ಸಾರಾಂಶ
ಒಂದು ವರ್ಷದ ಹಿಂದೆ ಕಿಮ್ಸ್‌ನಲ್ಲಿ ಜಾಗ ನೋಡಲಾಗಿತ್ತು. ಅಲ್ಲಿ 1.50 ಕೋಟಿ ವೆಚ್ಚದಲ್ಲಿ ಇದೀಗ ಶಿಶು ಧಾಮ ನಿರ್ಮಿಸಲಾಗಿದೆ. ಶಿಶುಗಳ ಪಾಲನೆಗೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಘಟಕದಲ್ಲಿ ಅಳವಡಿಸಲಾಗಿದೆ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವತಿಯಿಂದ ಕಿಮ್ಸ್ ಆವರಣದ ಮುಖ್ಯ ಕಟ್ಟಡದಲ್ಲಿ ನಿರ್ಮಿಸಲಾದ ಸ್ವರ್ಣ ಶಿಶು ಧಾಮ ನವಜಾತ ಶಿಶು ತೀವ್ರ ನಿಗಾ ಘಟಕ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ಮಾರ್ಚ್ 11ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ ಪವಾರ ಶಿಶು ಧಾಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಒಂದು ವರ್ಷದ ಹಿಂದೆ ಕಿಮ್ಸ್‌ನಲ್ಲಿ ಜಾಗ ನೋಡಲಾಗಿತ್ತು. ಅಲ್ಲಿ 1.50 ಕೋಟಿ ವೆಚ್ಚದಲ್ಲಿ ಇದೀಗ ಶಿಶು ಧಾಮ ನಿರ್ಮಿಸಲಾಗಿದೆ. ಶಿಶುಗಳ ಪಾಲನೆಗೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಘಟಕದಲ್ಲಿ ಅಳವಡಿಸಲಾಗಿದೆ. ಇದೊಂದು ಔಟ್ ಬಾರ್ನ್ ಎನ್‌ಐಸಿಯು, ಎಸ್‌ಎನ್‌ಸಿಯು ಘಟಕವಾಗಿದೆ ಎಂದು ಹೇಳಿದರು.ಕಿಮ್ಸ್ ಶಿಶು ತಜ್ಞ ಡಾ. ಮಾರ್ತಾಂಡಪ್ಪ ಮಾತನಾಡಿ, ಕಿಮ್ಸ್ ಮುಖ್ಯ ಕಟ್ಟಡದ 6750 ಚದರ ಅಡಿಯಲ್ಲಿ ಸ್ವರ್ಣ ಶಿಶು ಧಾಮ ನವಜಾತ ಶಿಶು ತೀವ್ರ ನಿಗಾ ಘಟಕ ನಿರ್ಮಿಸಲಾಗಿದೆ. ಶಿಶುಗಳಿಗೆ ಹಾಲುಣಿಸುವ ಕೊಠಡಿ, ಔಷಧ ಸಂಗ್ರಹಣಾ ವಿಭಾಗ, ಶಿಶುಗಳ ಆರೈಕೆಗೆ ನಾಲ್ಕು ವಿವಿಧ ಐಸಿಯುಗಳು ಇರಲಿವೆ ಎಂದರು.
ಅತ್ಯಾಧುನಿಕ ನೆಲಹಾಸು (ವೈದ್ಯಕೀಯ ದರ್ಜೆ) ಈ ನೆಲಹಾಸು ಅಖಂಡವಾಗಿದೆ. ಸೆಂಟ್ರಲ್ ಎಸಿ ಘಟಕ, ಶುಚಿಯಾದ ಕೊಠಡಿ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಶು ಬೇರ್ಪಡಿಸುವ ಕೊಠಡಿಗಳು, ಬಿಸಿ ನೀರಿನ ಸೌಲಭ್ಯ ಮತ್ತು ಆರಾಮದಾಯಕ ವ್ಯವಸ್ಥೆಯೊಂದಿಗೆ ತಾಯಂದಿರ ಗುಣಮಟ್ಟದ ವಾಸ್ತವ್ಯ ಖಚಿತಪಡಿಸುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ ಯಂತ್ರೋಪಕರಣಗಳನ್ನು ಈ ಘಟಕ ಹೊಂದಿದೆ. ನವಜಾತ ಶಿಶುಗಳ ಆರೈಕೆಗೆ ಹಾಸಿಗೆ ಬದಿಯಲ್ಲಿಯೇ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದ್ರೋಗ ಚಿಕಿತ್ಸೆ ನಂತರದ ಆರೈಕೆಗೆ ನವಜಾತ ಶಿಶು ತುರ್ತು ನಿಗಾ ಘಟಕ ಇದಾಗಿದೆ ಎಂದು ಹೇಳಿದರು.ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಅನೇಕ ದಾನಿಗಳ ಸಹಾಯ ಹಸ್ತದಿಂದ ಇಂದು ಕಿಮ್ಸ್ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಆಸ್ಪತ್ರೆಯಾಗಿ ಮಾರ್ಪಟ್ಟು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ಲಕ್ಷ್ಮೀಕಾಂತ ಲೋಖರೆ ಇದ್ದರು.