ಸಾರಾಂಶ
ಸಸ್ಯ ಸಂಪತ್ತು ಮತ್ತು ವನ್ಯಜೀವಿ ಸಂಪತ್ತು ಭೂಮಿಯ ಅತ್ಯುನ್ನತ ಕೊಡುಗೆಯಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಸಾಗರ್ ಸುರೇಶ್ ಅವರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಸಸ್ಯ ಸಂಪತ್ತು ಮತ್ತು ವನ್ಯಜೀವಿ ಸಂಪತ್ತು ಭೂಮಿಯ ಅತ್ಯುನ್ನತ ಕೊಡುಗೆಯಾಗಿದೆ. ಪರಿಶುದ್ಧವಾದ ಗಾಳಿ, ಮಣ್ಣು, ನೆಲ, ಜಲವನ್ನು ಸಂರಕ್ಷಿಸಬೇಕು. ಉತ್ತಮ ಪರಿಸರಕ್ಕಾಗಿ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸುವುದರಿಂದ ಹಲವಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವನ್ನು ನಾವು ಕಲ್ಪಿಸಿದಂತಾಗುತ್ತದೆ. ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಪರಿಸರದ ಸಮತೋಲನವನ್ನು ಕಾಪಾಡಬಹುದು. ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಅದರ ಅನಿವಾರ್ಯತೆಯನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಜವಾಬ್ದಾರಿಯುತ ಪ್ರಜೆಯಾಗಿ ನಾವೆಲ್ಲರೂ ಪರಿಸರವನ್ನು ಸಂರಕ್ಷಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು. ನಮ್ಮ ಮುಂದಿನ ಜನಾಂಗಕ್ಕೆ ಮಲಿನಗೊಳ್ಳದ ಪರಿಸರವನ್ನು ಉಳಿಸುವುದೇ ನಮ್ಮ ಕರ್ತವ್ಯವಾಗಿರಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ವನ್ಯಜೀವಿ ಸಂರಕ್ಷಣೆ ಕುರಿತು ಮಾತನಾಡಿದರು.
ಪರಿಸರ ಸಂಘದ ಸಂಚಾಲಕ ತನುಜಾ ಹೆಗಡೆ ಪರಿಸರ ಸಂಘದ ಕಾರ್ಯಚಟುವಟಿಕೆಗಳನ್ನು ಕುರಿತು ಮಾತನಾಡಿದರು. ಎನ್. ಬಬಿತಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಧೃತಿ ಎಸ್. ಗೌಡ ಸ್ವಾಗತಿಸಿದರು. ಎಂ.ಪಿ. ಧರಣಿ ನಿರೂಪಿಸಿ, ಭಾರತಿ ವಂದಿಸಿದರು.ಪರಿಸರ ಸಂಘದ ಸಂಚಾಲಕರಾದ ತನುಜಾ ಹೆಗಡೆ ಮತ್ತು ಜಿ.ಎಸ್. ಹರ್ಷಿತಾ ಇದ್ದರು.