ಸಾರಾಂಶ
- ಚಳಿಗಾಲದ ವೇಳೆ ಸಿದ್ಧಾರೂಢರ ಮಠದ ಆವರಣದಲ್ಲಿ ಕಾಣಸಿಗುವ ಕಬ್ಬಕ್ಕಿಗಳು
- ಕಳೆದ 6-7 ವರ್ಷಗಳಿಂದ ಸಾವಿರಾರು ಹಕ್ಕಿಗಳ ಚಿಲಿಪಿಲಿಯ ಸದ್ದುಈರಪ್ಪ ನಾಯ್ಕರ್ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
''''ಎಷ್ಟು ಕಾಡುವವು ಕಬ್ಬಕ್ಕಿ, ನಾ ಹೊಲದಾಗ ಇರವೆ ಒಬ್ಬಾಕಿ''''ಸಂತ ಶಿಶುನಾಳ ಶರೀಫರ ಈ ಹಾಡು ಯಾರು ತಾನೇ ಕೇಳಿಲ್ಲ? ಇಂಥ ಕಬ್ಬಕ್ಕಿಗಳ ಚಿಲಿಪಿಲಿ ಹಾಡು ಕೇಳಬೇಕೆನಿಸಿದರೆ ನೀವು ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಮಠದ ಆವರಣಕ್ಕೆ ಬರಬೇಕು. ಈಗ ಎಲ್ಲಿ ನೋಡಿದರಲ್ಲಿ ವಲಸೆ ಹಕ್ಕಿಗಳ ಚಿಲಿಪಿಲಿ ಜೋರಾಗಿದ್ದು, ಈ ಸದ್ದು ಮಠಕ್ಕೆ ಬರುವ ಭಕ್ತರ ಮನಸ್ಸಿಗೆ ಮುದ ನೀಡುತ್ತಿದೆ.
ಸದ್ಗುರು ಶ್ರೀ ಸಿದ್ಧಾರೂಢರ ಮಠ ಎಂದಾಕ್ಷಣ ನೆನಪಾಗುವುದು ಭಕ್ತರ ದಂಡು. "ಓಂ ನಮಃ ಶಿವಾಯ " ನಿರಂತರ ಷಡಕ್ಷರಿ ಮಂತ್ರ ಘೋಷ. ಬೆಳಗ್ಗೆ ಮತ್ತು ಸಂಜೆ ನಗಾರಿ, ಗಂಟೆ, ಪೂಜಾ ಕೈಂಕರ್ಯ. ಇವುಗಳ ಸಾಲಿಗೆ ಈಗ ಚಿಲಿಪಿಲಿ ಸದ್ದು.ಚಳಿಗಾಲ ಪ್ರಾರಂಭವಾದರೆ ಸಾಕು ದೂರ ದೂರದ ಪ್ರದೇಶಗಳಿಂದ ಸಹಸ್ರಾರು ವಲಸೆ ಹಕ್ಕಿಗಳು ಹಿಂಡುಹಿಂಡಾಗಿ ಬಂದು ಅಜ್ಜನ ಸನ್ನಿಧಾನದ ಎದುರಿನ ಅಶ್ವತ್ಥ ಮರದ ಮೇಲೆ ಚಿಂವ್‌ಗುಟ್ಟುತ್ತಾ ಬಂದ ಭಕ್ತರು ಮುಗಿಲೆತ್ತರ ಕಣ್ಣು ಹಾಯಿಸುವಂತೆ ಮಾಡುತ್ತಿವೆ.
ಈ ಹಕ್ಕಿಗಳನ್ನು ಗುಲಾಬಿ (Rosy), ಸ್ಟಾರ್ಲಿಂಗ್ (starling) ಎಂದು ಕರೆಯುತ್ತಾರೆ. ಇವು ಮೈಲಿಗಟ್ಟಲೇ ಹಾರಿಕೊಂಡು ಬರುತ್ತವೆ. ಆಕರ್ಷಕ ಮೈಬಣ್ಣದಿಂದ ಕಂಗೊಳಿಸುತ್ತವೆ. ಇವುಗಳ ಹಿಂಡಿನಲ್ಲಿ ಮೈನಾ ಹಕ್ಕಿಗಳೂ ಕಂಡು ಬರುತ್ತವೆ.ಮೋಡವೇ ಚಲಿಸಿದಂತೆ:
ಸೂರ್ಯ ಚಿನ್ನದ ರೂಪ ಪಡೆಯುತ್ತಿದ್ದಂತೆ, ಮಠದಲ್ಲಿ ಸಾಯಂಕಾಲದ ಪೂಜೆ ಸಮಯಕ್ಕೆ ಸರಿಯಾಗಿ ತಂಡೋಪತಂಡವಾಗಿ ರೆಕ್ಕೆ ಬಡಿಯುತ್ತ ಮೇಲೆ ಕೆಳಗೆ ಹಾರುತ್ತ, ಒಂದಕ್ಕೊಂದು ಸಂವಹನ ನಡೆಸುತ್ತ, ನರ್ತಿಸುತ್ತ ಬರುವ ಈ ಹಕ್ಕಿಗಳನ್ನು ನೋಡುವುದೇ ಚಂದ.ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಿಲಿಪಿಲಿ ಸದ್ದಿನೊಂದಿಗೆ ಗುಂಪಾಗಿ ಹಾರುವ ದೃಶ್ಯ ಮೋಡವೇ ಚಲಿಸಿದಂತೆ ಭಾಸವಾಗುತ್ತದೆ. ಹಿಂಡುಗಳಲ್ಲಿ ಹಾರುತ್ತಿದ್ದರೆ ದೂರದ ಬಾನಂಗಳದಲ್ಲಿ ಬಾಣಗಳು ಒಮ್ಮೆಲೆ ಭೂಮಿಗೆ ಬಂದಂತಾಗುತ್ತದೆ. ಹಾಗೇ ಮೋಡಗಳ ಮೇಲೆ ಸಮುದ್ರದ ಅಲೆಗಳಂತೆಯೂ ಗೋಚರಿಸಿ ನೋಡುಗರ ಮನಸೂರೆಗೊಳಿಸುತ್ತವೆ.
ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಒಮ್ಮೆ ಹಿಂಡುಗಳಲ್ಲಿ ಹಾರುವ, ವಿಲೀನಗೊಳ್ಳುವ ಹಾಗೂ ಚದುರಿಹೋಗುವ ವಿಧಾನವು ನೋಡುಗರನ್ನು ನಿಬ್ಬೆರಗುಗೊಳಿಸುತ್ತದೆ. ಇವುಗಳ ಹಾರಾಟ-ಚೀರಾಟಕ್ಕೆ ಮನಸೋಲದವರಿಲ್ಲ.ಆಶ್ರಯತಾಣವಾದ ಆಲ:
ದೂರದಿಂದ ಬರುವ ಈ ವಲಸೆ ಹಕ್ಕಿಗಳಿಗೆ ಆರೂಢ ಮಠದ ಮರಗಳು ಆಶ್ರಯತಾಣವಾಗಿವೆ. ಬೆಳಗಿನ ಜಾವ ಆಹಾರ ಅರಸಿ ಮತ್ತೊಂದು ಪ್ರದೇಶಕ್ಕೆ ಹೋಗುವ ಹಕ್ಕಿಗಳು, ಮರಳಿ ಸಂಜೆ ಅಜ್ಜನ ಸನ್ನಿಧಾನಕ್ಕೆ ಮರಳುತ್ತವೆ."ಬಾನಂಗಳದಲಿ ಹಕ್ಕಿಗಳ ಕಲರವ ಕಂಡು । ನಸುನಕ್ಕು ಭಾಸ್ಕರ ಬಾನಿನಲ್ಲಿ । ಸ್ವರ್ಣ ವರ್ಣದಿ ಜಾರಿದನು । ಭೂತಾಯಿ ಮಡಿಲಲ್ಲಿ... " ಎಂಬಂತೆ ಈ ಪ್ರಕೃತಿ ಸೌಂದರ್ಯ ಎದುರಿನಲ್ಲಿ, ಇವುಗಳ ಹಾರಾಟಕ್ಕೆ ಮನಸೋತು ಮಂತ್ರಮುಗ್ಧರಾಗಿ ನಿಲ್ಲದವರಿಲ್ಲ. ಈ ಹಕ್ಕಿ ಹಾಗೂ ಇಲ್ಲಿಗೆ ಬರುವ ಭಕ್ತರ ನಡುವೆ ಅವಿನಾಭವ ಸಂಬಂಧವೂ ಏರ್ಪಡುತ್ತದೆ.
ಶ್ರೀ ಸಿದ್ಧಾರೂಢರ ಶ್ರೀಗಳ ಮಠದ ಆವರಣಕ್ಕೆ 6-7 ವರ್ಷಗಳಿಂದ ಚಳಿಗಾಲ ಸಮಯದಲ್ಲಿ ಹಕ್ಕಿಗಳು ಕಂಡು ಬರುತ್ತಿವೆ. ಶಿವರಾತ್ರಿಯ ವರೆಗೂ ಇಲ್ಲಿ ನೆಲೆಸಿ ಮತ್ತೆ ಪುನಃ ಮರಳಿ ಮೂಲ ಸ್ಥಾನಕ್ಕೆ ಹಿಂದಿರುಗುತ್ತವೆ ಎನ್ನುತ್ತಾರೆ ಸಿದ್ಧಾರೂಢ ಮಠದ ಟ್ರಸ್ಟ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ.ಪಕ್ಷಿ ವೀಕ್ಷಕ ಆರ್.ಜಿ. ತಿಮ್ಮಾಪುರ ಈ ಕುರಿತು ಪ್ರತಿಕ್ರಿಯಿಸಿ, ಈ ಹಕ್ಕಿಗಳನ್ನು ಸಂತ ಶರೀಫರು ‘ಎಷ್ಟು ಕಾಡುವವು ಕಬ್ಬಕ್ಕಿ, ನಾ ಹೊಲದಾಗ ಇರವೆ ಒಬ್ಬಾಕಿ’ ಎಂದು ಹಾಡಿನಲ್ಲಿ ಬಣ್ಣಿಸಿದ್ದಾರೆ. ಹಿಂಗಾರಿ ಸಮಯಕ್ಕೆ ವಲಸೆ ಬರುವ ಇವು ಧಾನ್ಯಗಳ ಜತೆಗೆ ಕೀಟ ಭಕ್ಷ್ಯಿಸುವುದರಿಂದ ನೈಸರ್ಗಿಕ ಕೀಟ ನಿಯಂತ್ರಕಗಳಂತೆ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ.
ಪರಭಕ್ಷಕಗಳ ಗಮನ ಬೇರೆಡೆಗೆ ತಿರುಗಿಸಲು ಹಾಗೂ ಆಯಾಸಗೊಳಿಸಲು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನಡೆಗೆ ವೇಗವಾಗಿ ಗೊಣಗಾಟ, ಹಾರಾಟ (Murmuration) ನಡೆಸುತ್ತವೆ. ಸುಮಾರು 2000ರಿಂದ 2500 ಕಿಮೀ ದೂರದಿಂದ 5ರಿಂದ 10 ಸಾವಿರಕ್ಕಿಂತ ಹೆಚ್ಚು ಹಿಂಡುಗಳಲ್ಲಿ ಈ ಹಕ್ಕಿ ಕಂಡು ಬರುತ್ತವೆ ಎನ್ನುತ್ತಾರೆ ಪಕ್ಷಿ ವೀಕ್ಷಕರಾದ ಅನೂಪ ವಿಜಯಪುರ,;Resize=(128,128))
;Resize=(128,128))
;Resize=(128,128))