ಹಳಿಯೂರು ಗ್ರಾಮದಲ್ಲಿ ವಾಂತಿ ಬೇಧಿ: 12 ಜನರಿಗೆ ಚಿಕಿತ್ಸೆ

| Published : Jul 30 2024, 12:31 AM IST

ಸಾರಾಂಶ

ತರೀಕೆರೆ, ಪಟ್ಟಣ ಸಮೀಪದ ಪುರಸಭಾ ವ್ಯಾಪ್ತಿಯ ಹಳಿಯೂರು ಗ್ರಾಮದಲ್ಲಿ ಕೆಲವರಿಗೆ ಏಕಾಏಕಿ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದ ಆರೋಗ್ಯ ಇಲಾಖೆ ಮತ್ತು ಪುರಸಭೆ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಿದೆ.

ಶಿವಮೊಗ್ಗ ಮೆಗ್ಗಾನ್, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ । ಆರೋಗ್ಯದಲ್ಲಿ ಚೇತರಿಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣ ಸಮೀಪದ ಪುರಸಭಾ ವ್ಯಾಪ್ತಿಯ ಹಳಿಯೂರು ಗ್ರಾಮದಲ್ಲಿ ಕೆಲವರಿಗೆ ಏಕಾಏಕಿ ವಾಂತಿ ಬೇಧಿ ಕಾನಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದ ಆರೋಗ್ಯ ಇಲಾಖೆ ಮತ್ತು ಪುರಸಭೆ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಿದೆ.

ಶಿವಮೊಗ್ಗ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತೆ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ದಾಖಲಾದ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಕರಣದ ಕುರಿತು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕಳೆದ ಎರಡು ದಿನಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ತಂಡ ಗ್ರಾಮದಲ್ಲಿದೆ. ಪ್ರತೀ ಮನೆಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರೆಯಲಾಗಿದೆ. ವೈದ್ಯರ ತಂಡ, ಅಂಬುಲೆನ್ಸ್, ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕುಡಿಯುವ ನೀರಿನ ಸ್ಯಾಂಪಲ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಸದ್ಯ ಪ್ರತೀ ಮನೆಗೆ ಕ್ಯಾನ್ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಮತ್ತಷ್ಟು ಮುತುವರ್ಜಿ ವಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮತ್ತು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾಹಿತಿ ನೀಡಿದರು.

ಪುರಸಭೆ ಸದಸ್ಯ ಹಳಿಯೂರು ಕುಮಾರ್ ಮಾತನಾಡಿ ಮೊದಲು ಗ್ರಾಮದ ವ್ಯಕ್ತಿಯೊಬ್ಬರಿಗೆ ವಾಂತಿ ಬೇಧಿಯಾಗಿತ್ತು. ಊಟದಲ್ಲಿ ವ್ಯತ್ಯಾಸವಾಗಿರಬಹುದು ಎಂದುಕೊಂಡಿದ್ದೆವು. ಗ್ರಾಮದಲ್ಲಿ ಮತ್ತೆ ಕೆಲವರಿಗೆ ವಾಂತಿ ಭೇಧಿಯಾದಾಗ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಈ ಕಾಯಿಲೆ ಕಾಣಿಸಿಕೊಂಡ ಎಲ್ಲರಿಗೂ ಶಿವಮೊಗ್ಗದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೊಳಗಾದವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರು ಹಳಿಯೂರು ಸೋಮಶೇಖರ್ ಅವರು ಮಾತನಾಡಿ ಹಳಿಯೂರಿನಲ್ಲಿ ಪುರಸಭೆ ಶುದ್ದವಾದ ನೀರನ್ನು ಸರಬರಾಜು ಮಾಡಬೇಕು ನೈರ್ಮಲ್ಯಕ್ಕೆ ಹೆಚು ಒತ್ತು ಕೊಡಬೇಕು, ಪುರಸಭೆ ಸ್ವಚ್ಚತೆ ಕಾಪಾಡಬೇಕು ಎಂದು ಒತ್ತಾಯಿಸಿದರು.ಹಳಿಯೂರು ಗ್ರಾಮದಲ್ಲಿ ಕೆಲವರು ತಮ್ಮ ಸ್ವಂತ ಬೋರ್‌ವೆಲ್‌ಗಳ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಉಳಿದ ಮನೆಗಳಲ್ಲಿ ಪುರಸಭೆಯಿಂದ ಸರಬರಾಜು ಮಾಡುವ ನೀರನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿಯಿದೆ. ವಾಂತಿ ಬೇಧಿ ಆಗಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಹಲವು ಜನರು ಭಾನುವಾರ ಹಳಿಯೂರು ಗ್ರಾಮದಿಂದ ಬಂದಾಗ, ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದಾರೆ.

ಗ್ರಾಮಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್, ಎಸಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವತ್‌ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.

29ಕೆಟಿಆರ್.ಕೆ.1ಃ

ಹಳಿಯೂರು ಗ್ರಾಮಕ್ಕೆ ಪುರಸಭೆ ಸದಸ್ಯ ಹಳಿಯೂರು ಕುಮಾರ್, ಸಾರ್ವಜನಿಕ ಆಸ್ಪತ್ರೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲಿಸಿದರು.