ಗ್ರಾಪಂಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು

| Published : Oct 17 2024, 01:32 AM IST

ಸಾರಾಂಶ

ಇಡೀ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಮಹತ್ವ ಪಡೆದುಕೊಂಡಿದೆ. ಗಾಂಧೀಜಿ ಅವರು ಶ್ರಮದಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರುನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶದಲ್ಲಿ ಹಸಿ- ಒಣ ಕಸವನ್ನು ವಿಂಗಡಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆಯ ಕನಸು ನನಸಾಗಬೇಕಾದರೆ ಗ್ರಾಪಂಗಳು ಪರಿಣಾಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.ತಾಲೂಕಿನ ನಾಗವಾಲ ಗ್ರಾಮದಲ್ಲಿ ಹಸಿರುದಳ, ಆಶ್ರಯ ಹಸ್ತ ಟ್ರಸ್ಟ್ ಸಹಯೋಗದಲ್ಲಿ ಸುಸ್ಥಿರ ಕಸ ನಿರ್ವಹಣಾ ಘಟಕ ಹಾಗೂ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಇಡೀ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಮಹತ್ವ ಪಡೆದುಕೊಂಡಿದೆ. ಗಾಂಧೀಜಿ ಅವರು ಶ್ರಮದಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕಸಪೊರಕೆ ಹಿಡಿದು ಸ್ಚಚ್ಛಗೊಳಿಸಿ ಸ್ವಚ್ಛ ಭಾರತ್ ಆಂದೋಲನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡಿದರು. ಈಗ ಹಳ್ಳಿಗಳಲ್ಲೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದರು.ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುವ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಬೇಕು. ವಿದ್ಯಾರ್ಥಿಗಳ ನೆರವಿನಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಬೇಕು. ಹಸಿಕಸದಿಂದ ಎರೆಹುಳು, ಕಾಂಪೋಸ್ಟ್ ಮೊದಲಾದ ವಸ್ತು ತಯಾರಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆಮಾಡಿಕೊಂಡು ಅನೇಕ ರೀತಿಯ ಸ್ಥಳೀಯ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಬಹುದು. ಹಾಗಾಗಿ, ನಿರಂತರವಾಗಿ ತರಬೇತಿ ನೀಡಬೇಕು ಎಂದು ಹೇಳಿದರು. ನಮ್ಮ ಮನೆಯೊಂದನ್ನು ಸ್ವಚ್ಛವಾಗಿಟ್ಟರೆ ಪ್ರಯೋಜನವಾಗಲ್ಲ. ನಮ್ಮ ಬೀದಿ, ಊರನ್ನು ಸ್ವಚ್ಛವಾಗಿರಿಸಿದರೆ ಆರೋಗ್ಯ ಸಮಾಜವಾಗಲಿದೆ. ಮಕ್ಕಳು ಆರೋಗ್ಯಕರವಾಗಿದ್ದು ಉತ್ತಮ ವ್ಯಕ್ತಿತ್ವ, ನಾಯಕತ್ವವನ್ನು ಹೊಂದಲು ಸಹಕಾರಿಯಾಗಲಿದೆ. ಭವಿಷ್ಯದ ನಾಯಕತ್ವ ರೂಪುಗೊಳ್ಳುವುದು ಹಳ್ಳಿಯ ಕೆಲಸದಿಂದಲೇ ಎನ್ನುವುದನ್ನು ಮರೆಯಬಾರದು ಎಂದು ಅವರು ಹೇಳಿದರು.ಗ್ರಾಪಂಗಳಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಅನುದಾನ ಹೊರತುಪಡಿಸಿದರೆ ಜಿಲ್ಲಾ, ತಾಲೂಕು, ರಾಜ್ಯ ಸರ್ಕಾರದಿಂದ ಬರುವ ಅನುದಾನ ಸ್ಥಗಿತಗೊಂಡಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಳಸಿಕೊಳ್ಳಬೇಕು. ಶಾಲಾ, ಅಂಗನವಾಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮನ್ರೇಗಾ ಅನುದಾನ ಶಾಶ್ವತವಾಗಿ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಯೋಜನೆ ಅನುದಾನ ಬಾರದಿದ್ದರೆ ಕುಡಿಯುವ ನೀರು ಕೊಡುವುದಕ್ಕೂ ಕಷ್ಟವಾಗಲಿದೆ. ಹಾಗಾಗಿ, ತಮ್ಮ ಪಂಚಾಯಿತಿ ವ್ಯಾಪ್ತಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಒಪ್ಪಿಗೆ ಪಡೆಯಬೇಕು ಎಂದು ಅವರು ಕಿವಿಮಾತು ಹೇಳಿದರು.ನಮಗೆ ಪಂಚಾಯಿತಿ ಮಟ್ಟದಿಂದಲೂ ಸಾಕಷ್ಟು ದೂರುಗಳು, ಸಮಸ್ಯೆಗಳು ಬರುತ್ತವೆ. ಗ್ರಾಪಂ ಸದಸ್ಯರು ಒಟ್ಟಾಗಿ ಬಡವರ ಕೆಲಸ ಮಾಡಬೇಕು. ಸೇವಾ ಮನೋಭಾವ ರೂಪಿಸಿಕೊಳ್ಳಬೇಕು. ಜಿಪಂ ಸಿಇಒ ಕೆ.ಎಂ.ಗಾಯತ್ರಿ ಅವರು ಎಲ್ಲದಕ್ಕೂ ಸ್ಪಂದಿಸುತ್ತಾರೆ. ಯಾವುದೇ ಕೆಲಸ ಹೇಳಿದರೂ ತಕ್ಷಣಕ್ಕೆ ಸ್ಪಂದಿಸಿ ಒಪ್ಪಿಗೆ ಕೊಡುತ್ತಾರೆ. ಇಂತಹ ಅಧಿಕಾರಿಗಳು ಸಿಗುವುದು ಕಷ್ಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ಇದ್ದ ಜಮೀನನ್ನು ಮಾರಾಟ ಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಮದುವೆ ಮಾಡಲು ಒಂದು ಎಕರೆಗೆ 5 ರಿಂದ 10 ಲಕ್ಷಕ್ಕೆ ಮಾರಿಕೊಂಡಿದ್ದಾರೆ. ಈಗ ಒಂದು ಲಕ್ಷಕ್ಕೆ ಬೆಲೆ ಬಾಳುತ್ತದೆ ಅಂತ ಹೇಳಿದರೆ ಏನು ಪ್ರಯೋಜನ. ಮಾರಾಟ ಮಾಡದೆ ಉಳಿಸಿಕೊಂಡಿದ್ದರೆ ಇಂದು ಬೆಲೆಸಿಗುತ್ತದೆ. ನನ್ನ ಮಕ್ಕಳಿಗೆ ಸರಳವಾಗಿ ಮದುವೆ ಮಾಡಿದೆ. ಇಂದು ಕೆಲವರು ಜಮೀನು ಮಾರಿ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಎಷ್ಟು ಹೇಳಿದರೂ ಕೆಲವರು ಕೇಳುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ, ತಾಪಂ ಇಒ ಸಿ. ಕೃಷ್ಣ, ನಾಗವಾಲ ಗ್ರಾಪಂ ಅಧ್ಯಕ್ಷೆ ಕಾಮಾಕ್ಷಮ್ಮ ಬಸವನಾಯಕ, ಮಾಜಿ ಅಧ್ಯಕ್ಷ ಆರ್. ನರೇಂದ್ರ, ಆಶ್ರಯ ಹಸ್ತ ಟ್ರಸ್ಟ್ ನಿರ್ದೇಶಕ ಎನ್.ಕೆ. ಶರ್ಮ, ಹಸಿರು ದಳ ಸಂಸ್ಥೆ ನಿರ್ದೇಶಕ ನಳಿನಿ ಶೇಖರ್ ಇದ್ದರು.