿಯಾದಲ್ಲಿ ಮೀಸಲು ಉದ್ದೇಶವೇ ಉಪೇಕ್ಷೆ

| Published : Aug 05 2024, 12:37 AM IST

ಕೆನೆಪದರ ಜಾರಿಯಾದಲ್ಲಿ ಮೀಸಲು ಉದ್ದೇಶವೇ ಉಪೇಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಚರ್ಚಾ ಗೋಷ್ಠಿಯನ್ನು ಬಿ.ಪಿ.ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಚರ್ಚಾ ಗೋಷ್ಠಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆರ್ಥಿಕ ವಿಮೋಚನೆಯನ್ನೇ ಮಾನದಂಡವಾಗಿಟ್ಟುಕೊಂಡು ಕೆನೆಪದರು ಜಾರಿಗೆ ತಂದು ಸಾಮಾಜಿಕ ವಿಮೋಚನೆ ಅಮಾನ್ಯ ಮಾಡಿದರೆ ಮೀಸಲಾತಿ ಉದ್ದೇಶವೇ ಉಪೇಕ್ಷಿಸಿದಂತಾಗುತ್ತದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಒಳ ಮೀಸಲಾತಿ ವರ್ಗೀಕರಣ ಸುಪ್ರೀಂಕೋರ್ಟ್ ತೀರ್ಪು- ಪರಿಶಿಷ್ಟ ಜಾತಿಗಳ ಮೈತ್ರಿ ಎಂಬ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಕೆನೆಪದರು ಪರಿಗಣಿಸುವಂತೆ ಸೂಚನೆ ನೀಡಿರುವುದು ಕಡ್ಡಾಯವೇನಲ್ಲ. ಕೆನೆಪದರ ಅವಶ್ಯಕತೆ ಇದೆ ಆದರೆ ಚರ್ಚಿಸಲು ಈಗ ಸಕಾಲವಲ್ಲ ಎಂದರು.

ಮಳೆ, ಗಾಳಿ, ಚಳಿ ಬಿಸಿಲನ್ನದೆ ಹಗಲಿರುಳು ಅಸಂಖ್ಯಾತ ಜನರ ಹೋರಾಟ, ರಸ್ತೆಯಲ್ಲಿ ಹರಿದ ನೆತ್ತರ, ಹಲವಾರು ಪ್ರಾಣ ತ್ಯಾಗಗಳ ಫಲವಾಗಿ ಸುಪ್ರೀಂ ಕೋರ್ಟ್‍ನ ಈ ಒಳ ಮೀಸಲು ವರ್ಗೀಕರಣ ತೀರ್ಪು ಹೊರ ಬಂದಿದೆ. ಪ್ರಧಾನಮಂತ್ರಿಯಾಗಿ ದೇಶ ಆಳುವ ಅವಕಾಶವನ್ನು ದಲಿತರು ಮತ್ತೊಮ್ಮೆ ಕಳೆದು ಕೊಳ್ಳಬಾರದು. ಸಾಮಾಜಿಕ ವಿಮೋಚನೆ ಆಗುವವರೆಗೂ ಮೀಸಲಾತಿ ಬೇಕೆಂಬುದು ಸತ್ಯವಾದರೂ ಕಟ್ಟಕಡೆಯ ಮನುಷ್ಯನಿಗೆ ಮೀಸಲಾತಿ ಸೌಲಭ್ಯ ದೊರಕುವ ಬಗ್ಗೆ ಪ್ರಜ್ಞರೆಲ್ಲರೂ ಎಚ್ಚರ ವಹಿಸುವ ಅವಶ್ಯಕತೆ ಇದೆ.

ಕೆಲವು ಹಿರಿಯರು ಸಂವಿಧಾನ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳುತ್ತಿರುವುದು ದುರದೃಷ್ಟಕರ. ಪರಿಶಿಷ್ಟರಿಗೆ ಒಳ ಮೀಸಲು ನೀಡುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವೆಂದು ಸುಪ್ರೀಂ ತೀರ್ಪು ಸ್ಪಷ್ಟವಾಗಿ ಹೇಳಿದೆ. ಒಳಮೀಸಲಾತಿ ಪರ-ವಿರೋಧದ ಸಂಘರ್ಷದಲ್ಲಿ ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳು ಹಲವು ಗುಂಪುಗಳಾಗಿ ಛಿದ್ರವಾಗಿವೆ. ವಾದ-ವಿವಾದದಲ್ಲಿ ತೊಡಗಿದ್ದ ದಲಿತ ಮಠಾಧೀಶರು, ರಾಜಕಾರಣಿಗಳು, ಸಂಘ-ಸಂಸ್ಥೆಗಳ ನಾಯಕರು ಪ್ರೀತಿ-ಮೈತ್ರಿಯಿಂದ ಮೀಸಲಾತಿ ಬಗ್ಗೆ ಒಕ್ಕೂರಲಿನಿಂದ ನಿಗದಿತ ಅವಧಿಯೊಳಗೆ ಜಾರಿಗೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಆ ನಿಟ್ಟಿನಲ್ಲಿ ಸಾಮರಸ್ಯದ ಕಾರ್ಯ ಕ್ರಮಗಳ ಹಾಕಿಕೊಳ್ಳಬೇಕಾಗಿದೆ ಎಂದರು.

ಆಗೊಮ್ಮೆ ಈಗೊಮ್ಮೆ ಒಳಮೀಸಲಾತಿ ಪರಹೇಳಿಕೆ ನೀಡುತ್ತಿದ್ದ ಅಂಬೇಡ್ಕರ್ ಹೆಸರಿನ ಚಳುವಳಿಯ ಕೆಲವು ನಾಯಕರ ಮತ್ತೆ ಡಬಲ್ ಗೇಮ್ ಮಾಡಿದರೆ ದಲಿತರು ಒಗ್ಗೂಡಲು ಇರುವ ಬಹುದೊಡ್ಡ ಅವಕಾಶ ಕಳೆದುಕೊಂಡಂತಾಗುತ್ತದೆ ಎಂದರು.

ಸಮಾಜದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಪರಿಶಿಷ್ಟ ಜಾತಿಯ ಎಲ್ಲ ಮುಖಂಡರನ್ನು ಒಂದೆಡೆ ಸೇರಿಸಿ, ಒಮ್ಮತ ಮೂಡಿಸಿ ತಮ್ಮದೇ ಸರ್ಕಾರ ರಾಜ್ಯದಲ್ಲಿರುವುದರಿಂದ ಒಳ ಮೀಸಲು ಜಾರಿಗೆ ತರುವ ಮೂಲಕ ಅಂಬೇಡ್ಕರ್ ನೀಡಿದ ಮೀಸಲಾತಿಯನ್ನು ಕಿತ್ತಾಟವಿಲ್ಲದೆ ಪರಿಶಿಷ್ಟರಿಗೆ ಹಂಚಿದ ಕೀರ್ತಿ ತಮ್ಮದಾಗಿಸಿಕೊಳ್ಳಬೇಕು. ಆ ಮುಖೇನ ಪರಿಶಿಷ್ಟರಲ್ಲಿ ಮೈತ್ರಿ ಗಟ್ಟಿಯಾಗಿಸಿ ಇತಿಹಾಸ ಪುರುಷರಾಗಲೆಂದು ಮನವಿ ಮಾಡಿ ಕೊಳ್ಳೋಣ ಎಂದರು.

ಎದ್ದೇಳು ಕರ್ನಾಟಕ ಜಿಲ್ಲಾ ಘಟಕದ ಪುರುಷೋತ್ಮ ತೋರಣಗಟ್ಟೆ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಒಡನಾಡಿಗಳು ಹಾಗೂ ಅನುಯಾಯಿಗಳು ಸೂಕ್ಷ್ಮ ಮತ್ತು ಎಚ್ಚರದಿಂದ ಒಳ ಮೀಸಲಾತಿ ಜಾರಿಗೆ ಕಾರ್ಯನಿರ್ವಹಿಸುವ ಮೂಲಕ ದಲಿತ ಚರಿತ್ರೆ ಪುನರ್ ನಿರ್ಮಿಸುವ ಅವಕಾಶ ಕಳೆದುಕೊಳ್ಳಬಾರದು ಎಂದರು.

ಈ ವೇಳೆ ಭೀಮ್ ಆರ್ಮಿ ಅಧ್ಯಕ್ಷ ಸಿ.ಎಲ್.ಅವಿನಾಶ್ ಮಾತನಾಡಿದರು. ನಿವೃತ್ತ ಪಿಎಸ್‌ಐ ಕೃಷ್ಣಪ್ಪ, ಬಿಎಸ್‍ಐ ರಾಜ್ಯ ಉಪಾಧ್ಯಕ್ಷ ಬನ್ನಿಕೊಡ ಹನುಮಂತಪ್ಪ, ಉಪನ್ಯಾಸಕ ಈ.ನಾಗೇಂದ್ರಪ್ಪ, ಬೆಸ್ಕಾಂ ತಿಪ್ಪೇರುದ್ರಪ್ಪ, ಶಿಕ್ಷಕಿ ಗಿರಿಜಾ, ಅಮೂಲ್ಯ, ಶಾಂತಮ್ಮ ಲಕ್ಷ್ಮೀದೇವಿ ಇತರರಿದ್ದರು.