ಕನಕಪುರ ತಾಲೂಕಲ್ಲಿ ನಾಳೆ, ನಾಡಿದ್ದು ಮನೆ ಮತದಾನ

| Published : Apr 12 2024, 01:06 AM IST

ಸಾರಾಂಶ

ಕನಕಪುರ: ಏಪ್ರಿಲ್‌13 ಮತ್ತು 14ರಂದು ತಾಲೂಕಾದ್ಯಂತ ಮನೆ ಮತದಾನ ನಡೆಸಲಾಗುವುದು ಸಹಾಯಕ ಚುನಾವಣಾ ಅಧಿಕಾರಿ ರಾಘವೇಂದ್ರ ತಿಳಿಸಿದರು.

ಕನಕಪುರ: ಏಪ್ರಿಲ್‌13 ಮತ್ತು 14ರಂದು ತಾಲೂಕಾದ್ಯಂತ ಮನೆ ಮತದಾನ ನಡೆಸಲಾಗುವುದು ಸಹಾಯಕ ಚುನಾವಣಾ ಅಧಿಕಾರಿ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 1,13,418 ಪುರುಷ, 1,17,836 ಮಹಿಳಾ ಮತ್ತು 7 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,72,896 ಮತದಾರರಿದ್ದಾರೆ. ಹಿರಿಯ ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಅವರವರ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ತಾಲೂಕಿನಲ್ಲಿ 352 ಮತದಾರರು ಮನೆಯಲ್ಲೇ ಮತದಾನ ಮಾಡಲು ಹೆಸರು ನೊಂದಾಯಿಸಿಕೊಂಡಿದ್ದು, ಅವರಿಗಾಗಿ 13, 14ರಂದು ಬೆಳಗ್ಗೆ 7.30ರಿಂದ ಅಂಚೆ ಮತದಾನ ಪ್ರಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಹತ್ತು ತಂಡಗಳು ಸತತ ಎರಡು ದಿನಗಳ ಕಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸಲಿವೆ. ಒಂದು ತಂಡದಲ್ಲಿ ಒಬ್ಬ ಪಿಆರ್ ಒ, ಬಿಆಲ್ ಒ, ಪೊಲೀಸ್ ಸಿಬ್ಬಂದಿ ಸೇರಿ ಐವರಿದ್ದು ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ತಾಲೂಕಿನ 297 ಮತಗಟ್ಟೆಗಳಲ್ಲಿ 61 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆ ಗಳೆಂದು ಹಾಗೂ ಕಸಬಾ ಹೋಬಳಿಯ ನಾರಾಯಣಪುರ ಮತ್ತು ಕೋಡಿಹಳ್ಳಿ ಹೋಬಳಿಯ ಹಲಸೂರು ಮತಗಟ್ಟೆಯನ್ನು ದುರ್ಬಲ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದರು.

ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಮಾಹಿತಿ ನೀಡಲಾಗಿದ್ದು ಯಾವುದೇ ಗೊಂದಲ, ಸಂಶಯಕ್ಕೆ ಎಡಮಾಡಿಕೊಡದೇ ಅತ್ಯಂತ ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ತಮ್ಮ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಇದರ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ತಹಸೀಲ್ದಾರ್ ಸ್ಮಿತಾ ರಾಮು ಮಾತನಾಡಿ, ತಾಲೂಕಿನ ಶೇ. 90ರಷ್ಟು ಮತದಾರರ ಆಧಾರ್‌ ಕಾರ್ಡನ್ನು ಮತದಾರರ ಪಟ್ಟಿ ಜೊತೆ ಜೋಡಿಸಲಾಗಿದ್ದು ಯಾವುದೇ ರೀತಿಯ ನಕಲು ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದರು.ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕು ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಹಸೀಲ್ದಾರ್ ಸ್ಮಿತಾ ರಾಮು, ಮತ್ತಿತರ ಅಧಿಕಾರಿಗಳು ಹಾಜರಿದ್ದರು.