ಸಾರಾಂಶ
ಚನ್ನಪಟ್ಟಣ: ಗ್ರಾಮಕ್ಕೆ ಸಮರ್ಪಕವಾಗಿ ಕುಡಿವ ನೀರನ್ನು ಪೂರೈಕೆ ಮಾಡುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಗ್ರಾಮಸ್ಥರು ತಾಲೂಕಿನ ಮಳೂರುಪಟ್ಟಣ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ: ಗ್ರಾಮಕ್ಕೆ ಸಮರ್ಪಕವಾಗಿ ಕುಡಿವ ನೀರನ್ನು ಪೂರೈಕೆ ಮಾಡುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಗ್ರಾಮಸ್ಥರು ತಾಲೂಕಿನ ಮಳೂರುಪಟ್ಟಣ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಗ್ಗೆ ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು, ಗ್ರಾಮಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ. ಗ್ರಾಮದಲ್ಲಿ ಹಬ್ಬವಿದ್ದು, ಈ ಸಮಯದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಆದರೆ, ಇಂತಹ ಸಮಯದಲ್ಲಿ ಸಹ ಸಮರ್ಪಕವಾಗಿ ನೀರು ಪೂರೈಸದಿದ್ದರೆ ಹೇಗೆಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದಲ್ಲಿ ಕೊಳವೆ ಬಾವಿಗಳಿದ್ದು, ನೀರಿಗೂ ಸಮಸ್ಯೆ ಇಲ್ಲ. ಆದರೆ ನೀರು ಪೂರೈಕೆ ಮಾಡುವಲ್ಲಿ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಿರುವ ಕಾರಣ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಕೂಡಲೇ ಗಮನಹರಿಸುವಂತೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಿಬ್ಬಂದಿ ಅಸಹಾಯಕ ಉತ್ತರ ಕೇಳಿ ಕೆಂಡವಾದ ಕೆಲವರು ಗ್ರಾಪಂ ಕಚೇರಿಗೆ ಬೀಗ ಹಾಕಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಡಿಒ ಬೇಸಿಗೆ ಸಮಯವಾದ ಕಾರಣ ವಿದ್ಯುತ್ ಸಮಸ್ಯೆಯಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದಿದರು.ಪೋಟೊ೧೫ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು.