ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರು
ತಾಲೂಕಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಗಳಿಂದ ಹೆಚ್ಚಿನ ಸಾಲ ಪಡೆದಿಲ್ಲ. ಇದರಿಂದ ತಾಲೂಕಿನಲ್ಲಿ ಯಾವುದೇ ಕಿರುಕುಳ ಪ್ರಕರಣಗಳು ದಾಖಲಾಗಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಕಾರೇಹಳ್ಳಿ ಗ್ರಾಮದಲ್ಲಿ ಬ್ಲಾಕ್ 2 ನಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಕಳೆದ ಅನೇಕ ವರ್ಷಗಳಿಂದ ಎಚ್ ಡಿ ಸಿ ಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಂಘಗಳ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ ಇದರಿಂದ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಗಳಲ್ಲಿ ಹೆಚ್ಚಿನ ಸಾಲವನ್ನು ಸದಸ್ಯರು ಪಡೆದಿಲ್ಲ. ಆದ್ದರಿಂದ ತಾಲೂಕಿನಲ್ಲಿ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಯಾವುದೇ ಕಿರುಕುಳ ಪ್ರಕರಣಗಳು ವರದಿಯಾಗಿಲ್ಲ. ಚಾಮರಾಜನಗರ ಸೇರಿದಂತೆ ಕೆಲವು ಜಿಲ್ಲಾ ವ್ಯಾಪ್ತಿಗಳಲ್ಲಿ ಈ ಬಗ್ಗೆ ಕೆಲವು ದೂರುಗಳು ಬಂದಿವೆ ಆದರೆ ನಮ್ಮ ತಾಲೂಕಿನಲ್ಲಿ ಅಂತಹ ಸಮಸ್ಯೆ ಉದ್ಭವಿಸಿಲ್ಲ ಎಂದರು.ತಾಲೂಕಿನ ರೈತರನ್ನು ಕಲ್ಪವೃಕ್ಷ ಕಾಮಧೇನು ಕೈ ಹಿಡಿದಿದ್ದು ಇದರಿಂದ ಆರ್ಥಿಕವಾಗಿ ರೈತರು ಸದೃಢರಾಗಿದ್ದಾರೆ. ಅತಿ ಹೆಚ್ಚು ಹಾಲು ಶೇಖರಣೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ಮೊದಲ ಸ್ಥಾನದಲ್ಲಿದ್ದರೆ, ಹಾಸನ ಹಾಲು ಒಕ್ಕೂಟ 2ನೇ ಸ್ಥಾನದಲ್ಲಿದೆ. ಹಾಸನ ಹಾಲು ಒಕ್ಕೂಟದಿಂದ ರೈತರಿಗೆ ಪ್ರತಿ ಲೀಟರ್ ಗೆ 30 ರು. ನೀಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರದ 5 ರು. ಪ್ರೋತ್ಸಾಹಧನ ಸಿಗುತ್ತಿದೆ ಎಂದರು. ಈಗಾಗಲೇ ಹಲವು ವರ್ಷಗಳಿಂದ ಕಾರೇಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದ್ದು ಆದರೆ ಕಾರೇಹಳ್ಳಿ ಸ್ಟೇಷನ್ ನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ತೆರೆಯುವಂತೆ ಈ ಭಾಗದ ರೈತರು ಒತ್ತಾಯಿಸುತ್ತಿದ್ದರು ಅವರ ಮನವಿಯಂತೆ ನೂತನ ಡೈರಿಯನ್ನು ತೆರೆಯಲಾಗಿದೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ಸಂಘಕ್ಕೆ ನಿವೇಶನ ಮಂಜೂರು ಮಾಡುವ ಜೊತೆಗೆ ಕೆಎಂಎಫ್ ಹಾಗೂ ಹಾಸನ ಹಾಲು ಒಕ್ಕೂಟದ ವತಿಯಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಕಾರೇಹಳ್ಳಿ ಗ್ರಾಮವು ಜಿಲ್ಲೆ ಹಾಗೂ ತಾಲೂಕಿನ ಗಡಿ ಭಾಗದಲ್ಲಿದ್ದು ಅಭಿವೃದ್ಧಿಗೆ ಆದ್ಯತೆ ನೀಡುವ ದೃಷ್ಟಿಯಿಂದ ರಸ್ತೆ ಕುಡಿಯುವ ನೀರು ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ತಿಳಿಸಿದರು. ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ ಟಿ ನಟೇಶ್ ಹಾಗೂ ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ ಎ ಸತೀಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ನಾಗೇಂದ್ರ, ಯುವ ಮುಖಂಡ ಜೈದೀಪ್ ಗೌಡ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಸುಪ್ರಿಯ ನಂದೀಶ್, ಸಂಘದ ಅಧ್ಯಕ್ಷೆ ವಸಂತ ರಾಮೇಗೌಡ, ನಿರ್ದೇಶಕರುಗಳಾದ ಗಿರಿಜಮ್ಮ ಸೋಮಶೇಖರ್, ಲಕ್ಷ್ಮಮ್ಮ ರಂಗೇಗೌಡ, ಪಾಲಾಕ್ಷಮ್ಮ ಮಲ್ಲೇಶ್, ಭಾರತಿ ವೆಂಕಟೇಶ್, ತನುಜ ಉಮೇಶ್, ರತ್ನಮ್ಮ ಮಂಜೇಗೌಡ, ಸರೋಜಮ್ಮ ಕೃಷ್ಣಮೂರ್ತಿ, ಫಾಜಿದ ಬಾನು ಆಯುಬ್ ಸಾಬ್ , ಸುನಂದಮ್ಮ ವರದಾಚಾರ್, ಕಲಾವತಿ ದೇವರಾಜ್, ಕೃಷಿ ಪತ್ತಿನ ಉಪಾಧ್ಯಕ್ಷ ದೇವರಾಜ್, ಮುಖಂಡರುಗಳಾದ ಜಯರಾಮಣ್ಣ, ಲಕ್ಷ್ಮಣ್, ರಾಮಚಂದ್ರು, ನಟೇಶ್, ಬಸವೇಗೌಡ, ಸೊಸೈಟಿ ಜಗದೀಶ್, ನಾಗೇನಹಳ್ಳಿ ವಿಜಯ್ ಕುಮಾರ್, ಅರ್ಚಕ ಕಿರಣ್, ಸೇರಿದಂತೆ ಇತರರು ಹಾಜರಿದ್ದರು.ಪೋಟೋ17ಎಚ್ಎಸ್ಎನ್12 :
ಬಾಗೂರು ಹೋಬಳಿಯ ಕಾರೇಹಳ್ಳಿ ಗ್ರಾಮದ ಬ್ಲಾಕ್ 2ರಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ರೈತರಿಂದ ಹಾಲು ಖರೀದಿಸುವ ಮೂಲಕ ಶಾಸಕ ಸಿ.ಎನ್ .ಬಾಲಕೃಷ್ಣ ಚಾಲನೆ ನೀಡಿದರು.