ಕೊಪ್ಪಳದಲ್ಲಿ 8 ಸಾವಿರ ಮನೆಗಳ ನಲ್ಲಿಗಳು ಅಕ್ರಮ!

| Published : Sep 28 2024, 01:17 AM IST

ಸಾರಾಂಶ

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 8 ಸಾವಿರ ಅಕ್ರಮ ನಲ್ಲಿ ಸಂಪರ್ಕ ಇದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹತ್ತಾರು ವರ್ಷಗಳಿಂದ ನಗರಸಭೆಯಿಂದ ನೀರು ಪಡೆಯುವ ಇವರು ಇದುವರೆಗೂ ಒಂದೇ ಒಂದು ಪೈಸೆ ನಗರಸಭೆಗೆ ನೀರಿನ ಕರ ಕಟ್ಟಿಲ್ಲ!

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 8 ಸಾವಿರ ನಲ್ಲಿಗಳು ಅಕ್ರಮವಾಗಿವೆ. ಹತ್ತಾರು ವರ್ಷಗಳಿಂದ ನಗರಸಭೆಯಿಂದ ನೀರು ಪಡೆಯುವ ಇವರು ಇದುವರೆಗೂ ಒಂದೇ ಒಂದು ಪೈಸೆ ನೀರಿನ ಕರ ಕಟ್ಟಿಲ್ಲ! ನಲ್ಲಿಯಲ್ಲಿ ಬರುವ ನೀರು ಅನಾಯಾಸವಾಗಿ ಬಳಕೆ ಮಾಡಿಕೊಂಡು ಹಾಯಾಗಿದ್ದಾರೆ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ, ದಿನದ 24 ಗಂಟೆಗಳ ಕಾಲ ಕೊಪ್ಪಳ ನಗರಕ್ಕೆ ನೀರು ಪೂರೈಕೆ ಮಾಡುವ ₹139 ಕೋಟಿಯ ಯೋಜನೆ ಜಾರಿ ಮಾಡಲು ನಡೆಸಿದ ಸರ್ವೆಯಲ್ಲಿ ಈ ಅಕ್ರಮ ನಲ್ಲಿಯ ಲೆಕ್ಕ ಬೆಳಕಿಗೆ ಬಂದಿದೆ.

ಇದು ನಗರಸಭೆಯನ್ನು ನಿದ್ದೆಗೆಡುವಂತೆ ಮಾಡಿದೆ. ನಗರ ನೀರು ಸರಬರಾಜ ಇಲಾಖೆ ಮಾಡಿರುವ ಲೆಕ್ಕಾಚಾರವನ್ನು ಹಿಡಿದು ತಾಳೆ ಹಾಕಿ ನೋಡಿ, ಬೆರಗಾಗಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ 10 ಸಾವಿರ ನಲ್ಲಿಗಳು ಮಾತ್ರ ಸಕ್ರಮವಾಗಿವೆ. ಉಳಿದ 8 ಸಾವಿರ ನಲ್ಲಿಗಳು ಅಕ್ರಮವಾಗಿವೆ ಎನ್ನುವ ಮಾಹಿತಿ ಗೊತ್ತಾಗಿದೆ.

ಸಕ್ರಮಕ್ಕೆ ₹5215 ತುಂಬಿ: ನಗರಸಭೆಯಲ್ಲಿ ಅಕ್ರಮ ನಲ್ಲಿಗಳ ಲೆಕ್ಕಾಚಾರದಿಂದ ಬೆಚ್ಚಿಬಿದ್ದಿರುವ ನಗರಸಭೆ ತಡಮಾಡದೆ ಅವುಗಳನ್ನು ಸಕ್ರಮ ಮಾಡಲು ಮುಂದಾಗಿದೆ. ₹5215 ಪಾವತಿ ಮಾಡಿ, ನಲ್ಲಿಗಳನ್ನು ಸಕ್ರಮ ಮಾಡಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

ನಲ್ಲಿಗಳನ್ನು ಸಕ್ರಮ ಮಾಡಿಕೊಳ್ಳದಿದ್ದರೆ ತಕ್ಷಣ ನಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು ಮತ್ತು ಇಷ್ಟು ವರ್ಷಗಳ ಕಾಲ ನಲ್ಲಿಯ ನೀರು ಬಳಕೆ ಮಾಡಿಕೊಂಡಿರುವುದಕ್ಕೆ ದಂಡ ವಸೂಲಿ ಮಾಡಲಾಗುತ್ತದೆ. ಮನೆ ನಿರ್ಮಾಣವಾದಾಗಿನಿಂದ ನಲ್ಲಿಯ ಬಿಲ್‌ ಕಟ್ಟಬೇಕಾಗುತ್ತದೆ ಎಂದು ಕಟ್ಟೆಚ್ಚರ ನೀಡಲಾಗಿದೆ. ಹತ್ತಾರು ವರ್ಷಗಳಿಂದ ಲೆಕ್ಕ ಹಾಕಿದರೆ ₹50-60 ಸಾವಿರ ದಂಡ ಬೀಳುತ್ತದೆ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದೇ ತಡ ನಲ್ಲಿಯನ್ನು ಸಕ್ರಮಗೊಳಿಸಿಕೊಳ್ಳುತ್ತಿದ್ದಾರೆ.

₹4-5 ಕೋಟಿ ಆದಾಯ: ಅಕ್ರಮವಾಗಿರುವ ನಲ್ಲಿಗಳೆಲ್ಲ ಸಕ್ರಮವಾಗಿದ್ದೇ ಆದರೆ ನಗರಸಭೆ ₹4ರಿಂದ ₹5 ಕೋಟಿ ಆದಾಯ ಬರುತ್ತದೆ. ಇದು ನಿರಂತರವಾಗಿರುವ ಆದಾಯವಾಗುವುದರಿಂದ ನಗರಸಭೆಯ ಆದಾಯವೂ ಹೆಚ್ಚಳವಾಗಲಿದೆ. ನಲ್ಲಿ ಸಂಪರ್ಕ ಪಡೆದು ನೀರು ಬಳಕೆ ಮಾಡಿಕೊಳ್ಳುತ್ತಿದ್ದರೂ ನಮ್ಮ ಮನೆಯಲ್ಲಿ ನಲ್ಲಿಯೇ ಇಲ್ಲ ಎಂದು ಸುಳ್ಳು ಮಾಹಿತಿ ನೀಡಿ, ನೀರಿನ ಬಿಲ್‌ ಪಾವತಿ ಮಾಡದೆ ಇರುವುದು ನಗರಸಭೆಗೆ ಆಘಾತ ಉಂಟುಮಾಡಿದೆ.

ನಲ್ಲಿಯ ನೀರು: ಅಕ್ರಮ ಸಂಪರ್ಕ ಪಡೆದ ಹಿನ್ನೆಲೆಯಲ್ಲಿ ನಗರದಲ್ಲಿರುವ ನಲ್ಲಿಯ ಲೆಕ್ಕಾಚಾರ ಸರಿಯಾಗಿ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಕೊಪ್ಪಳ ನಗರಕ್ಕೆ ನೀರು ತರುವ ಯೋಜನೆಯನ್ನು ತಯಾರು ಮಾಡುವ ವೇಳೆಯಲ್ಲಿಯೂ ಇದರಿಂದ ಸಮಸ್ಯೆಯಾಗಿದೆ. ಅರ್ಧಕ್ಕರ್ಧ ನಲ್ಲಿಗಳ ಲೆಕ್ಕವೇ ಇಲ್ಲದೆ ಇರುವುದರಿಂದಲೇ ಕೊಪ್ಪಳ ನಗರಕ್ಕೆ ಸರಿಯಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಅಕ್ರಮ ಸಕ್ರಮದ ಬಳಿಕ ಪ್ರತಿ ವಾರ್ಡ್ ಮತ್ತು ನೂತನ ಏರಿಯಾಗಳಿಗೂ ತುಂಗಭದ್ರಾ ನೀರು ಪೂರೈಕೆ ಮಾಡಲು ನಗರಸಭೆ ಯೋಜನೆ ರೂಪಿಸಲಿದೆ.ನಗರದಲ್ಲಿ ಅರ್ಧದಷ್ಟು ಅಕ್ರಮ ನಲ್ಲಿಗಳೇ ಇವೆ. ಹೀಗಾಗಿ ನೀರಿನ ಕರ ನಮಗೆ ಬಹಳ ಬರುತ್ತಿರಲಿಲ್ಲ. ಈಗ ಅವುಗಳ ಪತ್ತೆಯಾಗಿದ್ದು, ಅವುಗಳ ಸಕ್ರಮಕ್ಕೆ ವಿಶೇಷ ಅವಕಾಶ ನೀಡಲಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕಾಗಿದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್ ಹೇಳಿದ್ದಾರೆ.