ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಜಾನುವಾರುಗಳಿಗೆ ಕಾಲು ಬಾಯಿ ಜ್ವರ, ಗಂಟು, ಚರ್ಮ ರೋಗ, ಕರಳು ಬೇನೆ ರೋಗಗಳಿಗೆ ರಾಜ್ಯದಲ್ಲಿ ಐದನೇ ಸುತ್ತಿನ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿದರು.ತಾಲೂಕಿನ ಹಿಟ್ನೇ ಹೆಬ್ಬಾಗಿಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿ ಹಾಗೂ ಭೋಜನ ಶಾಲೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಜಾನುವಾರುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಈಗಾಗಲೇ ಕುರಿ ಮೇಕೆ ತೀರಿಕೊಂಡರೆ 5 ಸಾವಿರ ರು., ಜಾನುವಾರು ತೀರಿಕೊಂಡರೆ 10 ಸಾವಿರ ನಮ್ಮ ಸರ್ಕಾರ ನೀಡಲಿದ್ದು, ಹಿಂದಿನ ಸರ್ಕಾರ ಈ ಎಲ್ಲ ಸೌಕರ್ಯಗಳನ್ನು ಹಿಂಪಡೆದಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ನಂತರ ಯೋಜನೆಗಳನ್ನು ಪುನರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.ತಾಲೂಕಿನಲ್ಲಿ ಪ್ರತಿ ಮನೆಗಳಿಗೂ ತೆರಳಿ ಪಶು ಪಾನ್ ಇಲಾಖೆ ಸಿಬ್ಬಂದಿ ಉಚಿತ ರೋಗನಿರೋಧಕ ಲಸಿಕೆ ಹಾಕುವರು, ಪ್ರಮುಖವಾಗಿ ಕೀಟಗಳು ನೀರು ಮತ್ತು ಆಹಾರ ಗಳಿಂದ ಹರಡುತ್ತದೆ, ಆದ್ದರಿಂದ ಪ್ರತಿಯೊಬ್ಬ ರೈತರು ರೋಗ ನಿರೋಧಕ ಪಡೆದುಕೊಳ್ಳಲು ಅವರು ಸೂಚಿಸಿದರು.
ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿಸಲು ಸರ್ಕಾರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಹಿಂದುಳಿದ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರೆಯಬೇಕೆಂಬ ಮಹದಾಸೆಯಿಂದ ಹಿಂದುಳಿದ ವರ್ಗದ ಜನರು ಹೆಚ್ಚಾಗಿರುವ ಹಿಟ್ನೇ ಹೆಬ್ಬಾಗಿಲು, ಮಾಕೋಡು ಸೇರಿದಂತೆ ತಾಲೂಕಿನ ಅನೇಕ ಭಾಗಗಳಲ್ಲಿ ಪ್ರೌಢಶಾಲೆಯನ್ನು ಆರಂಭಿಸಲು ಅನುವು ಮಾಡಿಕೊಟ್ಟಿದ್ದೇವೆ, ಅದೇ ರೀತಿ ಈಗ ಹಿಟ್ನೇ ಹೆಬ್ಬಾಗಿಲು ಗ್ರಾಮಕ್ಕೆ ಪಿಯು ಕಾಲೇಜು ಮಂಜೂರು ಮಾಡಬೇಕು ಎಂಬ ಬೇಡಿಕೆ ಬಂದಿದೆ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ವಹಿಸುತ್ತೇನೆ ಎಂದರು.ದೂರ ಶಿಕ್ಷಣ ಉಪಕೇಂದ್ರ, ಪಶು ವೈದ್ಯಕೀಯ ಡಿಪ್ಲೋಮಾ ಕೋರ್ಸ್
ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಅವರ ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಉಪ ಕೇಂದ್ರವನ್ನು ಪಿರಿಯಾಪಟ್ಟಣದಲ್ಲಿ ಆರಂಭಿಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಎರಡು ಎಕರೆ ಭೂಮಿಯನ್ನು ಮೀಸಲಿರಿಸಲಾಗಿದೆ.ಅದೇ ರೀತಿ ಪಶು ವೈದ್ಯಕೀಯ ಡಿಪ್ಲೊಮಾ ಕೋರ್ಸ್ ಆರಂಭಿಸಲು 25 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ತಾಲೂಕಿನ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಅದೇ ರೀತಿ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಸಲುವಾಗಿ ತಾಲೂಕಿನಲ್ಲಿ ಕುಸುಮ್ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ಕುಸುಮ್ ಘಟಕವನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಹಿಂದೆ 2013 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಪಶುಭಾಗ್ಯ ಯೋಜನೆಯನ್ನು ಬಿಜೆಪಿಯವರು ಕೈಚೆಲ್ಲಿದ್ದರು. ಆದರೆ ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿಯಾದ ನಂತರ ಈ ಯೋಜನೆಗೆ ಮರು ಜೀವ ನೀಡುವುದರೊಂದಿಗೆ, ಜಾನುವಾರುಗಳಿಗೆ ರೋಗಬಾಧೆ ಹಾಗೂ ಮರಣ ಹೊಂದಿದ ಸಂದರ್ಭದಲ್ಲಿ ಪರಿಹಾರ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರೈತರ ಶ್ರಮದಿಂದ ಹೈನುಗಾರಿಕೆಯಲ್ಲಿ ರಾಜ್ಯವು ಉನ್ನತ ಸ್ಥಾನದಲ್ಲಿದ್ದು, ಪ್ರಸ್ತುತ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದ್ದು, ಹಾಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಯೋಜನೆ ರೂಪಿಸಲಾಗಿದೆ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹೆಚ್ಚಿನ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ನಾಗರಾಜ್ ಮಾತನಾಡಿ, ರೈತರಿಗೂ ಉಪಯುಕ್ತ ಸಲಹೆಗಳನ್ನು ನೀಡಿದರು .
ಪಿಡಿಒ ನಾಗೇಂದ್ರ ಕುಮಾರ್ . ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ, ತಹಸೀಲ್ದಾರ್ ಕುಂಜಿ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಎಇಇ ಗಳಾದ ವೆಂಕಟೇಶ್, ಕೃಷ್ಣ ಮೂರ್ತಿ, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ಪಿಡಿಒ ನಾಗೇಂದ್ರ ಪ್ರಸಾದ್, ಗ್ರಾಪಂ ಉಪಾಧ್ಯಕ್ಷ ರವಿಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಶಂಕರ್, ಮುಖಂಡರಾದ ಡಿ.ಟಿ. ಸ್ವಾಮಿ, ಪರಮೇಶ್, ರಹಮತ್ ಜಾನ್ ಬಾಬು, ಸರೋಜಮ್ಮ ನಾಗೇಗೌಡ, ಕುಮಾರ್, ಛಾಯಾಮಣಿ, ಮಂಜುನಾಯ್ಕ, ಮಹಾದೇವ್, ಜಯಶಂಕರ್, ಶಿವರುದ್ರ, ವಿಜಯಕುಮಾರ್, ಶಂಕರ್ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಇದ್ದರು.