ಮಡಿಕೇರಿಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ

| Published : Apr 28 2025, 12:48 AM IST

ಮಡಿಕೇರಿಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಮಹದೇವ ಪೇಟೆಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಣದ ಗುರಿ ಕೇವಲ ಅಂಕಗಳಿಗೆ, ರ‍್ಯಾಂಕ್ ಗಳಿಕೆಗೆ ಸೀಮಿತವಾಗಬಾರದು. ಅದರ ಜೊತೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಅಮೂಲ್ಯ ಸಂಪತ್ತಾಗಿ ಪರಿವರ್ತನೆಯಾಗಬೇಕು. ಈ ರೀತಿಯ ಮಾರ್ಪಾಡು ಮಾಡುವವರು ಮತ್ತು ಹೊಂದುವವರು ನಿಜವಾದ ದೇಶಪ್ರೇಮಿಗಳು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಹದೇವಪೇಟೆಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಸಂಪರ್ಕದ ಕೊಂಡಿಯಾಗಿರುವ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ನ ದೊಡ್ಡ ಉದ್ದೇಶ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸರ್ವಜನಾಂಗದವರಿಗೆ ಪ್ರಯೋಜನ ಆಗಬೇಕು, ಈ ಸಂಸ್ಥೆ ಇತರರಿಗೆ ಪ್ರೇರಣೆಯಾಗಬೇಕು. ಸರ್ಕಾರದಿಂದ ಯಾವುದೇ ಸಂದರ್ಭದಲ್ಲಿ ಸಹಕಾರ ಸಿಗಲಿದೆ ಎಂದರು.

ಉತ್ತಮ ಸಮಾಜ ದೇಶಕ್ಕೆ ಅತ್ಯಗತ್ಯ, ಯುವ ಜನತೆ ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಮತ್ತು ಪ್ರೀತಿ, ವಿಶ್ವಾಸ ಸಂಪಾದಿಸಬೇಕು. ಸಮಾಜ ಕಟ್ಟುವುದಕ್ಕಾಗಿ ಯುವ ಜನಾಂಗವನ್ನು ಬೆಳೆಸಬೇಕೇ ಹೊರತು ದು:ಖ ಸೃಷ್ಟಿಗಾಗಿ ಅಲ್ಲ. ಯುವಕರಲ್ಲಿ ಸಕರಾತ್ಮಕ ಚಿಂತನೆ ಬರುವಂತೆ ನೋಡಿಕೊಳ್ಳಬೇಕು, ಆಗ ಮಾತ್ರ ನಾವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಶಿಕ್ಷಣದ ಮೂಲಕ ಒಬ್ಬ ಅಧಿಕಾರಿಯನ್ನು ನೀಡುವುದರ ಜೊತೆಗೆ ಒಬ್ಬ ಉತ್ತಮ ಜನಪ್ರತಿನಿಧಿಯನ್ನು ಕೂಡ ನೀಡುವ ಅನಿವಾರ್ಯತೆ ಇದೆ ಎಂದು ಯು.ಟಿ.ಖಾದರ್ ತಿಳಿಸಿದರು.

ನಂತರ ಕಾವೇರಿ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ಉಮ್ಮತ್ ಒನ್ ಕೊಡಗು ಸಂಸ್ಥೆ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಇರಬೇಕು, ಜಾತಿ ಧರ್ಮ, ಬೇಧಭಾವವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೊಂದಿಗೆ ತಾವು ಇರುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಮಡಿಕೇರಿ ಕೇಂದ್ರದಲ್ಲಿ ಸುಸಜ್ಜಿತವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಗೊಂಡಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಮಾಜದ ಸರ್ವರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಶಿಕ್ಷಣ ನಮ್ಮನ್ನು ಬಲಿಷ್ಠರನ್ನಾಗಿ ಮಾಡಬೇಕು, ಯಾವುದೇ ಆಕರ್ಷಣೆ, ಆಮಿಷಗಳಿಗೆ ಒಳಗಾಗದೆ ನಿರ್ದಿಷ್ಟ ಗುರಿಯ ಕಡೆಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿ, ಉತ್ತಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು, ಸ್ವಾರ್ಥವನ್ನು ಬಿಟ್ಟು ಎಲ್ಲಾ ಸಮುದಾಯವನ್ನು ಸೇರಿಸಿಕೊಂಡು ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಭಾರತೀಯಾರ್ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ರಾಶೀದ್ ಗಝಾಲಿ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲದೊಂದಿಗೆ ಪರಿಶ್ರಮಪಟ್ಟರೆ ಎಲ್ಲವೂ ಸಾಧ್ಯ, ಎಲ್ಲರೂ ದೊಡ್ಡ ಕನಸನ್ನು ಕಾಣಬೇಕು ಮತ್ತು ಸಕಾರಗೊಳಿಸುವ ಕೆಲಸ ಮಾಡಬೇಕು ಎಂದರು.

ಪುಣೆಯ ಅನಿಶ್ ಡೆಫೆನ್ಸ್ ಕ್ಯಾರಿಯರ್ ಇನ್ಸಿಟ್ಯೂಟ್‌ನ ಸ್ಥಾಪಕ ನಿರ್ದೇಶಕ ಅನಿಸ್ ಕುಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿಯ ಪೂರ್ವ ತಯಾರಿ ನಡೆಸಬೇಕು ಮತ್ತು ಆಯ್ಕೆ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಎನ್ನುವ ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು.

ಸಿ.ಎಂ.ಉಸ್ತಾದ್ ಪ್ರಾರ್ಥನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೀದರ್‌ನ ಶಾಹಿದ್ ಗ್ರೂಫ್ ಆಫ್ ಇನ್ಸ್ಟ್ಯೂಟ್ ಸಿಇಓ ಡಾ.ತೌಸೀಫ್ ಅಹಮ್ಮದ್ ಮತ್ತಿತರರು ಪಾಲ್ಗೊಂಡಿದ್ದರು.