ಬಸವಾದಿ ಶರಣರ ಧರ್ಮದಲ್ಲಿ ಜೀವ ಕಾರುಣ್ಯವೇ ಪ್ರಧಾನ-ರಂಜಾನ್‌ ದರ್ಗಾ

| Published : Jul 08 2024, 12:38 AM IST

ಬಸವಾದಿ ಶರಣರ ಧರ್ಮದಲ್ಲಿ ಜೀವ ಕಾರುಣ್ಯವೇ ಪ್ರಧಾನ-ರಂಜಾನ್‌ ದರ್ಗಾ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾದಿ ಶರಣರ ಧರ್ಮವು ವೈಜ್ಞಾನಿಕವಾಗಿದ್ದು, ಇದರಲ್ಲಿ ಜೀವ ಕಾರುಣ್ಯವೇ ಪ್ರಧಾನವಾಗಿದೆ ಎಂದು ಸಾಹಿತಿ, ಚಿಂತಕ ರಂಜಾನ್ ದರ್ಗಾ ಹೇಳಿದರು.

ಹಾವೇರಿ: ಬಸವಾದಿ ಶರಣರ ಧರ್ಮವು ವೈಜ್ಞಾನಿಕವಾಗಿದ್ದು, ಇದರಲ್ಲಿ ಜೀವ ಕಾರುಣ್ಯವೇ ಪ್ರಧಾನವಾಗಿದೆ ಎಂದು ಸಾಹಿತಿ, ಚಿಂತಕ ರಂಜಾನ್ ದರ್ಗಾ ಹೇಳಿದರು. ನಗರದ ಜಿ.ಎಚ್. ಕಾಲೇಜಿನಲ್ಲಿ ಹಾವೇರಿ ವಿಶ್ವವಿದ್ಯಾಲಯದ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶರಣರ ಧರ್ಮವು ಕೇವಲ ಮನುಷ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಸಕಲ ಜೀವ ಸಂಕುಲಕ್ಕೂ ಲೇಸು ಬಯಸುವ ಜೀವ ಕೇಂದ್ರಿತ ಧರ್ಮವಾಗಿದೆ. ಬಸವಣ್ಣ ನೀಡಿದ ಕಾಯಕ ತತ್ವವು ಕೃಷಿ ಸಂಸ್ಕೃತಿಯ ಉತ್ಪನ್ನವಾಗಿದ್ದು, ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿಗಳ ಮೂಲವಾಗಿದೆ. ಕಾಯಕ, ಪ್ರಸಾದ ಮತ್ತು ದಾಸೋಹ ತತ್ವಗಳು ಲಿಂಗಾಯತ ಧರ್ಮದ ಆಧಾರಸ್ತಂಭಗಳಾಗಿವೆ. ಕಾಯಕವು ಜ್ಞಾನದ ಪರವಾಗಿರಬೇಕು, ಅಜ್ಞಾನದ ಪರವಾಗಿ ಅಲ್ಲ ಎಂದು ಪ್ರತಿಪಾದಿಸಿದರು. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಎಚ್. ಜಂಗಮಶೆಟ್ಟಿ ಮಾತನಾಡಿ, ನೂತನ ಹಾವೇರಿ ವಿಶ್ವವಿದ್ಯಾಲಯದಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಯುವ ಸಂಶೋಧಕರು, ಬೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮೂಡಿಸುವಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಮಿನಾರ್‌ಗಳನ್ನು ಆಯೋಜಿಸಲಾಗುವುದು ಎಂದರು.ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ, ಶರಣರ ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ಚಿಂತನೆ ವಿಷಯವಾಗಿ ವಿಚಾರ ಮಂಡಿಸಿ, ವಚನ ಸಾಹಿತ್ಯವು ಕೇವಲ ಸಾಹಿತ್ಯಿಕ ಮತ್ತು ಧಾರ್ಮಿಕ ಮಹತ್ವವನ್ನು ಮಾತ್ರ ಹೊಂದಿರದೇ ವೈಜ್ಞಾನಿಕ ಚಿಂತನೆಗಳನ್ನೂ ಹೇರಳವಾಗಿ ಹೊಂದಿದೆ ಎಂದರು. ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ, ವಿಶ್ವಶಾಂತಿಗೆ ಬಸವಣ್ಣನವರ ಸಂದೇಶಗಳ ಪ್ರಸ್ತುತತೆ ಕುರಿತು ವಿಚಾರ ಮಂಡನೆ ಮಾಡಿದರು.ಅಂತಾರಾಷ್ಟ್ರೀಯ ಮಾರುಕಟ್ಟೆ ಮ್ಯಾಕ್ ನಿರ್ದೇಶಕ ವಿಜಯಕುಮಾರ್ ಕಮ್ಮಾರ್, ವಚನ ಸಾಹಿತ್ಯದಲ್ಲಿ ಲೋಹ ವಿಜ್ಞಾನ ಕುರಿತು ವಿಚಾರ ಮಂಡಿಸಿದರು. ಹಾವೇರಿ ವಿವಿ ಕುಲಸಚಿವ ಪ್ರೊ.ಎಸ್. ಟಿ. ಬಾಗಲಕೋಟಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವೆ ಪ್ರೊ. ವಿಜಯಲಕ್ಷ್ಮಿ ತಿರ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಚಿದಾನಂದ ಕಮ್ಮಾರ್, ಡಾ. ಸಂಗಮ್ಮ ಪರಡ್ಡಿ, ಗೀತಾ ಬೆಳಗಾವಿ ಪರಿಚಯಿಸಿದರು. ಡಾ. ಗೀತಾಂಜಲಿ ಕುರಡಗಿ ನಿರೂಪಿಸಿದರು. ಡಾ. ಕವಿತಾ ನಾಯ್ಕ ವಂದಿಸಿದರು.