ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮುಂದಿನ ವರ್ಷ ಫೆ.೪ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಗುತ್ತಿದ್ದು, ರಾಜ್ಯದ ಇತಿಹಾಸ ಪುಟದಲ್ಲಿಯೇ ಅಚ್ಚಳಿಯದೇ ಇರುವಂತೆ ಅದ್ಭುತವಾಗಿ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.ಪಟ್ಟಣದ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಮಠಾಧೀಶರೊಂದಿಗೆ ಸಮಾಲೋಚನೆ ಮಾಡಿ ಕ್ರಾಂತಿವೀರ ಬ್ರಿಗೇಡ್‌ಗೆ ಮಾರ್ಗದರ್ಶಿ ಮಂಡಳಿ ರಚಿತವಾಗಿದೆ. ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರಲಿದೆ. ಬ್ರಿಗೇಡ್ ಉದ್ಘಾಟನೆ ಅದ್ಭುತವಾಗಿರಲಿದೆ. ಹಿಂದು ಧರ್ಮ, ಹಿಂದುತ್ವದ ವಿಷಯ ಬಂದಾಗ ಯಾರಿಗೂ ಸೊಪ್ಪು ಹಾಕುವುದಿಲ್ಲ. ಕ್ರಾಂತಿವೀರ ಬ್ರಿಗೇಡ್ ಹಿಂದು ಧರ್ಮ, ಹಿಂದುತ್ವ ರಕ್ಷಣೆಗಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬಹುದು ಎಂದು ಮನವಿ ಮಾಡಿದರು.
ಕ್ರಾಂತಿವೀರ ಬ್ರಿಗೇಡ್ ಅಧ್ಯಕ್ಷ ಮಕಾನಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮದ ರಕ್ಷಣೆ, ಹಿಂದು ಸಮಾಜಕ್ಕೆ ತೊಂದರೆಯಾದರೆ ಅಲ್ಲಿ ಧ್ವನಿ ಎತ್ತುವುದು, ಹಿಂದುಳಿದ ದಲಿತ ಮಕ್ಕಳ ಅಭಿವೃದ್ಧಿ ಸೇರಿ ವಿವಿಧ ಉದ್ದೇಶಗಳೊಂದಿಗೆ ಉತ್ತರ ಕರ್ನಾಟಕದ ಎಲ್ಲ ಮಠಾಧೀಶರು ಸಮಾಲೋಚನೆ ಮಾಡಿದ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವಕ್ಕೆ ಬಂದಿದೆ. ಈ ಬ್ರಿಗೇಡ್ ಅನ್ನು ೨೦೨೫, ಫೆ.೪ ರಂದು ಕ್ರಾಂತಿಪುರುಷ ವಿಶ್ವಗುರು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.೧೦೦೮ ಮಹಾತ್ಮರ ಪಾದಪೂಜೆ ನೆರವೇರಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಾತ್ಯಾತೀತವಾದಿ, ಪಕ್ಷಾತೀತವಾಗಿ ಭಾಗವಹಿಸಬೇಕು. ನಾವು ಯಾವುದೇ ರಾಜಕೀಯ ಮಾಡದೇ ಕೇವಲ ಧರ್ಮದ ರಕ್ಷಣೆ ಮಾಡುವುದೇ ನಮ್ಮ ಉದ್ದೇಶ. ಸಮಾಜದಲ್ಲಿರುವ ಒಡೆಯರ, ಪೂಜಾರಿ, ದೇವಸ್ಥಾನದ ಅರ್ಚಕರ ಮಕ್ಕಳಿಗೆ ಪೂಜಾ ವಿಧಿ-ವಿಧಾನ ಕಲಿಸಬೇಕೆಂಬ ಉದ್ದೇಶದಿಂದ ಪಾಠಶಾಲೆಯೊಂದನ್ನು ನಮ್ಮ ಬ್ರಿಗೇಡ್‌ದಿಂದ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಹಿಂದು ಸಮಾಜದ ಮಠ-ಮಂದಿರಗಳ, ರೈತರ ಆಸ್ತಿ ವಕ್ಫ್ ಮಂಡಳಿಗೆ ಹೋದರೆ ಹೋರಾಟ ಮಾಡಲಾಗುವುದು. ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ಬೀರಪ್ಪ ದೇವಸ್ಥಾನದ ಆಸ್ತಿಯಲ್ಲಿ ವಕ್ಫ್ ಬಂದಾಗ ಕೂಡಲೇ ನಾವು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕನಕದಾಸ ಜಯಂತಿಯೊಳಗೆ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದಾಗ ಕೂಡಲೇ ೨೦ ನಿಮಿಷದಲ್ಲಿ ಜಿಲ್ಲಾಧಿಕಾರಿಗಳು ಇದನ್ನು ಸರಿಪಡಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಕೌಲಗುಪ್ಪಿಯ ಅಮರೇಶ್ವರ ಮಹಾರಾಜರು, ವರ್ಚಗಲ್‌ದ ನಿತ್ಯಾನಂದ ಸ್ವಾಮೀಜಿ, ಗದಗದ ಶಿವಕುಮಾರ ಸ್ವಾಮೀಜಿ, ಜಮಖಂಡಿಯ ಪ್ರಭು ಸ್ವಾಮೀಜಿ, ಭತಗುಣಕಿಯ ಮಹಾರಾಜರು, ಮದಗೂಂಡೇಶ್ವರ ಸ್ವಾಮೀಜಿ, ಬಿಳಿಆನಿ ಸಿದ್ದಮಹಾರಾಜರು, ಕೆಂಚರಾಯ ಮಹಾರಾಜರು, ಲಾಯಪ್ಪ ಪೂಜಾರಿ, ಅಭಿನವ ಸಿದ್ದಾನಂದ, ಮಾಳಪ್ಪ, ಪರಮಾನಂದ, ರಾಜಶೇಖರ ಯರನಾಳ, ಬಸವರಾಜ ಬಾಳಿಕಾಯಿ, ಈರನಗೌಡ ಹಳೆಗೌಡರ, ಗೋವಿಂದ ಕೊಪ್ಪ, ಮಲ್ಲಿಕಾರ್ಜುನ ಒಡೆಯರ, ಶಾಂತಕುಮಾರ ಚಳಕೇರಿ, ಅಂಬರೀಶ ಕಾಮನಕೇರಿ, ಅಶೋಕ ಒಡೆಯರ, ಕಾಶೀನಾಥ ಚನ್ನವೀರ, ಸಿದ್ದಪ್ಪ ಮುದ್ದಣ್ಣನವರ, ಸುನೀಲ ಬಾಗೇವಾಡಿ, ಸಿದ್ರಾಮಪ್ಪ ಹತ್ತಿ, ಶಿಲ್ಪಾ ಕುದರಗೊಂಡ ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))