ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ಶ್ರಮಪಟ್ಟು ಓದಿಬಿಟ್ಟರೆ, ಜೀವನಪೂರ್ತಿ ನೆಮ್ಮದಿಯಾಗಿರಬಹುದು
ಕನ್ನಡಪ್ರಭ ವಾರ್ತೆ ನಂಜನಗೂಡುವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ, ಹಾಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ನಿರತರಾಗಬೇಕು ಎಂದು ಆಧ್ಯಾತ್ಮಿಕ, ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಹೇಳಿದರು.ತಾಲೂಕಿನ ದೇವನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಈಚೆಗೆ ನಡೆದ ಪ್ರೇರಣದಾಯಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ಶ್ರಮಪಟ್ಟು ಓದಿಬಿಟ್ಟರೆ, ಜೀವನಪೂರ್ತಿ ನೆಮ್ಮದಿಯಾಗಿರಬಹುದು. ನಾಡಿನ ವಚನಕಾರರ ಒಂದೊಂದು ವಚನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಅದಕ್ಕಾಗಿ ವಚನಗಳನ್ನು ಓದಬೇಕು. ವಿದ್ಯಾ ಅಭ್ಯಾಸಿಗನ ಕೈ ವಶ, ವಿದ್ಯೆಯನ್ನು ವಶಪಡಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಜನರು ಇದ್ದ ಮಾತ್ರಕ್ಕೆ ದೇವನೂರು ಅಲ್ಲ ದೇವನು ಇದ್ದ ಮಾತ್ರಕ್ಕೆ ದೇವನೂರು ಎಂದರು.ಇದು ದಾಸೋಹ ಸಂಸ್ಕೃತಿಗೆ ಹೆಸರುವಾಸಿಯಾದದ್ದು, 200 ವರ್ಷದ ಹಿಂದೆ ಭಕ್ತರ ಅನ್ನ ದಾಸೋಹಕ್ಕೆ ಒಲೆಗೆ ಹಚ್ಚಿದ ಬೆಂಕಿ ಇನ್ನೂ ಹಾರಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜ್ಞಾನಕ್ಕೆ ದಾಸರಾಗಬೇಕು. ಅ ಮೂಲಕ ದೇವನೂರು ಮಕ್ಕಳು ಮುತ್ತುಗಳಾಗಬೇಕೆಂಬುವುದು ನಮ್ಮ ಆಶಯವಾಗಿದ್ದು, ನಾವು ಕಲಿತಿರುವ ವಿದ್ಯೆಯನ್ನು ಇತರಿಗೆ ಧಾರೆ ಎರೆಯಬೇಕು ಎಂದು ಹೇಳಿದರು.ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಜ್ಞಾನಿ, ಇಲ್ಲದಿದ್ದರೆ ಅಜ್ಞಾನಿಯಾಗಬೇಕಾಗುತ್ತದೆ. ನಾವು ಓದುವ ಸಂದರ್ಭದಲ್ಲಿ ಪುಸ್ತಕವೇ ನಮ್ಮ ಮೊಬೈಲ್ ಆಗಿತ್ತು, ಪಿಯು ವಿದ್ಯಾರ್ಥಿಗಳಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಂದ ಅಗತ್ಯಕ್ಕೆ ತಕ್ಕಂತೆ ಕೋಚಿಂಗ್ ಕೂಡ ನಡೆಸಲು ಮುಂದಾಗಿ, ಹುಟ್ಟಿದ ಗ್ರಾಮಕ್ಕೆ ವಿದ್ಯಾದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ಗುರಿಮಟ್ಟಲು ಸಹಾಯಕರಾಗಿ ಶಂಕರ ದೇವನೂರು ನಿಂತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಕಬಿನಿ ಡ್ಯಾಂ ಸುಭಾಷ್ ಕಬಿನಿ ಪವರ್ ಕಾರ್ಪೋರೇಷನ್ ವ್ಯವಸ್ಥಾಪಕ ವಿ. ಸೆಂದಿಲ್ ಕುಮಾರ್, ಡಾ. ಅರ್ಚನಾ, ಗ್ರಾಪಂ ಅಧ್ಯಕ್ಷ ಕೆ.ಎಸ್. ಅವಿನಾಶ್, ಪ್ರಾಂಶುಪಾಲ ಚನ್ನಬಸಪ್ಪ, ಡಾ. ಉಮೇಶ್ ಬೇವಿನಹಳ್ಳಿ, ಡಿ.ಪಿ. ಮಹದೇವಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಗುರುಸ್ವಾಮಿ, ಮುಖ್ಯ ಶಿಕ್ಷಕಿ ಪೂರ್ಣಿಮಾ ಇದ್ದರು.