ಚಿಕ್ಕಬಳ್ಳಾಪುರದಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆ: ಬೆಸ್ಕಾಂಗೆ ಹಿಡಿಶಾಪ

| Published : Oct 11 2023, 12:45 AM IST

ಚಿಕ್ಕಬಳ್ಳಾಪುರದಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆ: ಬೆಸ್ಕಾಂಗೆ ಹಿಡಿಶಾಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರದ ನಗರ ಹಾಗೂ ಗ್ರಾಮೀಣ ಬಾಗಗಳಲ್ಲಿ ಕೆಲವು ತಿಂಗಳುಗಳಿಂದ ಗೊತ್ತು ಗುರಿಯಿಲ್ಲದೆ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ತೀವ್ರವಾಗಿದ್ದು ಬೆಸ್ಕಾಂ ವಿರುದ್ಧ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ
ವಿದ್ಯುತ್‌ ಕಡಿತದಿಂದ ರೈತರು, ವಿದ್ಯಾರ್ಥಿಗಳು ಕಂಗಾಲು | ಲೋಡ್‌ ಶೆಡ್ಡಿಂಗ್‌ಗೆ ವ್ಯಾಪಾರ ಸ್ಥಗಿತ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮೀಣ ಬಾಗಗಳಲ್ಲಿ ಕೆಲವು ತಿಂಗಳುಗಳಿಂದ ಗೊತ್ತು ಗುರಿಯಿಲ್ಲದೆ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ತೀವ್ರವಾಗಿದ್ದು ಬೆಸ್ಕಾಂ ವಿರುದ್ಧ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಅನಿಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ವ್ಯಾಪಾರಿಗಳು, ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಆಗಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ವ್ಯಾಪಾರಿಗಳು, ಹಿಟ್ಟಿನ ಗಿರಣಿಗಳು, ವರ್ಕ್ ಶಾಪ್, ಕಂಪ್ಯೂಟರ್, ಜೆರಾಕ್ಸ್ ಸೆಂಟರ್‌ಗಳು ಹಾಗೂ ವಿದ್ಯುತ್ ವಸ್ತುಗಳ ರಿಪೇರಿ ಅಂಗಡಿಗಳಿಗೆ ಕೆಲಸಗಳು ಸಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಣ್ಣಾ ಮುಚ್ಚಾಲೆ ಆಟ ಮುಂದುವರಿದಿದ್ದು, ಜಮೀನುಗಳಿಗೆ ನೀರು ಹರಿಸಲಾಗದೆ ರೈತರು ಕಂಗಾಲಾಗಿದ್ದಾರೆ. ಹಗಲಲ್ಲಿ 7 ಗಂಟೆ ತ್ರಿಪೇಸ್‌ ವಿದ್ಯುತ್‌ ನೀಡುವುದಾಗಿ ತಿಳಿಸಿದರೂ ಮನಸೋಇಚ್ಛೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಹೊತ್ತು ಗೊತ್ತಿಲ್ಲದೇ ಜಮೀನಿಗೆ ಹೋಗಿ ನೀರು ಹಾಯಿಸುವ ಪರಿಸ್ಥಿತಿ ಎದುರಾಗಿದೆ. ಮಳೆ, ಗಾಳಿ ಇಲ್ಲದಿದ್ದರೂ ನಾಲ್ಕೈದು ಗಂಟೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಈ ರೀತಿ ವಿದ್ಯುತ್‌ ಸರಬರಾಜಾಗುತ್ತಿದೆ. ಈ ಬಗ್ಗೆ ರೈತರು ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಕೆಲಸ ನಡೆದಿದೆ. ಅರ್ಧ ಗಂಟೆಯೊಳಗೆ ಬರುತ್ತದೆ ಎಂದು ಹೇಳುತ್ತಾರೆ. ಮತ್ತೂಮ್ಮೆ ಕರೆಮಾಡಿದರೆ ಸ್ವೀಕರಿಸುವುದಿಲ್ಲ ಎನ್ನುವುದು ರೈತರ ಅಳಲು. ಈಗ ಮಳೆ ಇಲ್ಲದೆ ಇರುವುದರಿಂದ ಬರಗಾಲ ಆವರಿಸಿದ್ದು, ತೋಟಗಾರಿಕಾ ಬೆಳೆಗಳಿಗೆ ಕೊಳವೆಬಾವಿಗಳಲ್ಲಿರುವ ನೀರನ್ನು ಕಾಲಕಾಲಕ್ಕೆ ಕಟ್ಟಬೇಕಿದೆ. ಕಳೆದ ಕೆಲ ದಿನಗಳಿಂದ ಸಕಾಲಕ್ಕೆ ನೀರು ಹರಿಸಲು ಆಗುತ್ತಿಲ್ಲ. ವಿದ್ಯುತ್‌ ಇದ್ದರೂ ತ್ರಿಪೇಸ್‌ ನೀಡುತ್ತಿಲ್ಲ.ಇದರಿಂದ ಬೋರ್‌ನಿಂದ ಹೆಚ್ಚು ನೀರುಹರಿಸಲಾಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮೀಣ ಭಾಗದ ರೈತರು. ವಿದ್ಯುತ್‌ ವಿಚಾರದಲ್ಲಿ ರೈತರು ಬೇಸತ್ತು ಹೋಗಿದ್ದಾರೆ. ಬೆಳೆಗೆ ನೀರು ಹಾಯಿಸುವ ವೇಳೆಯೇ ವಿದ್ಯುತ್‌ ಇರುವುದಿಲ್ಲ. ಯಾವಾಗ ಬರುತ್ತದೋ ಯಾವಾಗ ಹೋಗುತ್ತದೋ ತಿಳಿಯದಾಗಿದೆ. ಕರೆ ಮಾಡಿ ಕೇಳಿದಾಗ ತಕ್ಷಣಕ್ಕೆ ವಿದ್ಯುತ್‌ ಸರಬರಾಜು ಮಾಡುತ್ತಾರೆ. ಮತ್ತೆ ವಿನಾಕಾರಣ ಕಡಿತಗೊಳಿಸುತ್ತಾರೆ. ತೋಟದ ಬೆಳೆಗಳಿಗೆ ನೀರು ಇಲ್ಲದೆ ಒಣಗಿ ಹೋಗುತ್ತಿದೆ. ಇನ್ನು ತರಕಾರಿಗೆ ವಾರಕ್ಕೆ ಮೂರು ಬಾರಿ ನೀರು ಕಟ್ಟಲೇಬೇಕು. ಇಲ್ಲವಾದರೆ ಬೆಳೆ ಹಾಳಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ರೈತ ದೇವರಾಜು ಆಗ್ರಹಿಸಿದ್ದಾರೆ. ನಾಯನಹಳ್ಳಿ ಗ್ರಾಮಸ್ಥ ಮೋಹನ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಪೂರೈಕೆಗೂ ತೊಂದರೆಯಾಗಿದೆ ಲೋಡ್ ಶೆಡ್ಡಿಂಗ್ ಇಲ್ಲದಿದ್ದರೂ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಇರುವುದಿಲ್ಲ. ಗಾಳಿ ಮಳೆ ಬಂದಾಗ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಹರಿದಿದ್ದರೆ, ಮರ ಬಿದ್ದಿದ್ದರೆ ತಿಳಿಸಲು ಕರೆ ಮಾಡಿದರೆ ಯಾರೊಬ್ಬರೂ ಸ್ಪಂದಿಸುವುದಿಲ್ಲ ಎಂದು ದೂರಿದರು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು, ರೈತರು, ಅಗತ್ಯ ದಾಖಲಾತಿಗಳಾದ ಆದಾಯ ದೃಢೀಕರಣ ಪಟ್ಟಿ, ಜಾತಿ ಪ್ರಮಾಣಪತ್ರ, ಜಮೀನು ಅಗತ್ಯ ದಾಖಲಾತಿಗಳಿಗಾಗಿ ಜನತೆ ನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅಲ್ಲದೇ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಬೆಸ್ಕಾಂಗೆ ಮುತ್ತಿಗೆ ಹಾಕಲಾಗುವುದು ಎಂದರು. ಜಿಲ್ಲೆಯ ಹಲವಾರು ಕೆವಿ ಸ್ಟೇಷನ್‌ಗಳು ಮತ್ತು ಲೈನಿನಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಹೀಗಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಈಗ ಸರಿ ಮಾಡಲಾಗಿದೆ. ನಿತ್ಯ 7 ಗಂಟೆ ತ್ರಿ ಪೇಸ್‌ ವಿದ್ಯುತ್‌ ನೀಡುವುದರಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಮಧ್ಯಂತರದಲ್ಲಿ ಎಷ್ಟು ಹೊತ್ತು ಕಡಿತ ಮಾಡಲಾಗುತ್ತದೆಯೋ ಅಷ್ಟು ಹೊತ್ತು ಬಳಿಕ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಇದ್ದಲ್ಲಿ ಮಾತ್ರ ವಿದ್ಯುತ್‌ ವ್ಯತ್ಯಯವಾಗುತ್ತಿದೆ.ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಗಮನಕ್ಕೆ ತಂದಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು. ಹಗಲಲ್ಲಿ 4 ಗಂಟೆ ಮಾತ್ರ ಹಗಲಲ್ಲಿ ನಿರಂತರ 7 ಗಂಟೆಗಳ ಕಾಲ ತ್ರಿಪೇಸ್‌ ವಿದ್ಯುತ್‌ ನೀಡಬೇಕು ಎಂಬ ಆದೇಶವಿದೆ. ಆದರೆ, ರೈತರು ದೂರುವ ಪ್ರಕಾರ ನಾಲ್ಕು ಗಂಟೆ ಕೊಟ್ಟರೆ ಹೆಚ್ಚು ಎನ್ನುತ್ತಾರೆ. ಕೆಲವೊಮ್ಮೆ ಸಂಜೆ ಹೊತ್ತು ಕೊಡುತ್ತಾರೆ. ಬಿಟ್ಟು ಬಿಟ್ಟು ವಿದ್ಯುತ್‌ಸರಬರಾಜು ಮಾಡುವುದರಿಂದ ವಿದ್ಯುತ್‌ಗಾಗಿ ಕಾದು ಕೂಡುವುದೇ ಕಾಯಕವಾಗಿದೆ ಎಂದು ದೂರುತ್ತಾರೆ. ಉಚಿತ ವಿದ್ಯುತ್‌ ಇಲ್ಲ ಸರ್ಕಾರ ನಗರ ವಾಸಿಗಳಿಗೆ ನೀಡುವಂತೆ ಗ್ರಾಮೀಣ ಭಾಗದವರಿಗೂ ನಿರಂತರ ಜ್ಯೋತಿ ಯೋಜನೆ ಜಾರಿ ಮಾಡಿದೆ. ಆದರೆ, ಅನಿಯಮಿತ ವಿದ್ಯುತ್‌ ಸರಬರಾಜು ಹೆಚ್ಚಾಗುತ್ತಿದೆ. ಮಳೆ ಗಾಳಿ ಇಲ್ಲದಿದ್ದಾಗಲೂ ವಿದ್ಯುತ್‌ ಕಡಿತಗೊಳ್ಳುತ್ತದೆ. ಈಚೆಗೆ ಜಿಲ್ಲೆಯಲ್ಲಿ ಬಿದ್ದಿರುವ ಅಲ್ಪ ಸ್ವಲ್ಪ ಮಳೆ ಸುರಿದ ಪರಿಣಾಮ ಸೊಳ್ಳೆ ಕಾಟ ಹೆಚ್ಚಾಗಿ ಡೆಂಗ್ಯೂ, ಚಿಕನ್‌ ಗುನ್ಯಾ, ಮತ್ತು ಮಲೇರಿಯಾ ಪ್ರಕರಣಗಳು ಹೆಚ್ಚಾಗಿದೆ. ರಾತ್ರಿ ವಿದ್ಯುತ್‌ ಕಡಿತಗೊಳಿಸುವುದರಿಂದ ನಿದ್ರೆ ಮಾಡುವುದು ಕಷ್ಟವಾಗುತ್ತಿದೆ ಎಂದು ದೂರುತ್ತಾರೆ ನಗರ ಮತ್ತು ಹಳ್ಳಿ ಜನ.