ಸಾರಾಂಶ
ಯಾವ ಪ್ರದೇಶದಲ್ಲಿ ಸಹಕಾರಿ ಸಂಸ್ಥೆ ಜೀವಂತವಾಗಿರುತ್ತದೋ, ಆ ಜಿಲ್ಲೆಯ ಜನ ಅಷ್ಟೇ ಸುಖವಾಗಿರಲು ಸಾಧ್ಯ. ಎಲ್ಲಿ ಗಟ್ಟಿಯಾದ ಸಹಕಾರಿ ಸಂಸ್ಥೆ ಇಲ್ಲವೋ, ಅಲ್ಲಿ ರೈತರೂ ಮೀಟರ್ ಬಡ್ಡಿಗೆ ಸಿಲುಕಿ ಕಷ್ಟದಲ್ಲಿದ್ದಾರೆ.
ಯಲ್ಲಾಪುರ: ನಮ್ಮ ಜಿಲ್ಲೆ ರಾಜ್ಯದಲ್ಲೇ ಸಹಕಾರಿ ಕ್ಷೇತ್ರದಲ್ಲಿ ಬಹು ಎತ್ತರದ ಸ್ಥಾನದಲ್ಲಿದೆ. ಅದಕ್ಕೆ ನಮ್ಮ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ, ನಿಷ್ಠೆ, ಕಾರ್ಯತತ್ಪರತೆ, ಕಠಿಣ ಪರಿಶ್ರಮದಿಂದಾಗಿ ಆ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.
ನ. ೧೮ರಂದು ಕುಂದರಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ₹೨.೫ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಟ್ಟಡದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.ಯಾವ ಪ್ರದೇಶದಲ್ಲಿ ಸಹಕಾರಿ ಸಂಸ್ಥೆ ಜೀವಂತವಾಗಿರುತ್ತದೋ, ಆ ಜಿಲ್ಲೆಯ ಜನ ಅಷ್ಟೇ ಸುಖವಾಗಿರಲು ಸಾಧ್ಯ. ಎಲ್ಲಿ ಗಟ್ಟಿಯಾದ ಸಹಕಾರಿ ಸಂಸ್ಥೆ ಇಲ್ಲವೋ, ಅಲ್ಲಿ ರೈತರೂ ಮೀಟರ್ ಬಡ್ಡಿಗೆ ಸಿಲುಕಿ ಕಷ್ಟದಲ್ಲಿದ್ದಾರೆ. ಹಾವೇರಿಯಂತಹ ಹಲವು ಜಿಲ್ಲೆಗಳನ್ನು ನೋಡಿದರೆ ತಿಳಿದುಕೊಳ್ಳಬಹುದು ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸಹಕಾರಿ ಸಂಘಗಳು ರೈತರಿಗೆ ಮೊದಲ ಸರ್ಕಾರ. ಹಳ್ಳಿಯ ಜನರಿಗೆ ಎಲ್ಲ ರೀತಿಯ ಸಹಾಯ ಮಾಡುವ ಈ ಸಂಘಗಳು ಕೃಷಿ ಜಮೀನಿಲ್ಲದವರಿಗೂ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.ಯು.ಕೆ. ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಪುಟ್ಟ ಹಳ್ಳಿಯನ್ನು ಮಾವಿನಕಟ್ಟಾ ಎಂಬ ಪುಟ್ಟ ನಗರ ಮಾಡಿದ ಶ್ರೇಯಸ್ಸು ದಿ. ಎನ್.ಎಸ್. ಹೆಗಡೆಯವರಿಗೆ ಸಲ್ಲುತ್ತದೆ ಎಂದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಸಂಸ್ಥೆಗಳು ಗಟ್ಟಿಯಾದಂತೆ ಸದಸ್ಯರು ನೆಮ್ಮದಿ ಪಡೆಯಲು ಸಾಧ್ಯ. ಇಂದು ನಾವು ಮಿಶ್ರಬೆಳೆ ಬಿಟ್ಟು, ಅಡಕೆಗೆ ಪ್ರಧಾನತೆ ಕೊಡುತ್ತಿದ್ದೇವೆ. ಒಂದೆಡೆ ಎಲೆಚುಕ್ಕೆ ರೋಗ ಆತಂಕ ಉಂಟುಮಾಡುತ್ತಿದ್ದರೆ, ಇನ್ನೊಂದೆಡೆ ಉತ್ತಮ ಗುಣಮಟ್ಟದ ಅಡಿಕೆ ಉತ್ಪಾದಿಸಿದರೂ, ಕ್ಯಾನ್ಸರ್‌ನಂತಹ ರೋಗಕ್ಕೆ ಕಾರಣ ಎಂಬುದು ಮಾರಾಟದ ವ್ಯವಸ್ಥೆಯಲ್ಲೋ ಆಗುವ ಸನ್ನಿವೇಶ ಇರಬಹುದು ಎಂದರು.ಆರೋಗ್ಯ ಸುರಕ್ಷಾ ನಿಧಿಯ ಯೋಜನೆಗೆ ಚಾಲನೆ ನೀಡಿದ ಹಿರಿಯ ಸಹಕಾರಿ ಜಿ.ಟಿ. ಹೆಗಡೆ ತಟ್ಟೀಸರ ಮಾತನಾಡಿ, ಶಾಸನಸಭೆಯ ಸದಸ್ಯರ ನಾಮಕರಣವನ್ನು ಸಹಕಾರಿ ಕ್ಷೇತ್ರದಲ್ಲಿದ್ದವರಿಗೂ(ಎಂಎಲ್‌ಸಿ) ಮಾಡಬೇಕು. ತನ್ಮೂಲಕ ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಶಾಸಕ ಸಭೆಯಲ್ಲಿ ಹೋರಾಡಲು ಸಹಕಾರಿಯಾಗುತ್ತದೆ ಎಂದರು.ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಹುವರ್ಷ ಕೆಲಸ ಮಾಡಿದವರಿಗೆ ಇಂದಿನ ಕಾಲಘಟ್ಟದ ಸ್ಥಿತಿಯನ್ನು ಅವಲೋಕಿಸಿದರೆ ಆತಂಕ ಉಂಟಾಗುತ್ತಿದೆ. ಆದರೂ ಸಹಕಾರಿ ತತ್ವದ ಅಡಿಯಲ್ಲಿ ನಂಬಿಕೆ, ವಿಶ್ವಾಸದಿಂದ ಮುನ್ನಡೆಯಬೇಕಾಗುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಹೇರಂಬ ಹೆಗಡೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ನಮ್ಮ ಸಂಸ್ಥೆಯನ್ನು ಎನ್.ಎಸ್. ಹೆಗಡೆ ಕುಂದರಗಿಯವರ ನೇತೃತ್ವದಲ್ಲಿ ಬೆಳೆಸಿದ್ದೇವೆ. ನಮ್ಮ ಸಂಘದಲ್ಲಿ ಚುನಾವಣೆ ನಡೆಸದೇ ಪರಸ್ಪರ ಹೊಂದಾಣಿಕೆಯಿಂದ ಮುನ್ನಡೆಸಿಕೊಂಡು ಬಂದಿದ್ದೇವೆ. ಇದೆಲ್ಲದಕ್ಕೂ ನಮ್ಮ ಹಿರಿಯರು ಕಾರಣ. ಅಂತೆಯೇ ಗುತ್ತಿಗೆದಾರರು ಸುಂದರವಾದ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ೨೮ ಸದಸ್ಯರನ್ನು ಸನ್ಮಾನಿಸಿ, ೧೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಕಟ್ಟಡ ವಿನ್ಯಾಸಗಾರ ಹೆಗಡೆ ವಸಂತ ಭಟ್ಟ, ಗುತ್ತಿಗೆದಾರ ಶ್ಯಾಮ್ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರಿ ಫೆಡರೇಶನ್ ನೀಡಿದ ಹಿತ್ಲಳ್ಳಿ ಸೇವಾ ಸಹಕಾರಿ ಸಂಘ, ಮುಂಡಗೋಡಿನ ಚೌಡಳ್ಳಿ, ಮಲವಳ್ಳಿ ಸಹಕಾರಿ ಸಂಘ ಮತ್ತು ಕಳಚೆ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಯಲ್ಲಾಪುರ ಟಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಹೆಗಡೆ ಹಾಗೂ ಮುಂಡಗೋಡಿನ ಶ್ರೀಕಾಂತ ಸಾಲು, ಅರ್ಜುನ ಫಕೀರಪ್ಪ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ ಹೆಗಡೆ, ಜಿಲ್ಲಾ ಸಹಕಾರಿ ಫೆಡರೇಶನ್ನಿನ ಮಹೇಂದ್ರ ಭಟ್ಟ, ಉಪನಿರ್ದೇಶಕ ಜಿ.ಕೆ. ಭಟ್ಟ ಉಪಸ್ಥಿತರಿದ್ದರು.