ಶ್ರೀರಾಮ ಮಂದಿರ ಉದ್ಘಾಟನೆ. ಜ.1ರಿಂದ ಸಂಪರ್ಕ ಅಭಿಯಾನ

| Published : Dec 29 2023, 01:30 AM IST

ಶ್ರೀರಾಮ ಮಂದಿರ ಉದ್ಘಾಟನೆ. ಜ.1ರಿಂದ ಸಂಪರ್ಕ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಹುವರ್ಷಗಳಿಂದ ಭಾರೀ ಹೋರಾಟ, ಬಲಿದಾನಗಳ ಕಂಡ ಅಯೋಧ್ಯೆ ಶ್ರೀ ರಾಮ ಮಂದಿರ ವಿವಾದ ಕಡೆಗೂ ಅಂತಿಮಗೊಂಡು, ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಹತ್ತಿರವಾಗಿದೆ. ಈ ಹಿನ್ನೆಲೆ ಜನವರಿ 1ರಿಂದ 15ರವರೆಗೆ ವಿಶ್ವ ಹಿಂದೂ ಪರಿಷತ್ತು ಪರಿವಾರದ ಎಲ್ಲ ಸಂಘಟನೆಗಳು ಹಾಗೂ ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನ ನಡೆಯಲಿದೆ.

- ಪವಿತ್ರ ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ, ನಿವೇದನಾ ಪತ್ರ ಹಂಚಲು ಯೋಜನೆ

- ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಣೆಗೆ ನೇರ ಪ್ರಸಾರಕ್ಕೆ ವ್ಯವಸ್ಥೆ

- ಸೂರ್ಯಾಸ್ತ ನಂತರ ಪ್ರತಿ ಮನೆ ಮುಂದೆ ಕನಿಷ್ಠ ಐದು ದೀಪಗಳ ಬೆಳಗಿಸಬೇಕು - ಅಯೋಧ್ಯೆಯ ಕಡೆ ಮುಖಮಾಡಿ, ಆರತಿ ಬೆಳಗಿ, ದೀಪೋತ್ಸವದಲ್ಲಿ ಪಾಲ್ಗೊಳ್ಳಬೇಕು - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆ ಜನವರಿ 1ರಿಂದ 15ರವರೆಗೆ ವಿಶ್ವ ಹಿಂದೂ ಪರಿಷತ್ತು ಪರಿವಾರದ ಎಲ್ಲ ಸಂಘಟನೆಗಳು ಹಾಗೂ ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನ ನಡೆಯಲಿದೆ. ಈ ಅಭಿಯಾನದ ಮೂಲಕ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ ಎಂದು ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹ ಹಾಗೂ ರಾಮಮಂದಿರ ಸಂಯೋಜಕ ಪಟ್ಟಾಭಿರಾಮ್‌ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಂಪರ್ಕ ಅಭಿಯಾನದಲ್ಲಿ ಕಾರ್ಯಕರ್ತರು ನಗರದ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೆ ಈ ಪ್ರಸಾದವನ್ನು ತಲುಪಿಸಲಿದ್ದಾರೆ. ಜ.22ರಂದು ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಂದು ಸಂಜೆ ಸೂರ್ಯಾಸ್ತದ ನಂತರ ಪ್ರತಿ ಮನೆ ಮುಂದೆ ಕನಿಷ್ಠ ಐದು ದೀಪಗಳನ್ನು ಬೆಳಗಿ. ಅಯೋಧ್ಯೆಯ ಕಡೆ ಮುಖಮಾಡಿ, ಆರತಿಯನ್ನು ಬೆಳಗಿ, ದೀಪೋತ್ಸವದಲ್ಲಿ ಪಾಲ್ಗೊಳ್ಳುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹಿಂದೂ ಸಮಾಜಕ್ಕೆ ಕರೆ ನೀಡಿದೆ ಎಂದು ವಿವರಿಸಿದರು.

ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಣೆಗೆ ಗ್ರಾಮದ ದೇವಸ್ಥಾನದಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಲಿಗೆ ಬರುವ ಭಕ್ತರಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮಾಡಬೇಕು ಎಂದು ಟ್ರಸ್ಟ್‌ ತಿಳಿಸಿದೆ. ಜ.1ರಿಂದ ಮನೆ ಮನೆಗೆ ನಿವೇದನಾ ಪತ್ರಗಳನ್ನು ತಲುಪಿಸಲು 50 ಮನೆಗೆ 4 ಜನರ ತಂಡದಂತೆ ಪ್ರಾಂತ್ಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ‌ ಎಂದು ಮಾಹಿತಿ ನೀಡಿದರು.

ಶ್ರೀ ರಾಮ ಮಂದಿರ ಉದ್ಘಾಟನೆ ಸಂಭ್ರಮ ಸಂತೊಷವಾಗಿ ಇರಬೇಕು, ಅತಿರೇಕ ಇರಬಾರದು. ಎಲ್ಲೂ ಮೆರವಣಿಗೆ ಮಾಡುವ ಆಗಿಲ್ಲ. ಪಟಾಕಿ ಹೊಡೆಯುವ ಆಗಿಲ್ಲ. ರಾಜಕಾರಣಿಗಳು ಹೇಳಿಕೆ ಕೊಡಬಾರದು ಎಂದು ಸೂಚನೆಯನ್ನು ನೀಡಲಾಗಿದೆ. ಹೀಗಾಗಿ, ಎಲ್ಲರೂ ಈ ಸಂಭ್ರಮವನ್ನು ಹಬ್ಬದಂತೆ ಆಚರಣೆ ಮಾಡಬೇಕು. ಅಹಿತಕರ ಘಟನೆಗಳಿಗೆ ಯಾರು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.

ಶ್ರೀರಾಮ ಟಿಕೆಟ್‌:

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 7 ಸಾವಿರ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಶಿವಮೊಗ್ಗದಲ್ಲಿ ಬೆಕ್ಕಿನ ಕಲ್ಮಠ, ಕೂಡ್ಲಿ ಮಠಾಧಿಶರಿಗೆ ಹಾಗೂ ಜಡೆ ಮಠದ ಸ್ವಾಮೀಜಿ ಸೇರಿದಂತೆ ಕೆಲವರಿಗೆ ಮಾತ್ರ ಆಹ್ವಾನ ಬಂದಿದೆ. ಉದ್ಘಾಟನೆ ಬಳಿಕ ಫೆ.19ರಂದು ಶ್ರೀರಾಮ ಮಂದಿರವನ್ನು ವೀಕ್ಷಣೆ ಮಾಡಲು ಕರ್ನಾಟಕದಿಂದ 3500 ಮಂದಿಗೆ ಅವಕಾಶ ಇದೆ ಎನ್ನಲಾಗುತ್ತಿದೆ. ಇದಕ್ಕೆ ನೋಂದಣಿಯೂ ಕಾರ್ಯವೂ ನಡೆಯಲಿದೆ. ಅಯೋಧ್ಯೆಗೆ ತೆರಳುವ ಭಕ್ತರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಭಕ್ತರು ಬೇರೆ ರೈಲುಗಳಲ್ಲಿ, ವಿಮಾನದಲ್ಲೂ ಬರಲು ಅವಕಾಶ ಇದೆ. ಆದರೆ, ಅವರು ಶ್ರೀರಾಮ ಟಿಕೆಟ್‌ ಹೊಂದಿರಬೇಕು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ತು ವಿಭಾಗ ಸಹ ಕಾರ್ಯದರ್ಶಿ, ರಾಮ ಮಂದಿರದ ವಿಭಾಗ ಸಂಚಾಲಕ್‌ ಚಂದ್ರಶೇಖರ್‌, ವಿಶ್ವ ಹಿಂದು ಪರಿಷದ್‌ ಜಿಲ್ಲಾಧ್ಯಕ್ಷ ಜೆ.ಆರ್‌. ವಾಸುದೇವ್‌ ಇದ್ದರು.

- - - ಬಾಕ್ಸ್‌ ರಾಮಜನ್ಮಭೂಮಿ ಇತಿಹಾಸ ನಿನ್ನೆ ಮೊನ್ನೆದಲ್ಲ. ಆಗಿನ ಕಾಲದಲ್ಲೇ ಅನೇಕ ಬಾರಿ ರಾಮಮಂದಿರ ಕಟ್ಟಿದ್ದನ್ನು ದ್ವಂಸ ಮಾಡಲಾಗಿತ್ತು. ಮತ್ತೆ ಮತ್ತೆ ರಾಮಮಂದಿರ ಕಟ್ಟಿದರೂ ಅದನ್ನು ದ್ವಂಸ ಮಾಡಲಾಗಿತ್ತು ಎಂದು ರಾಮ ಮಂದಿರ ಸಂಯೋಜಕ ಪಟ್ಟಾಭಿರಾಮ್‌ ಹೇಳಿದರು.

ಆಗಿನಿಂದ ಇಲ್ಲಿಯವರೆಗೆ ಸುಮಾರು 45 ಪೀಳಿಗೆಗೆ ಈ ಹೋರಾಟ ಮುಂದುವರಿದುಕೊಂಡು ಬಂದಿದೆ. ಇದಕ್ಕಾಗಿ ಆನೇಕರು ಪ್ರಾಣ ಕಳೆದುಕೊಂಡಿದ್ದಾರೆ, ಮನೆ ಮಠ ಕಳೆದುಕೊಂಡಿದ್ದಾರೆ, ಕುಟುಂಬಗಳೇ ನಾಶವಾಗಿವೆ. ಅಲ್ಲಿಂದ ಇಲ್ಲಿಯವರಗೆ ಹೋರಾಟ ಮುಂದುವರಿದುಕೊಂಡು ಬಂದಿದೆ. 1985ರಲ್ಲಿ ಸಾಧು ಸಂತರು, ವಿಚಾರವಂತರು, ಹೋರಾಟಗಾರರು ಅಯೋಧ್ಯೆ ಹೋರಾಟಕ್ಕೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಅದರ ಪರಿಣಾಮ ಈಗ ಅಯೋಧ್ಯೆ ರಾಮಮಂದಿಕ್ಕೆ ಭೂಮಿಪೂಜೆ ನಡೆದು, ಈಗ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ತಿಳಿಸಿದರು. - - -

-28ಎಸ್ಎಂಜಿಕೆಪಿ05:

ಶಿವಮೊಗ್ಗದ ಮಥುರಾ ಪ್ಯಾರಡೇಸ್‌ನಲ್ಲಿ ಗುರುವಾರ ರಾಮಮಂದಿರ ಸಂಯೋಜಕ ಪಟ್ಟಾಭಿರಾಮ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚಂದ್ರಶೇಖರ್‌, ಜೆ.ಆರ್‌.ವಾಸುದೇವ್‌ ಇದ್ದರು.

- - -

- ಅಯೋಧ್ಯ (ಸಾಂದರ್ಭಿಕ ಚಿತ್ರ.)